Advertisement

ಅರಣ್ಯ ಇಲಾಖೆಯಿಂದ 35 ಸಾವಿರ ಗಿಡಗಳ ವ್ಯವಸ್ಥೆ

12:09 AM May 26, 2020 | Sriram |

ಪುತ್ತೂರು: ಪುತ್ತೂರು ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಗೆ ಸಂಬಂಧಿಸಿ ಈ ಬಾರಿ ರಿಯಾಯಿತಿ ದರದಲ್ಲಿ ವಿತರಣೆ ಉದ್ದೇಶದಿಂದ ಇಲಾಖೆಯು ಮುಕ್ವೆ ನರ್ಸರಿಯಲ್ಲಿ ಒಟ್ಟು 35 ಸಾವಿರ ಸಸಿಗಳನ್ನು ಬೆಳೆಸಿದೆ.

Advertisement

ಜತೆಗೆ 23 ಹೆಕ್ಟೇರ್‌ ನೆಡು ತೋಪುಗಳಲ್ಲಿ ಸಸಿಗಳನ್ನು ನೆಡಲು 9,200 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ.

ವಿವಿಧ ಜಾತಿಯ ಗಿಡಗಳು
ಸಾರ್ವಜನಿಕರಿಗೆ ವಿತರಣೆ ಮಾಡುವ ಸಸಿಗಳಾದ ಸಾಗುವಾನಿ, ಮಹಾಗನಿ, ಬೀಟೆ, ಕಹಿಬೇವು, ಸೀಮರೂಬ, ಪೇರಳೆ, ಹಲಸು, ಹೆಬ್ಬಲಸು, ಕಾಡು ಬಾದಾಮಿ, ಪುನರ್‌ಪುಳಿ, ಶ್ರೀಗಂಧ, ಸಂಪಿಗೆ, ರಕ್ತಚಂದನ, ಸೀತಾಫ‌ಲ, ಮಾವು, ಕೋಳಿಚುಟ್ಟು, ನೇರಳೆ, ಬೇಂಗ, ಅಶೋಕ, ಕಕ್ವೆ, ರೆಂಜ, ಕಿರಾಲ್‌ಬೋಗಿ, ನೆಲ್ಲಿ, ನುಗ್ಗೆ, ಬಿಲ್ವಪತ್ರೆ, ಹೆಬ್ಬೇವು, ತಬೋಬಿಯ, ಬನ್ನಿ, ಬಸವನಪಾದ ಸಸಿಗಳನ್ನು ಬೆಳಸಲಾಗಿದ್ದು, ಇವುಗಳ ಪೈಕಿ 6×9ರ ಚೀಲಕ್ಕೆ ರೂ. 1 ಮತ್ತು 8×12 ಚೀಲ ರೂ. 3 ದರ ನಿಗದಿ ಪಡಿಸಲಾಗಿದೆ. ಆಸಕ್ತರು ಕಚೇರಿಗೆ ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆದುಕೊಳ್ಳಬಹುದು.

ಗೇರು ಸಸಿಯೂ ಲಭ್ಯ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪುತ್ತೂರು ತಾಲೂಕು ವ್ಯಾಪ್ತಿಯ ವಿವಿಧ ಗ್ರಾ.ಪಂ ವ್ಯಾಪ್ತಿಯ ಫ‌ಲಾನುಭವಿಗಳಿಗೆ 3 ಸಾವಿರ ಕಸಿ ಗೇರು ಗಿಡ ಮತ್ತು ವಿವಿಧ ಅರಣ್ಯ ಜಾತಿಯ ಗಿಡಗಳು ಲಭ್ಯವಿವೆ. ಆಸಕ್ತ ಫ‌ಲಾನುಭವಿಗಳಿಗೆ ಉಚಿತವಾಗಿ ಗಿಡಗಳನ್ನು ನೀಡುವುದರ ಜೊತೆಗೆ ಗಿಡ ನಾಟಿ ಮಾಡುವುದಕ್ಕೆ ಕೂಲಿ ಪಾವತಿ ಕೂಡ ಯೋಜನೆಯಡಿ ಇಲಾಖಾ ವತಿಯಿಂದ ಪಾವತಿ ಮಾಡಲಾಗುತ್ತದೆ.

ನೆಡುತೋಪಿಗಾಗಿ 9,200 ಮಿಶ್ರ ಜಾತಿ ಸಸಿಗಳು
ಸಾಮಾಜಿಕ ವಲಯ ಅರಣ್ಯ ಇಲಾಖೆಗೆ ಒಳಪಟ್ಟು ತಾಲೂಕಿನಲ್ಲಿ 23 ಹೆಕ್ಟೇರ್‌ ನೆಡುತೋಪುಗಳಿದ್ದು, ಪ್ರತಿ ಹೆಕ್ಟೇರ್‌ಗೆ 400 ಗಿಡಗಳಂತೆ 9,200 ಸಸಿಗಳನ್ನು ನೆಡುವ ನಿಟ್ಟಿನಲ್ಲಿ ನರ್ಸರಿಯಲ್ಲಿ ವಿವಿಧ ಜಾತಿಯ ಹಣ್ಣಿನ ಮತ್ತು ಮಿಶ್ರ ತಳಿಯ ಸಸಿಗಳನ್ನು ಬೆಳೆಸಲಾಗಿದೆ.

Advertisement

ಅಕೇಷಿಯ ಮತ್ತು ಗಾಳಿ ಸಸಿಗಳನ್ನು ಬಿಟ್ಟು ಉಳಿದೆಲ್ಲಾ ಜಾತಿಗಳ ಸಸಿಗಳನ್ನು ನೆಡಲಾಗುತ್ತದೆ. ಇಲಾಖಾ ವ್ಯಾಪ್ತಿಗೆ ಒಳಪಟ್ಟ ಬೇರಿಕೆ, ಬೀತಲಪು, ಪಾದೆ ಕಲ್ಲು, ಮುಡಪಿನಡ್ಕದ ಪಳಂಬೆ, ನಿಡ್ಪಳ್ಳಿ, ಬೊಳುವಾರು, ನೆಹರುನಗರ ರೈಲ್ವೇ ಲೈನ್‌ ಬದಿಯಲ್ಲಿ ಗಿಡಗಳನ್ನು ನೆಡಲಾಗುವುದು.

ಅರ್ಜಿ ಸಲ್ಲಿಸಿ ಗಿಡ ನೆಡಿ
ಕೂಲಿ ಪಾವತಿ ಯೋಜನೆಯಡಿ ಹೊಂಡ ತೋಡಿ ಗಿಡ ನೆಡುವುದು, ಮಣ್ಣಿನ ಅಗತೆ ಕೆಲಸ, ಗೊಬ್ಬರ ಹಾಕುವುದು. ಆಸಕ್ತ ಮತ್ತು ಅರ್ಹ ಫ‌ಲಾನುಭವಿಗಳು ಸಂಬಂಧಿಸಿದ ಗ್ರಾ.ಪಂಗಳಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿಯನ್ನು ನೋಂದಾಯಿಸಿಕೊಂಡು ಪೂರ್ಣ ವಿಳಾಸ ಮತ್ತು ಸ್ಥಳದ ವಿವರದೊಂದಿಗೆ (ಆರ್‌.ಟಿ.ಸಿ., ನಕ್ಷೆ ಪ್ರತಿ, ಸಣ್ಣ ರೈತ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆ ವಿವರ, ಆಧಾರ್‌ಕಾರ್ಡ್‌ ಪ್ರತಿ ಇತ್ಯಾದಿ) ಸಸಿ ಬೇಡಿಕೆ ವಿವರಗಳನ್ನು ದರ್ಬೆಯಲ್ಲಿರುವ ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳ ಕಚೇರಿಗೆ ನೀಡಬೇಕು. ಗಿಡಗಳನ್ನು ಇಲಾಖೆಯ ಮುಕ್ವೆ ನರ್ಸರಿಯಿಂದ ಪಡೆದುಕೊಳ್ಳಬಹುದು ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next