Advertisement

ಟಿಕ್‌ ಟಾಕ್‌ ನಿಷೇಧದ ಸುತ್ತಮುತ್ತ

09:47 AM May 13, 2019 | Team Udayavani |

ಆ ದಿನ ನನ್ನ ಗೆಳತಿಯೊಬ್ಬಳು ಚೆನ್ನಾಗಿ ಅಲಂಕಾರ ಮಾಡಿಕೊಂಡು ಬಂದಿದ್ದಳು. ಯಾವತ್ತಿಗಿಂತ ವಿಭಿನ್ನವಾಗಿ ಕಾಣುತ್ತಿದ್ದಳು. ಯಾವುದೋ ಕಾರ್ಯಕ್ರಮಕ್ಕೆ ಹೋಗಲು ತಯಾರಾಗಿದ್ದಾಳೆ ಎಂದುಕೊಂಡು ನಾನು ಅವಳ ಬಳಿ ಕೇಳಿಯೇ ಬಿಟ್ಟೆ. ಅದಕ್ಕೆ ಅವಳ ಉತ್ತರ ಹೀಗಿತ್ತು- “ಹಾಗೇನಿಲ್ಲ, ಇವತ್ತು ಟಿಕ್‌ಟಾಕ್‌ನಲ್ಲಿ ಒಂದು ಚೆನ್ನಾಗಿರೋ ವಿಡಿಯೋ ಮಾಡಿ ಹಾಕೋಣಾಂತ. ಹೀಗೇ ಚೆನ್ನಾಗಿ ಡ್ರೆಸ್‌ ಮಾಡಿ ಅಪ್ರೋಚ್‌ ಮಾಡಿದ್ರೆ ತುಂಬಾ ಲೈಕ್ಸ್‌ , ಕಮೆಂಟ್ಸ… ಬರ್ತದೆ ಕಣೇ’ ಅಂತ. ಅವಳ ಅವಸ್ಥೆ ನೋಡಿ ನಂಗೆ ಮರುಕವಾಯಿತು. ಮನುಷ್ಯ ತಾನು ನಾಲ್ಕು ಜನರ ಮುಂದೆ ಗುರುತಿಸಿಕೊಳ್ಳೋಕೆ ಏನೆಲ್ಲಾ ಕಸರತ್ತು ಮಾಡ್ತಾನೆ !

Advertisement

ಟಿಕ್‌ಟಾಕ್‌ ಅನ್ನೋದು ಚೀನಾ ದೇಶದ ಮೊಬೈಲ್ ಅಪ್ಲಿಕೇಶನ್‌. ಇದರ ಮೂಲಕ ನಾವು ನಮ್ಮ ವಿಡಿಯೋಗಳನ್ನು ಮಾಡಿ ಹಾಕಬಹುದು. ಎಡಿಟ್ ಮಾಡುವ ಅವಕಾಶವೂ ಇದರಲ್ಲಿರುತ್ತದೆ. ಆ ವಿಡೀಯೋಗೆ ತಕ್ಕಂತೆ ಹಾಡು, ಸಂಭಾಷಣೆಗಳನ್ನೂ ಹಾಕಬಹುದು. ನಮಗೆ ಬರುವ ಲೈಕ್‌, ಕಮೆಂಟ್ ಗಳ ಮೇಲೆ ನಮ್ಮ ಜನಪ್ರಿಯತೆ ನಿರ್ಧರಿತವಾಗುತ್ತದೆ. ನಮಗೆ ಇಷ್ಟವಾದಂಥ ವಿಡಿಯೋಗಳನ್ನು ನೋಡಬಹುದು. ಅದೆಷ್ಟೋ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳು ಈ ಆ್ಯಪ್‌ ಮೂಲಕ ಪರಿಚಯವಾದರು. ಕಾಲ, ಗಡಿ, ದೇಶವನ್ನು ಮೀರಿ ಕೋಟಿಗಟ್ಟಲೆ ಬಳಕೆದಾರರು ಈ ಆ್ಯಪ್‌ನ ಮೋಡಿಗೆ ಮರುಳಾಗಿದ್ದಾರೆ. ತಮ್ಮಲ್ಲಿರುವ ಕೌಶಲವನ್ನು ಹೊರಜಗತ್ತಿಗೆ ಪ್ರದರ್ಶಿಸಲು ಇದು ಕೆಲವರಿಗೆ ಸಹಕಾರಿಯಾದರೂ ಇನ್ನೊಂದು ಕಡೆ ದುರ್ಬಳಕೆಯೂ ಆಗುತ್ತಿದೆ. ಅದೆಷ್ಟೋ ಜನರು ಪ್ರಮುಖವಾಗಿ ಮಹಿಳೆಯರು ಇದರಿಂದಾಗಿ ಕೋರ್ಟಿನ ಮೆಟ್ಟಿಲೇರಿದ್ದೂ ಇದೆ. ಯುವಜನತೆಯ ಅಮೂಲ್ಯವಾದ ಸಮಯ ಇದರ ಮೂಲಕ ಹಾಳಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ಟಿಕ್‌ಟಾಕ್‌ ಆ್ಯಪ್‌ ಅಶ್ಲೀಲ ದೃಶ್ಯಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಅದಕ್ಕೆ ನಿಷೇಧಾಜ್ಞೆ ಹೇರಿತ್ತು. ಇದನ್ನು ಸುಪ್ರೀಂಕೋರ್ಟಿನ ಗಮನಕ್ಕೂ ತಂದು ಈ ಮೂಲಕ ಪ್ಲೇ ಸ್ಟೋರ್‌ ಮತ್ತು ಆ್ಯಪಲ… ಸ್ಟೋರ್‌ಗಳಿಂದ ಟಿಕ್‌ಟಾಕ್‌ನ್ನು ತೆಗೆದು ಹಾಕುವಂತೆ ಆದೇಶಿಸಿತ್ತು. ಯುವಜನತೆಯೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿರುವುದರಿಂದ ಈ ಆದೇಶ ಅವರ ಹೆತ್ತವರನ್ನು ನೆಮ್ಮದಿಯ ಉಸಿರು ಬಿಡುವಂತೆ ಮಾಡಿತ್ತು. ಆದರೆ ಕೋಟ್ ಹೇರಿದ್ದ ನಿಷೇಧಾಜ್ಞೆಯನ್ನು ಅದು ಹಿಂಪಡೆದಿದೆ.

ಟಿಕ್‌ಟಾಕ್‌ ನಿಷೇಧದಿಂದಾಗಿ ದಿನವೊಂದಕ್ಕೆ ಕೋಟಿಗಟ್ಟಲೆ ಇದನ್ನು ನಡೆಸುವ ಕಂಪೆನಿಗೆ ನಷ್ಟವುಂಟಾಗುತ್ತಿತ್ತು ಹಾಗೂ 250 ರಷ್ಟು ನೌಕರರು ತಮ್ಮ ಉದ್ಯೋಗ ನಷ್ಟವಾಗುವ ಭೀತಿಯಲ್ಲಿದ್ದರು. ಭಾರತದಲ್ಲೇ ಈ ಅಪ್ಲಿಕೇಶನ್‌ಗೆ ಅತೀ ಹೆಚ್ಚು ಬಳಕೆದಾರರಿದ್ದು ವಿದೇಶೀ ತಂತ್ರಜ್ಞಾನಕ್ಕೆ ಅತೀ ಹೆಚ್ಚಿನ ಮಾರುಕಟ್ಟೆಯನ್ನು ಒದಗಿಸುತ್ತ ಇದೆ.

ಕಾಲೇಜು ವಿದ್ಯಾರ್ಥಿಗಳಂತೂ ತಮ್ಮ ಸ್ನೇಹಿತರ ಜತೆಗೂಡಿ ವಿಡಿಯೋ ಮಾಡಿ ಹಾಕುವುದರಲ್ಲಿ ಆನಂದವನ್ನು ಪಡೆಯುತ್ತ ಇದ್ದಾರೆ. ಕ್ಲಾಸ್‌ಬಂಕ್‌ ಮಾಡಿ ವಿಡಿಯೋ ಮಾಡುವುದು ನೋಡಿದಾಗ ಇದು ಅದೆಷ್ಟು ಗೀಳಾಗಿ ಪರಿಣಮಿಸಿದೆ ಎನ್ನುವುದನ್ನು ಗಮನಿಸಬಹುದು.

Advertisement

ಪ್ರತಿಯೊಂದು ತಂತ್ರಜ್ಞಾನ, ಆ್ಯಪ್‌ಗ್ಳ ಜ್ಞಾನ, ಅರಿವು ನಮಗಿರಬೇಕು. ಅದು ಇರುವುದೂ ನಮ್ಮ ಬಳಕೆಗಾಗಿಯೇ. ಆದರೆ ಪ್ರತಿಯೊಂದಕ್ಕೆ ಮಿತಿ ಅನ್ನೋದು ಇರುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಪ್ರತಿಯೊಂದು ನಿಮಿಷವೂ ನಮಗೆ ಅಮೂಲ್ಯವಾದದ್ದು. ಸಾಧನೆ ಮಾಡಲು, ನಮ್ಮ ಕ್ರಿಯಾಶೀಲತೆಯನ್ನು ನಾಲ್ಕು ಜನರ ಮುಂದೆ ತೋರಿಸಲು ಬೇರೆ ಅನೇಕ ಮಾರ್ಗಗಳಿವೆ. ರಾತ್ರಿಯಿಡೀ ಕಣ್ಣಿಗೆ ಎಣ್ಣೆ ಬಿಟ್ಟು ತರಗತಿಗೆ ಹೋಗದೆ ಟಿಕ್‌ಟಾಕ್‌ನಲ್ಲಿ ಶಾಮೀಲಾಗುವ ನಾವೆಲ್ಲಾ ಒಂದು ಬಾರಿ ಇದರ ಬಾಧಕಗಳ ಬಗ್ಗೆ ಯೋಚಿಸಿ ನೋಡೋಣ. ಆಗ ನಾವೆಲ್ಲ ಮೊಬೈಲ… ಎಂಬ ಮಾಯಾಪರದೆಯಿಂದ ಹೊರಜಗತ್ತಿಗೆ ಬಂದು ನಿಜವಾದ ಜೀವನವನ್ನು ಅನುಭವಿಸುತ್ತೇವೆ.

ರಶ್ಮಿ ಯಾದವ್‌ ಕೆ. , ಪ್ರಥಮ ಪತ್ರಿಕೋದ್ಯಮ ವಿಭಾಗ ಎಸ್‌ಡಿಎಂ ಪದವಿ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next