Advertisement
ಭಾರತದಲ್ಲಿ ಹಿಂದೂ ದೇವಾಲಯಗಳ ನಿರ್ಮಾಣದ ಅತಿ ದೊಡ್ಡ ಆಂದೋಲನವನ್ನು ಆರಂಭಿಸಿದವರು ಚಾಲುಕ್ಯ ಅರಸರು. ಅವರ ಸಮಾಧಿಗಳು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಸಮೀಪದ ಹುಲಿಗೆಮ್ಮನಕೊಳ್ಳದಲ್ಲಿ ಪತ್ತೆಯಾಗಿವೆ.
Related Articles
Advertisement
ಚಾಲುಕ್ಯರು ಬಾಳಿದ ಅರಮನೆಗಳ ಬಗ್ಗೆ ಯಾವ ಉಲ್ಲೇಖವೂ ಇಲ್ಲ ಮತ್ತು ಅರಮನೆಗಳ ಕುರುಹುಗಳೂ ಇಲ್ಲ. ಸಾವಿನ ನಂತರ ಆಡಂಬರದ ಸಮಾಧಿ ನಿರ್ಮಾಣವನ್ನೂ ಮಾಡಲಿಲ್ಲ. ಇವರ ಸಮಾಧಿಗಳೆಲ್ಲಿ ಎಂಬುದೇ ಸಂಶೋಧಕರಿಗೆ ಸವಾಲಾಗಿತ್ತು. ಶಿವ ಮತ್ತು ವಿಷ್ಣುವನ್ನು ನಂಬಿದ ರಾಜರು ತಮ್ಮ ಸಾವನ್ನು ಸಹ ರಹಸ್ಯಮಯಗೊಳಿಸಿರುವುದು ಆಶ್ಚರ್ಯ. ಆದರೆ 2005ರಿಂದ ಸತತ ಹದಿನಾಲ್ಕು ವರ್ಷಗಳ ಕಾಲ ಚಾಲುಕ್ಯರ ನಾಡಿನ ಸಂಶೋಧನೆ ನಡೆದಿದೆ. ಈ ಹಾದಿಯಲ್ಲಿ ಅನೇಕ ರೋಚಕ ವಿಷಯಗಳು ಕಂಡುಬಂದಿವೆ. ಚಾಲುಕ್ಯರ ನಾಡಿನಲ್ಲಿ ಬೆಳಕಿಗೆ ಬಾರದ ಶಕ್ತಿ ಆರಾಧನೆ ತಂತ್ರಸಾಧನೆಗಳು ಅಚ್ಚರಿ ಮೂಡಿಸಿವೆ.
ಚಾಲುಕ್ಯ ರಾಜವಂಶಸ್ಥರ ಮೂಲ ಸ್ಥಾನ ಹಾಗೂ ಇತಿಹಾಸದ ಬಗ್ಗೆ ಅನೇಕ ಸಂಶೋಧನಾಕಾರರು ವಿಚಾರಗಳನ್ನು ಮಂಡಿಸಿದ್ದಾರೆ. ತುಂಗಭದ್ರಾ ಸುತ್ತಮುತ್ತಲಿನವರೆಂದು, ಸ್ಥಳೀಯ ಆಂಧ್ರದ ಗಡಿಭಾಗದ ವರೆಂದು, ಅಲ್ಲದೆ ಇವರು ಸ್ಥಳೀಯ ಪಾಳೆಗಾರರೆಂದು ಗುರುತಿಸಿದ್ದುಂಟು. ಇತಿಹಾಸಜ್ಞ ಡಾ. ಶೀಲಾಕಾಂತ ಪತ್ತಾರ ಅವರ ಪ್ರಕಾರ ಚಾಲುಕ್ಯರು ಕನ್ನಡನಾಡಿನವರು. ಸ್ಥಳೀಯ ಚಲಕಿ, ಸಲುಕಿ, ಸಲಕಿ, ಎಲ್ಲವೂ ದೇಶಿಯ ನಾಮಗಳಿದ್ದು ಇವರೆಲ್ಲರೂ ಕೃಷಿಕರು. ಚಾಲುಕ್ಯರ ನಾಡಿನಲ್ಲಿ ಸತತ ಮೂವತ್ತು ವರ್ಷ ಸಂಶೋಧನೆ ಕೈಗೊಂಡಿರುವ ವಿದೇಶಿ ವಿದ್ವಾಂಸ ಡಾ. ಜಾರ್ಜ್ ಮಿಶೆಲ್ ಒಟ್ಟು 16 ರಾಜವಂಶಸ್ಥರ ಪೀಳಿಗೆಯಲ್ಲಿ 7 ಪ್ರಮುಖರನ್ನು ಉಲ್ಲೇಖೀಸಿರುತ್ತಾರೆ. 6ನೆಯ ಶತಮಾನದ ಆರಂಭದಲ್ಲಿ ಜಯಸಿಂಹನಿಂದ ಆರಂಭಗೊಂಡ ಈ ವಂಶ 757ರಲ್ಲಿ ಕೀರ್ತಿವರ್ಮನವರೆಗೆ ಹಬ್ಬಿದೆ.
ಹುಲಿಗೆಮ್ಮನ ಕೊಳ್ಳದ ಸಮಾಧಿ ರೂಪದ ದೇವಾಲಯಗಳು ಪಟ್ಟದಕಲ್ಲು ಹತ್ತಿರದ ಭದ್ರ ನಾಯಕನ ಜಾಲಿಹಾಳ ಹತ್ತಿರದಲ್ಲಿವೆ. ಈ ಪ್ರದೇಶದಲ್ಲಿ 2ನೇ ಪುಲಿಕೇಶಿ ಕೆಲಕಾಲ ವಾಸಿಸಿರುವ ಉಲ್ಲೇಖವಿದೆ. ಇಲ್ಲಿರುವ 11 ಚಿಕ್ಕ ಚಿಕ್ಕ ದೇವಾಲಯಗಳು ಹನ್ನೊಂದು ರಾಜರ ಸಮಾಧಿಗಳು ದೇಶದ ಪ್ರಮುಖ 12 ಜ್ಯೋತಿರ್ಲಿಂಗಗಳ ರೂಪವೆಂದು ಸ್ಥಳೀಯರು ತಪ್ಪಾಗಿ ಅರ್ಥೈಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಒಂದೇ ವಂಶಸ್ಥರ ಅಂತ್ಯಕ್ರಿಯೆಗಳನ್ನು ಒಂದೆಡೆ ಮಾಡುವುದು ರೂಢಿ. ಅಲ್ಲದೆ ಚಾಲುಕ್ಯ ರಾಜರ ಅಸ್ತಿ ಅಂತ್ಯಕ್ರಿಯೆಗಳನ್ನು ಹುಲಿಗೆಮ್ಮನ ಕೊಳ್ಳದ ಬೆಟ್ಟದಲ್ಲಿ ಮಾಡಿ ಅದರ ಮೇಲೆ ಲಿಂಗಗಳನ್ನು ಸ್ಥಾಪಿಸಿ ಚಿಕ್ಕ ಚಿಕ್ಕ ದೇವಸ್ಥಾನ ನಿರ್ಮಿಸಲಾಗಿದೆ.
ಈ ರಾಜವಂಶಸ್ಥರ ರುಧ್ರಭೂಮಿ ಇಲ್ಲಿರುವ ಬಗ್ಗೆ ಅನೇಕ ಐತಿಹ್ಯಗಳಿವೆ. ಇದನ್ನು ಪುಷ್ಟೀಕರಿಸುವಂತೆ ಶಿಖರವಲ್ಲದ ಒಂದು ದೇವಾಲಯದ ಮಂಟಪದಲ್ಲಿ 2ನೇ ವಿಕ್ರಮಾದಿತ್ಯನ ಅಸ್ತಿಗಳನ್ನು ಸಮಾಧಿ ಮಾಡಲಾಗಿರುವ ಬಗ್ಗೆ ಅಲ್ಲಿರುವ ಶಾಸನದಲ್ಲಿ ಉಲ್ಲೇಖೀಸಲಾಗಿದೆಯೆಂದು ಡಾ. ಜಾರ್ಜ್ ಮಿಶೆಲ್ ಸಂಶೋಧಿಸಿದ್ದಾರೆ.
ಉಳಿದ ಯಾವ ರಾಜರ ಸಮಾಧಿಗಳ ಬಗ್ಗೆ ಉಲ್ಲೇಖ ವಿಲ್ಲವಾದರೂ ಹಿಂದೂ ಸಂಪ್ರದಾಯದಂತೆ ರಾಜವಂಶಸ್ಥರ ಸಮಾಧಿಗಳನ್ನು ಒಂದೆಡೆ ನಿರ್ಮಿಸುವುದು ಹಾಗೂ ಸಮಾಧಿಗಳ ಮೇಲೆ ಲಿಂಗಗಳನ್ನು ಇಡುವ ಪದ್ಧತಿ ಇದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಪ್ರಾಚ್ಯ ಹಾಗೂ ಪುರಾತತ್ವ ಇಲಾಖೆಗಳು ಇಲ್ಲಿರುವ ಸಮಾಧಿಗಳ ಉತ್ಖನನ ನಡೆಸಿದಲ್ಲಿ ಸತ್ಯಾಸತ್ಯತೆ ಗೊತ್ತಾಗುವುದು.
ಚಾಲುಕ್ಯರ ಸಮಾಧಿಗಳ ಕುರಿತು 80ರ ದಶಕದಲ್ಲಿ ಚಾಲುಕ್ಯರ ಶಾಸನ ಅಧ್ಯಯನ ಮಾಡಿದ ಡಾ. ಕೆ. ವಿ. ರಮೇಶ ಅವರು ಅಲ್ಲಿರುವ 2ನೇ ವಿಕ್ರಮಾದಿತ್ಯ ರಾಜನ ಅಸ್ತಿ ಸಮಾಧಿ ಬಗ್ಗೆ ಉಲ್ಲೇಖೀಸಿದ್ದಾರೆ ನಿಜ. ಆದರೆ ಅಲ್ಲಿರುವ ಉಳಿದ 10 ಚಿಕ್ಕ ಚಿಕ್ಕ ಗುಡಿಗಳ ಬಗ್ಗೆ ಸರಿಯಾಗಿ ತಿಳಿಸಿಲ್ಲ. ಅಲ್ಲದೆ, ಈವರೆಗೆ ಯಾವೊಬ್ಬ ಸಂಶೋಧಕನೂ ಸಹ ಅವು ರಾಜರ ಸಮಾಧಿಗಳಲ್ಲಯೆಂದು ವಾದಿಸಿಲ್ಲ. ಇವುಗಳ ಬಗ್ಗೆ ಹೆಚ್ಚಿನ ತರ್ಕಬದ್ಧ ವಿಚಾರಗಳನ್ನು ತಿಳಿಸಿಲ್ಲ.