Advertisement

ಸೈಬರ್‌ ಕ್ರೈಮ್‌ ಸುತ್ತ 100

09:38 PM Aug 08, 2019 | Team Udayavani |

ಸೋಶಿಯಲ್‌ ಮೀಡಿಯಾದಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲವೂ ಇದೆ. ಅನೇಕರಿಗೆ ಸೋಶಿಯಲ್‌ ಮೀಡಿಯಾ ಒಂದು ಭೂತದಂತೆ ಕಾಡುವುದು ಸುಳ್ಳಲ್ಲ. ಹಾಗಾಗಿಯೇ ಇವತ್ತು ಸೈಬರ್‌ ಕ್ರೈಮ್‌ ಸೆಲ್‌ಗ‌ಳು ತಲೆ ಎತ್ತಿವೆ. ಅದಕ್ಕೆ ಸಾಕಷ್ಟು ದೂರುಗಳು ಕೂಡಾ ಬರುತ್ತಿವೆ. ಈಗ ಯಾಕೆ ಈ ವಿಚಾರ ಎಂದು ನೀವು ಕೇಳಬಹುದು. ನಟ, ನಿರ್ದೇಶಕ ರಮೇಶ್‌ ಅರವಿಂದ್‌ “100′ ಎಂಬ ಚಿತ್ರವನ್ನು ಆರಂಭಿಸಿದ್ದು ನಿಮಗೆ ನೆನಪಿರ­ಬಹುದು. ಈ ಚಿತ್ರದಲ್ಲಿ ಸೈಬರ್‌ ಕ್ರೈಮ್‌ ಕುರಿತಾದ ವಿಷಯವನ್ನು ಹೇಳಲಾಗಿದೆ. ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರು ವಿಷ್ಣು ಎಂಬ ಸೈಬರ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ತೊಂದರೆಯಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸುವ ಪಾತ್ರ ಅವರದು.

Advertisement

ಹೊಸ ಜಾನರ್‌ನ ಸಿನಿಮಾವನ್ನು ನಿರ್ದೇಶಿಸುತ್ತಿರುವುದರಿಂದ ರಮೇಶ್‌ ಅರವಿಂದ್‌ ಕೂಡಾ ಖುಷಿಯಾಗಿದ್ದಾರೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ “ಹುಡುಗಿಯರನ್ನು ಹುಡುಗರು ಫಾಲೋ ಮಾಡೋದು, ತೊಂದರೆ ಕೊಡೋದು ಎಂಬ ಒಂದು ಕಾಲವಿತ್ತು. ಈಗ ಫಾಲೋ ಮಾಡೋದು, ತೊಂದರೆ ಕೊಡೋದು ಎಲ್ಲವೂ ಸೋಶಿಯಲ್‌ ಮೀಡಿಯಾ ಮೂಲಕ ಆಗುತ್ತಿದೆ. ಹೆಣ್ಣು ಮಕ್ಕಳು ಯಾರನ್ನೋ ಫ್ರೆಂಡ್‌ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್‌ಶಿಪ್‌ನ ಕಟ್‌ ಮಾಡೋಕೂ ಆಗಲ್ಲ, ಅನ್‌ಫ್ರೆಂಡ್‌ ಮಾಡೋಕೂ ಆಗಲ್ಲ. ಈ ತರಹ ವಿಪರೀತ ತೊಂದರೆಯಲ್ಲಿ ಕೆಲವು ಹೆಣ್ಮಕ್ಕಳು ಸಿಲುಕಿದ್ದಾರೆ. ಇದನ್ನು “ಸೈಬರ್‌ ಸ್ಟಾಕಿಂಗ್‌’ ಎನ್ನುತ್ತಾರೆ. ಕಂಪ್ಯೂಟರ್‌, ಮೊಬೈಲ್‌ ಮೂಲಕ ಸತತವಾಗಿ ಹುಡುಗಿಯರ ಮೇಲೆ ಕಣ್ಣಿಟ್ಟು ಅವರಿಗೆ ತೊಂದರೆ ಕೊಡುವ ಒಂದಷ್ಟು ಮಂದಿ ಇದ್ದಾರೆ. ಆ ತರಹದ ಕಥಾ ವಸ್ತುವನ್ನಿಟ್ಟುಕೊಂಡು ಹೆಣೆದಿರುವ ಕಥೆ 100′ ಎನ್ನುತ್ತಾರೆ ರಮೇಶ್‌ ಅರವಿಂದ್‌ ಮಾತು. ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆ ಇದಾಗಿರುವುದರಿಂದ ಚಿತ್ರದ ಬಹುತೇಕ ಚಿತ್ರೀಕರಣ ಒಳಾಂಗಣದಲ್ಲೇ ನಡೆದಿದೆ. ಸುಂದರವಾದ ಮನೆ, ಕಚೇರಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

“ಈಗಾಗಲೇ 32 ದಿನಗಳ ಕಾಲ ಚಿತ್ರೀಕರಣವಾಗಿದ್ದು, ಶೇ 60 ಮುಗಿದಿದೆ. ಇನ್ನೂ ಶೃಂಗೇರಿ ಹಾಗೂ ಕಾಶ್ಮೀರದಲ್ಲಿ ಕೆಲ ದಿನಗಳ ಚಿತ್ರೀಕರಣ ಬಾಕಿ ಇದೆ. ಬಹಳ ನೀಟಾಗಿ, ಕಾರ್ಪೋರೇಟ್‌ ಶೈಲಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕ ರಮೇಶ್‌ ರೆಡ್ಡಿ’ ಎನ್ನುವುದು ರಮೇಶ್‌ ಅರವಿಂದ್‌ ಮಾತು. ಚಿತ್ರದಲ್ಲಿ ರಚಿತಾ ರಾಮ್‌, ಪೂರ್ಣ, ವಿಶ್ವಾಸ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಹಿಂದೆ “ಪಡ್ಡೆಹುಲಿ’ ಚಿತ್ರ ನಿರ್ಮಿಸಿದ ರಮೇಶ್‌ ರೆಡ್ಡಿ “100′ ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next