ಶ್ರೀನಗರ ಕಿಟ್ಟಿ ಹಾಗೂ ಸೂರಜ್ ಗೌಡ ಅಭಿನಯದ “ಸಿಲಿಕಾನ್ ಸಿಟಿ’ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಜೂನ್ 16 ರಂದು ಪ್ರೇಕ್ಷಕರ ಮುಂದೆ ತರಲು ನಿರ್ಮಾಪಕ ರವಿ ಹಾಗೂ ನಿರ್ದೇಶಕ ಮುರಳಿ ಗುರಪ್ಪ ಸಜ್ಜಾಗುತ್ತಿದ್ದಾರೆ. ಈ ಚಿತ್ರದ ಮೇಲೆ ನಿರ್ದೇಶಕ ಮುರಳಿ ಗುರಪ್ಪ ಮತ್ತು ನಿರ್ಮಾಪಕ ರವಿ ಅವರಿಗೆ ಸಾಕಷ್ಟು ನಂಬಿಕೆ ಇದೆ. ಅದಕ್ಕೆ ಕಾರಣ, ನಿರೀಕ್ಷೆಗಿಂತಲೂ ಸಿನಿಮಾ ಚೆನ್ನಾಗಿ ಮೂಡಿಬಂದಿರುವುದು. ಇದು ತಮಿಳಿನ “ಮೆಟ್ರೋ’ ಚಿತ್ರದ ಅವತರಣಿಕೆ. ಕನ್ನಡತನ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಈ ಕುರಿತು ನಿರ್ದೇಶಕ ಮುರಳಿ ಗುರಪ್ಪ, ನಿರ್ಮಾಪಕ ರವಿ ಮತ್ತು ಶ್ರೀನಗರ ಕಿಟ್ಟಿ “ಸಿಲಿಕಾನ್ ಸಿಟಿ’ ಕುರಿತು ಮಾತನಾಡಿದ್ದಾರೆ.
ಒಳ್ಳೇ ಸಂದೇಶವುಳ್ಳ ಸಿನಿಮಾ
“ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಎರಡು ದಶಕದ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿದೆ. ಇದಕ್ಕೂ ಮುನ್ನ, ನಾನು ಸಂಕಲನಕಾರನಾಗಿ ಕೆಲಸ ಮಾಡುತ್ತಿದ್ದೆ. ಹಲವಾರು ಜಾಹಿರಾತುಗಳಿಗೆ ಸಂಕಲನ ಮಾಡಿದ್ದೇನೆ. ಎರಡು ತೆಲುಗು ಚಿತ್ರಗಳಿಗೂ ಕತ್ತರಿ ಹಿಡಿದಿದ್ದೇನೆ. ಕಾರ್ಪೋರೇಟ್ ಸಿನಿಮಾಗಳಲ್ಲೂ ಕೆಲಸ ಮಾಡಿದ್ದೇನೆ. ಕೆಲ ಕಾರ್ಪೋರೇಟ್ ಕಂಪೆನಿಗಳ ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದೂ ಇದೆ.
ಅದೇ ಅನುಭವದ ಮೇಲೆ ‘ಸಿಲಿಕಾನ್’ ಸಿಟಿ ನಿರ್ದೇಶಿಸಿದ್ದೇನೆ. ಮೊದಲೇ ಹೇಳಿದಂತೆ ಇದು ತಮಿಳಿನ “ಮೆಟ್ರೋ’ ಚಿತ್ರದ ರಿಮೇಕ್. ಹಾಗಂತ ಎಲ್ಲವೂ ಹಾಗೆಯೇ ಇಲ್ಲಿಲ್ಲ. ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಲಾಗಿದೆ. ಈಗಾಗಲೇ ಚಿತ್ರ ಮುಗಿದಿದ್ದು, ಜೂನ್‌ನಲ್ಲಿ ತೆರೆಕಾಣಲಿದೆ. ನನ್ನ ಪ್ರಕಾರ “ಸಿಲಿಕಾನ್ ಸಿಟಿ’ ಒಳ್ಳೆಯ ಸಂದೇಶ ಸಾರುವ ಸಿನಿಮಾ ಆಗಿ ಮೂಡಿ ಬಂದಿದೆ. ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಇನ್ನೊಂದು ಹಾಡನ್ನು ಪುನಃ ಗೀತೆ ಇರುವಂತಹ ಸಾಲುಗಳುಳ್ಳ ಆಡಿಯೋ ಬಿಡುಗಡೆ ಮಾಡಲಿದ್ದೇವೆ. ಟ್ರೇಲರ್ ಕೂಡಾ ಬಿಡುಗಡೆ ಮಾಡುವ ಯೋಚನೆ ಇದೆ ಎನ್ನುತ್ತಾರೆ ನಿರ್ದೇಶಕ ಮುರಳಿ ಗುರಪ್ಪ. “ಸುಮಾರು 150 ರಿಂದ 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ಇನ್ನು, ಸೋಮವಾರ ಯು ಟ್ಯೂಬ್‌ನಲ್ಲೊಂದು ಹೊಸ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಜೂನ್ ಮೊದಲ ವಾರದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಟ್ರೇಲರ್ ರಿಲೀಸ್ ಮಾಡುತ್ತಿದ್ದು, ಅದೇ ವೇಳೆ ಲಿರಿಕಲ್ ವೀಡಿಯೋವನ್ನೂ ಬಿಡುಗಡೆ ಮಾಡುತ್ತಿದ್ದೇವೆ.
ಈಗಾಗಲೇ ಹಾಡುಗಳಿಗೆ ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಡು ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸಿನಿಮಾ ಬಗ್ಗೆಯೂ ಅವರಿಗೆಲ್ಲರಿಗೂ ನಿರೀಕ್ಷೆ ಇದೆ. ತಮಿಳಿನ “ಮೆಟ್ರೋ’ ರಿಮೇಕ್ ಇದಾಗಿದ್ದರೂ, ಇಲ್ಲಿ ಕನ್ನಡತನಕ್ಕೆ ಕೊರತೆ ಆಗಿಲ್ಲ. ಇಲ್ಲಿ ಎಲ್ಲಾ ಪಾತ್ರಗಳು ಹೊಸ ಪ್ರಯೋಗದಿಂದ ಕೂಡಿವೆ. ಸಿನಿಮಾ ನೋಡಿದವರಿಗೆ ಆ ಪಾತ್ರಗಳ ಬಗ್ಗೆ ಗೊತ್ತಾಗಲಿದೆ’ ಎಂಬುದು ನಿರ್ದೇಶಕರ ಮಾತು.
ಮಿಡ್ಲ್ಕ್ಲಾಸ್ ಫ್ಯಾಮಿಲಿ ಸ್ಟೋರಿ
ಇದೊಂದು ಮಧ್ಯಮ ಕುಟುಂಬದ ಕಥೆ. ಬೆಂಗಳೂರಿನಲ್ಲಿ ವಾಸವಾಗಿರುವ ಒಂದು ಮಿಡ್ಲ್ಕ್ಲಾಸ್ ಫ್ಯಾಮಿಲಿಯಲ್ಲಿ ಒಂದು ಘಟನೆ ನಡೆಯುತ್ತೆ. ಆ ಮೇಲೆ ಏನೆಲ್ಲಾ ಆಗಿ ಹೋಗುತ್ತೆ ಎನ್ನುವುದೇ ಸಿನಿಮಾದ ಕಥೆ. ಮಧ್ಯಮ ಕುಟುಂಬ ಅಂದಮೇಲೆ ಸಾಮಾನ್ಯವಾಗಿ ಸಣ್ಣಪುಟ್ಟ ಜಗಳ ನಡೆಯುವುದುಂಟು. ಆಗ, ಆ ಫ್ಯಾಮಿಲಿಯ ಹುಡುಗರು ಏನಾದರೊಂದು ಸಾಧನೆ ಮಾಡಬೇಕು ಅಂತ ಡಿಸೈಡ್ ಮಾಡಿ, ತಪ್ಪು ದಾರಿ ತುಳಿದಾಗ, ಏನೆಲ್ಲಾ ಅನುಭವಿಸುತ್ತಾರೆ.
ಅವರ ಆ ಸಣ್ಣ ತಪ್ಪಿನಿಂದಾಗಿ, ಫ್ಯಾಮಿಲಿ ಎಷ್ಟೆಲ್ಲಾ ತೊಂದರೆಗೆ ಒಳಪಡುತ್ತೆ ಎಂಬುದು ಚಿತ್ರದ ಕಥಾವಸ್ತು. ರವಿ ಹಾಗೂ ಮಂಜುಳ ಸೋಮಶೇಖರ್ ಈ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಶ್ರೀನಿವಾಸ್ ರಾಮಯ್ಯ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್ ಸಂಕಲನವಿದೆ. ಚಿನ್ನ ಅವರು ಹಿನ್ನೆಲೆ ಸಂಗೀತ ನೀಡಿದರೆ, ಅನೂಪ್ ಸೀಳಿನ್ ಹಾಗೂ ಜೋಹಾನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಐದು ಹಾಡುಗಳಿದ್ದು, ಅರಸು ಅಂತಾರೆ ಮತ್ತು ಮಮತಾ ಜಗನ್ಮೋಹನ್ ಗೀತೆಗಳನ್ನು ರಚಿಸಿದ್ದಾರೆ.
ಶ್ರೀನಗರ ಕಿಟ್ಟಿ ಅವರಿಗೆ ಕಾವ್ಯಾಶೆಟ್ಟಿ ಜೋಡಿಯಾಗಿದ್ದರೆ, ಸೂರಜ್‌ಗೌಡ ಅವರಿಗೆ ಯಕ್ತಾ ರಾಥೋಡ್ ನಾಯಕಿಯಾಗಿದ್ದಾರೆ. ಕಿಟ್ಟಿಗೆ ಸೂರಜ್ ಗೌಡ ತಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕಿಟ್ಟಿ, ಸೂರಜ್‌ಗೌಡ ಅವರ ಅಪ್ಪ, ಅಮ್ಮನಾಗಿ ಅಶೋಕ್ ಹಾಗೂ ತುಳಸಿ ಅವರು ನಟಿಸಿದ್ದಾರೆ. ಗೆಳೆಯರಾಗಿ ಚಿಕ್ಕಣ್ಣ, ಕಡ್ಡಿ ವಿಶ್ವ, ಗಿರಿ, ಗಿರಿ ಶಿವಣ್ಣ, ಸಿದ್ದು ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ’ ಎಂಬುದು ಮುರಳಿ ಗುರಪ್ಪ ಮಾತು.
ಮೌಲ್ಯವಿರುವ ಪಾತ್ರದಲ್ಲಿ ಕಿಟ್ಟಿ
ಇದೊಂದು ಬೇರೆ ತರಹದ ಅನುಭವ ಕೊಟ್ಟ ಪಾತ್ರ ಎನ್ನುತ್ತಾರೆ ಶ್ರೀನಗರ ಕಿಟ್ಟಿ. “ಇದುವರೆಗೂ ಮಾಡಿರುವ ಹಲವು ಪಾತ್ರಗಳಲ್ಲಿ, ಈ ತರಹದ ಪಾತ್ರವನ್ನು ನಾನು ಮಾಡಿರಲಿಲ್ಲ. ನನ್ನ ಮಟ್ಟಿಗೆ ಇದೊಂದು ಬೇರೆ ತರಹದ ಅನುಭವ. ಈ ಚಿತ್ರದಲ್ಲಿ ನಾನು ಮಧ್ಯಮ ವರ್ಗದ ಕುಟುಂಬವೊಂದರ ಯುವಕನಾಗಿ ಕಾಣಿಸಿಕೊಂಡಿದ್ದೀನಿ. ತಂದೆ, ತಾಯಿ, ತಮ್ಮ … ಹೀಗೆ ನಮ್ಮದೇ ಒಂದು ಪ್ರಪಂಚ.
ಬಹಳ ಮೌಲ್ಯಗಳಿಟ್ಟುಕೊಂಡಿರುವ ಪಾತ್ರ. ಹೀಗಿರುವಾಗಲೇ, ಚಿತ್ರದಲ್ಲಿ ನನ್ನ ತಾಯಿಯ ಸರಗಳ್ಳತನವಾಗುತ್ತದೆ. ಈ ಘಟನೆಯಿಂದ ತಾಯಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಅವನು ಹೇಗೆ ತನ್ನ ಸ್ನೇಹಿತನ ಜೊತೆಗೆ ಸೇರಿಕೊಂಡು, ಈ ಸರಗಳ್ಳತನದ ವ್ಯೂಹವನ್ನು ಬೇಧಿಸುತ್ತಾನೆ ಎಂಬುದು ಕಥೆ. ಮೊದಲೇ ಹೇಳಿದಂತೆ ಈ ತರಹದ ಪಾತ್ರ ನನಗೆ ಹೊಸದು. ಇನ್ನು ಸೂರಜ್ ಸಹ ಬಹಳ ಚೆನ್ನಾಗಿ ಮಾಡಿದ್ದಾರೆ. ಇಡೀ ಚಿತ್ರ ಚೆನ್ನಾಗಿ ಬಂದಿದೆ’ ಎನ್ನುತ್ತಾರೆ ಶ್ರೀನಗರ ಕಿಟ್ಟಿ.
ಹೊಸ ಅನುಭವದ ಪಾಕ ಇಲ್ಲುಂಟು
ನಿರ್ಮಾಪಕ ರವಿ ಅವರಿಗೆ ಸಿನಿಮಾ ಗೆಲುವು ಕೊಡುತ್ತೆ ಎಂಬ ಅದಮ್ಯ ವಿಶ್ವಾಸವಿದೆ. ಸಿನಿಮಾ ನೋಡಿದವರಿಗೆ ಹೊಸ ಫೀಲ್ ಆಗುತ್ತೆ ಎಂಬ ನಂಬಿಕೆಯೂ ಅವರಿಗಿದೆಯಂತೆ. “ಮೊದಲ ಸಿನಿಮಾವಾದ್ದರಿಂದ ಒಳ್ಳೆಯ ಕಥೆ, ಸಂದೇಶ ಇರುವಂತಹ ಸಿನಿಮಾವನ್ನೇ ಮಾಡಬೇಕು ಎಂಬ ಉದ್ದೇಶವಿತ್ತು. ತಮಿಳಿನ “ಮೆಟ್ರೋ’ ನೋಡಿ, ಅದೇ ಸಿನಿಮಾವನ್ನು ಕನ್ನಡದಲ್ಲಿ ಮಾಡಿದರೆ, ವಕೌìಟ್ ಆಗುತ್ತೆ ಎಂಬ ನಂಬಿಕೆಯಿಂದ ಸಿನಿಮಾ ಮಾಡಿದ್ದಾಗಿ’ ಹೇಳುತ್ತಾರೆ ನಿರ್ಮಾಪಕರು. ಕಳೆದ ಜೂನ್‌ನಲ್ಲಿ ಈ ಚಿತ್ರ ಮಾಡುವ ಕುರಿತು ಮಾತುಕತೆ ನಡೆದು, ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಶುರುವಾಯ್ತು.
ಮೊದಲು ಒಂದೇ ಹಂತದಲ್ಲಿ ಸಿನಿಮಾ ಮಾಡುವ ಯೋಚನೆ ಇತ್ತು. ಆ ಮೇಲೆ ಕೆಲ ಕಾರಣಗಳಿಂದಾಗಿ, ಮೂರು ಹಂತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಲ್ಲೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ನಾನು ಮತ್ತು ಮುರಳಿ ಇಬ್ಬರೂ ಒಂದು ಕಂಪೆನಿ ಮೂಲಕ ಈ ಚಿತ್ರ ಮಾಡಿದ್ದೇವೆ. ಇದು ರಿಮೇಕ್ ಚಿತ್ರವಾಗಿದ್ದರೂ, ಕನ್ನಡತನವೇ ತುಂಬಿದೆ. ಚಿತ್ರದ ಹೈಲೆಟ್ ಅಂದರೆ, ಒಳ್ಳೆಯ ಕಥೆ, ಅದಕ್ಕೆ ತಕ್ಕಂತಹ ಪಾತ್ರಗಳು, ಸಂಗೀತ ಇಲ್ಲಿದೆ. ಬೆಂಗಳೂರಿನಲ್ಲಿ ಸುಮಾರು 40 ದಿನಗಳ ಕಾಲ ಸಂಪೂರ್ಣ ಚಿತ್ರೀಕರಣ ನಡೆದಿದೆ.
ಇಲ್ಲಿ ಸ್ಟಾರ್ ಇದ್ದರೂ, ಅವರ ಇಮೇಜ್ ಚೇಂಜ್ ಮಾಡುವಂತಹ ಪಾತ್ರವಿದೆ. ಚಿಕ್ಕಣ್ಣ ಇಲ್ಲಿದ್ದಾರೆ. ಎಲ್ಲರೂ ಅವರು ಹಾಸ್ಯ ಮಾಡುತ್ತಾರೆ ಅಂತ ತಿಳಿದುಕೊಂಡರೆ ಅದು ತಪ್ಪು. ಚಿಕ್ಕಣ್ಣ, ಇಲ್ಲಿ ಬಹಳ ಗಂಭೀರವಾದ ಪಾತ್ರ ನಿರ್ವಹಿಸಿದ್ದಾರೆ. ಸೂರಜ್‌ಗೌಡ ಅವರನ್ನು ಸಾಮಾನ್ಯವಾಗಿ ಚಾಕೋಲೆಟ್ ಹೀರೋ ಅಂತ ಕರೆಯುತ್ತಾರೆ. ಆದರೆ, ಅವರಿಗೆ ಇಲ್ಲಿ ಎರಡು ಶೇಡ್ ಇರುವಂತಹ ಪಾತ್ರವಿದೆ. ಮೊದಲರ್ಧದಲ್ಲಿ ಒಂದು ರೀತಿಯ ಪಾತ್ರವಿದ್ದರೆ, ದ್ವಿತಿಯಾರ್ಧದಲ್ಲಿ ನೆಗೆಟಿವ್ ಶೇಡ್ ಇದೆ’ ಎನ್ನುತ್ತಾರೆ ನಿರ್ಮಾಪಕ ರವಿ.
“ಇಲ್ಲಿ ಎಲ್ಲವೂ ನೈಜತೆಯಿಂದ ಮೂಡಿಬಂದಿದೆ. ಕ್ಯಾಮೆರಾಮೆನ್ ರಾಮಯ್ಯ ಅವರು ನ್ಯಾಚುರಲ್ ಲೈಟ್‌ಪ್ಯಾಟ್ರನ್‌ನಲ್ಲಿ ಕ್ಯಾಮೆರಾ ಹಿಡಿದಿದ್ದಾರೆ. ಕೆಲವು ಸಂದರ್ಭದಲ್ಲಿ ರಸ್ತೆಯ ಸ್ಟ್ರೀಟ್ ಲೈಟ್ ಬಳಸಿ ಚಿತ್ರೀಕರಣ ಮಾಡಿರುವುದು ಚಿತ್ರಕ್ಕೆ ಪೂರಕವಾಗಿದೆ. ಕೆಲ ಸಣ್ಣಪುಟ್ಟ ಲೈಟಿಂಗ್ಸ್ ಹೊರತುಪಡಿಸಿದರೆ, ಬಹುತೇಕ ಸ್ಟ್ರೀಟ್ ಲೈಟ್ಸ್‌ನಲ್ಲೇ ಕೆಲ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇಲ್ಲಿ ಎಲ್ಲವೂ ರಿಯಲಿಸ್ಟಿಕ್ ಆಗಿರುವುದರಿಂದ ನೋಡುಗರಿಗೆ ಹೊಸ ಅನುಭವ ಕಟ್ಟಿಕೊಡುತ್ತದೆ’ ಎಂಬುದು ರವಿ ಅವರ ಮಾತು.