ನವದೆಹಲಿ: ಕಳೆದ ವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾನೂನು ಅಂಗೀಕಾರಗೊಂಡ ನಂತರ ದೇಶದ ವಿವಿಧೆಡೆ ಪ್ರತಿಭಟನೆ, ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿದ್ದು, ಏತನ್ಮಧ್ಯೆ ಕೇಂದ್ರದ ನೂತನ ಪೌರತ್ವ ಕಾಯ್ದೆ ಪ್ರಶ್ನಿಸಿ ದಾಖಲಾಗಿರುವ ಸುಮಾರು 60 ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ಕೈಗೆತ್ತಿಕೊಳ್ಳಲಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್, ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಹಾಗೂ ಅಸೋಮ್ ಗಣ ಪರಿಷತ್ ಸೇರಿದಂತೆ ಹಲವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಪೀಠದಲ್ಲಿ ಜಸ್ಟೀಸ್ ಬಿಆರ್ ಗವಿ ಹಾಗೂ ಜಸ್ಟೀಸ್ ಸೂರ್ಯಕಾಂತ್ ಇದ್ದಾರೆ.
ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗ ನಿರಾಶ್ರಿತರಿಗೆ ಭಾರತದಲ್ಲಿ ಕಾಯಂ ಪೌರತ್ವ ನೀಡುವ ಕಾನೂನು ಇದಾಗಿದೆ. ಆದರೆ ಪೌರತ್ವವನ್ನು ಧರ್ಮದ ಆಧಾರದ ಮೇಲೆ ನೀಡಬಾರದು ಎಂಬುದು ಅರ್ಜಿದಾರರ ದೂರಾಗಿದೆ.
ಧರ್ಮದ ಆಧಾರದಲ್ಲಿ ಅಕ್ರಮ ವಲಸಿಗರಿಗೆ ಪೌರತ್ವ ನೀಡುವುದು ಸಾಂವಿಧಾನಿಕವಾಗಿ ವ್ಯಕ್ತಿಯೊಬ್ಬನ ಮೂಲಭೂತ ಬದುಕಿನ ಹಕ್ಕು ಮತ್ತು ಸಮಾನತೆಯ ಉಲ್ಲಂಘನೆಯಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.