ಪಿತ್ತೋರಾಗಢ (ಉತ್ತರಾಖಂಡ): ಕಲ್ಲೆಸೆಯುವುದೇ ಇಲ್ಲಿನ ಸಂಭ್ರಮ, ಇನ್ನೊಬ್ಬರು ಗಾಯಗೊಂಡು ರಕ್ತ ನೆಲಕ್ಕೆ ಚೆಲ್ಲಿದರಷ್ಟೇ ದೇವರಿಗೆ ಖುಷಿ.
ಅರೆ ಎಲ್ಲಿ ಇದು ಹೀಗೆಲ್ಲ.. ಅಂದುಕೊಳ್ಳುತ್ತೀರಾ? ಇದು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ದೇವಿಧುರ ದೇಗುಲದಲ್ಲಿ ನಡೆಯುವ ವಾರ್ಷಿಕ ಹಬ್ಬ. ಮೊನ್ನೆಯಷ್ಟೇ ನಡೆದ ಕಲ್ಲು ಬಿಸಾಡುವ ಈ ಹಬ್ಬದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಕ್ಷಾ ಬಂಧನದ ದಿನ ಇಲ್ಲಿ ಕಲ್ಲು ಬಿಸಾಡುವ ಹಬ್ಬ ಆಚರಿಸಲಾಗುತ್ತದೆ. ಕಲ್ಲೆಸತದಿಂದ ಭಕ್ತರು ಗಾಯಗೊಂಡರೆ, ಇದರಿಂದ ದೇವಿ ಸಂಪ್ರೀತಳಾಗುತ್ತಾಳೆ ಎಂಬ ನಂಬಿಕೆ ಇಲ್ಲಿನವರದ್ದು.
ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಕಲ್ಲೆಸೆವ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ಕೇವಲ 10 ನಿಮಿಷದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Related Articles
ಹಿಂದಿನ ಕಾಲದಲ್ಲಿ ಇಲ್ಲಿ ದೇವಿ ಎದುರು ಪ್ರಾಣಾರ್ಪಣೆ ಮಾಡುವ ಪದ್ಧತಿಯಿತ್ತಂತೆ. ಈಗ ವೃದ್ಧೆಯೊಬ್ಬಳು ಬಂದು ತನ್ನ ಮೊಮ್ಮಕ್ಕಳನ್ನು ಕಾಪಾಡಬೇಕೆಂದು ಪ್ರಾರ್ಥಿಸುತ್ತಾಳೆ. ಪ್ರಾರ್ಥನೆ ಬಳಿಕ ಸ್ಥಳದಲ್ಲಿರುವ ಭಕ್ತರು ಪರಸ್ಪರ ಕಲ್ಲೆಸೆದು ರಕ್ತ ಚೆಲ್ಲುತ್ತಾರೆ. ಇದು ಪ್ರಾಣಾರ್ಪಣೆಯಷ್ಟೇ ಶ್ರೇಷ್ಠವಾಗಿದೆ ಎಂದು ನಂಬಲಾಗುತ್ತದೆ.
ಸ್ಥಳೀಯ ಜಮೀನ್ದಾರ ವಂಶಜರು ಎರಡು ಗುಂಪುಗಳಾಗಿ ಹಬ್ಬದಲ್ಲಿ ಕಲ್ಲೆಸೆಯುತ್ತಾರೆ. ಕೊನೆಗೆ ದೇಗುಲದ ಪೂಜಾರಿ ಸಾಕು ಎಂದಾಗಲೇ ಕಲ್ಲೆಸೆತ ನಿಲ್ಲುತ್ತದೆ. ಈ ಪದ್ಧತಿಗೆ ಹೈಕೋರ್ಟ್ ನಿಷೇಧ ಹೇರಿದ್ದರೂ ಕಲ್ಲೆಸೆಯುವ ಪದ್ಧತಿ ಇನ್ನೂ ಮುಂದುವರಿದಿದೆ.