Advertisement
“2017ರಲ್ಲಿ ಜೋಳದ ಕೃಷಿಗೆ ಬದಲಾಗಿ ಕಾಡು ಚೆಂಡುಮಲ್ಲಿಗೆ ಬೆಳೆಯಲು ನಿರ್ಧರಿಸಿದಾಗ, ಹಳ್ಳಿಯ ಜನರು ನನಗೆ ಹುಚ್ಚು ಹಿಡಿದಿದೆ ಎಂದು ತಿಳಿದರು.’ ಎನ್ನುತ್ತಾರೆ, ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ತಲ್ಲಾ ಗ್ರಾಮದ 45 ವರುಷ ವಯಸ್ಸಿನ ರೈತ ಪವನ್ ಕುಮಾರ್. ಮೊದಲ ಹಂಗಾಮಿನಲ್ಲಿ ಅವರು ಬೆಳೆಸಿದ ಗಿಡಗಳಲ್ಲಿ ಹೂಗಳು ಅರಳಲೇ ಇಲ್ಲ. ಆಗಂತೂ ಅವರು ಕುಗ್ರಾಮದ ಜನರ ಟೀಕೆಗಳಿಗೆ ಗುರಿಯಾಗಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಯಾರು ಅವರನ್ನು ದೂಷಿಸಿದ್ದರೋ ಅವರೇ ಅನುಯಾಯಿಗಳಾಗಿದ್ದಾರೆ. ಗ್ರಾಮದ ಬಹುಪಾಲು ರೈತರಿಗೆ ಇವರೇ ಮಾದರಿ. ಯಾಕೆಂದರೆ, ಇವರು ಗಳಿಸುವ ಆದಾಯ ವರ್ಷಕ್ಕೆ ಹೆಕ್ಟೇರಿಗೆ 1.20 ಲಕ್ಷ ರೂ.! ಇದು, ಇವರು ಜೋಳ ಬೆಳೆಸಿದ್ದರೆ ಸಿಗಬಹುದಾಗಿದ್ದ ಆದಾಯದ ಐದು ಪಟ್ಟು!
ಬೆಳೆ ಬದಲಾವಣೆಯಿಂದ ಲಾಭ ಗಳಿಸುತ್ತಿರುವ ಇನ್ನೊಬ್ಬ ರೈತ, ಕಂಗ್ರಾ ಜಿಲ್ಲೆಯ ಗ್ರಾಮದ ಗಣೇಶ್ ಪ್ರಶಾರ್. ಅವರು ಕಳೆದ ನಾಲ್ಕು ವರ್ಷಗಳಿಂದ ನಿಂಬೆಹುಲ್ಲು ಬೆಳೆಯುತ್ತಿದ್ದಾರೆ. ಅವರು ನಿಂಬೆಹುಲ್ಲು ಕೃಷಿ ಶುರು ಮಾಡಿದ್ದು ಒಂದು ಭಿಗಾ (0.17 ಹೆಕ್ಟೇರ್) ಜಮೀನಿನಲ್ಲಿ. ಈಗ 46 ಭಿಗಾ ಜಮೀನಿನಲ್ಲಿ ಅದನ್ನು ಬೆಳೆಯುತ್ತಿದ್ದಾರೆ. 26 ಮಂದಿ ರೈತರು ಸದಸ್ಯರಾಗಿರುವ ಒಂದು ಸೊಸೈಟಿಯನ್ನೂ ಶುರು ಮಾಡಿರುವುದು ಅವರ ಹೆಗ್ಗಳಿಕೆ. ಅವರಲ್ಲಿ 16 ಮಂದಿ ಈಗಾಗಲೇ ಸಾಂಪ್ರದಾಯಿಕ ಬೆಳೆಗೆ ಬದಲಾಗಿ ನಿಂಬೆ ಹುಲ್ಲು ಬೆಳೆಯುತ್ತಿದ್ದಾರೆ. ಹಲವಾರು ರೈತರು ಬೆಟ್ಟ ಪ್ರದೇಶವಾದ ಹಿಮಾಚಲ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಗಳ ಕೃಷಿ ತೊರೆಯುತ್ತಿದ್ದಾರೆ. ಆ ಬೆಳೆಗಳಿಂದ ಆದಾಯ ನಿಶ್ಚಿತವಾಗಿಲ್ಲದಿರುವುದು ಅದಕ್ಕೆ ಕಾರಣ. ಹವಾಮಾನದಲ್ಲಿನ ಏರುಪೇರು ಮತ್ತು ಕಾಡುಪ್ರಾಣಿಗಳ ದಾಳಿ ಇವೆಲ್ಲವೂ ಸಮಸ್ಯೆಯನ್ನು ಹೆಚ್ಚಿಸಿವೆ. ಇವೆಲ್ಲವನ್ನೂ ನೋಡಿದಾಗ ಬಾಷ್ಪಶೀಲ ತೈಲ(ಎಸೆನ್ಷಿಯಲ್ ಆಯಿಲ…) ಉತ್ಪಾದನೆಗೆ ಬಳಕೆಯಾಗುವ ಆರೋಮ್ಯಾಟಿಕ್ ಗಿಡಗಳ ಕೃಷಿ ಹೊಸ ಭರವಸೆ ಮೂಡಿಸಿದೆ.
Related Articles
Advertisement
ಗುಲಾಬಿ ತೈಲ ಪ್ರಯೋಗಆರೋಮ್ಯಾಟಿಕ್ ಗಿಡಗಳ ಕೃಷಿ, ರೈತರಿಗೆ ಲಾಭದಾಯಕ. ಒಂದು ಭಿಗಾ ಜಮೀನಿನಿಂದ ಸಿಗುವ ಕಾಡು ಚೆಂಡುಮಲ್ಲಿಗೆ ಫಸಲು 3,000ದಿಂದ 4,000 ಕೆ.ಜಿ. ನನಗೆ ನೂರು ಕಿಲೋ ಹೂವಿನಿಂದ 700- 800 ಗ್ರಾಂ ಬಾಷ್ಪಶೀಲ ತೈಲ ಸಿಗುತ್ತದೆ ಹಾಗೂ ಒಂದು ಕಿಲೋ ಕಾಡು ಚೆಂಡುಮಲ್ಲಿಗೆ ತೈಲ 7,000 ರೂಪಾಯಿಗೆ ಮಾರಾಟವಾಗುತ್ತದೆ ಎಂದು ತಿಳಿಸುತ್ತಾರೆ ಪವನ್ ಕುಮಾರ್. ನಿಂಬೆಹುಲ್ಲು ಬೆಳೆಸಿದವರಿಗೆ ಒಂದು ಭಿಗಾ ಜಮೀನಿನಿಂದ ಸಿಗುವ ಫಸಲು 4,500- 5,000 ಕೆ.ಜಿ. ಹಾಗೂ ನೂರು ಕೆ.ಜಿ. ನಿಂಬೆಹುಲ್ಲಿನಿಂದ ಸಿಗುವ ತೈಲದ ತೂಕ 16- 17 ಕೆ.ಜಿ. ಇದರ ಮಾರಾಟ ಬೆಲೆ ಕೆ.ಜಿ.ಗೆ 800ರಿಂದ 850 ರೂ. ಇದೀಗ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 7 ಲಕ್ಷದಿಂದ 8 ಲಕ್ಷ ರೂ. ಬೆಲೆಯಿರುವ ಗುಲಾಬಿ ತೈಲ ಉತ್ಪಾದನೆಗಾಗಿ ದಮ… ಗುಲಾಬಿ ಕೃಷಿಯ ಕ್ಷೇತ್ರಪ್ರಯೋಗ ನಡೆಸುತ್ತಿದೆ ಸಿಎಸ್‌ಐಆರ್. ರೈತ ಗಣೇಶ್ ಪ್ರಶಾರ್ ಬೆಳೆಸುವ ನಿಂಬೆಹುಲ್ಲು ಖರೀದಿಸುವವರು ಗುಜರಾತಿನ ಬಾಷ್ಪಶೀಲ ತೈಲದ ವರ್ತಕ ಶಿವಕುಮಾರ್ ವಸಿಷ್ಠ. ಈ ರೈತರ ನಿಂಬೆಹುಲ್ಲಿನ ಕೃಷಿ ಸಾವಯವ ವಿಧಾನದ ಕೃಷಿ ಎಂದು ದೃಢೀಕರಿಸುವ ವ್ಯವಸ್ಥೆಯನ್ನು ಸರಕಾರ ಮಾಡಿದರೆ, ಈ ನಿಂಬೆಹುಲ್ಲು ತೈಲಕ್ಕೆ ಇನ್ನೂ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ತಿಳಿಸುತ್ತಾರೆ ಶಿವಕುಮಾರ್. ಸೌದೆ ಒಲೆ ಬಳಕೆ
ಹಿಮಾಚಲಪ್ರದೇಶ ಕಳೆದ ಎರಡು ವರ್ಷಗಳಲ್ಲಿ ಕಾಡು ಚೆಂಡುಮಲ್ಲಿಗೆಯಿಂದ ಉತ್ಪಾದಿಸಿದ ಬಾಷ್ಪಶೀಲ ತೈಲದ ಪ್ರಮಾಣ 7.6 ಟನ್. ಇದರಿಂದಾಗಿ 861 ರೈತರಿಗೆ ಲಾಭವಾಗಿದೆ. ಅವರ ಒಟ್ಟು ಆದಾಯ 5.56 ಕೋಟಿ ರೂಪಾಯಿ ಎನ್ನುತ್ತಾರೆ, ರಾಕೇಶ್ ಕುಮಾರ್, ಮುಖ್ಯ ವಿಜ್ಞಾನಿ, ಸಿಎಸ್‌ಐಆರ್‌ನ ಹಿಮಾಲಯ ಜೈವಿಕ ಸಂಪನ್ಮೂಲ ತಂತ್ರಜ್ಞಾನ ಸಂಸ್ಥೆ. ಈ ಸಂಸ್ಥೆ ಆರೋಮ್ಯಾಟಿಕ್ ಗಿಡಗಳ ಕೃಷಿ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದೆ. ಜೊತೆಗೆ, ಬಾಷ್ಪಶೀಲ ತೈಲದ ಬಟ್ಟಿಕರಣ (ಡಿಸ್ಟಿಲೇಷನ್)ಕ್ಕಾಗಿ ರಾಜ್ಯದಲ್ಲಿ 16 ಘಟಕಗಳನ್ನು ಸ್ಥಾಪಿಸಿದೆ. ಇವನ್ನು ರೈತರ ಸಹಕಾರಿ ಸಂಘಗಳು ನಿರ್ವಹಿಸುತ್ತಿವೆ. ಈ ಘಟಕಗಳನ್ನು ಸೌದೆಯ ಬೆಂಕಿಯಿಂದ ಹಬೆ ಉತ್ಪಾದಿಸಿ ಚಾಲೂ ಮಾಡಲಾಗುತ್ತಿದೆ. – ಅಡ್ಡೂರು ಕೃಷ್ಣ ರಾವ್