Advertisement

ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆ

05:53 PM Jul 11, 2021 | Team Udayavani |

ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಕ್ಕಳು, ಹದಿಹರಯದವರು, ಪ್ರಜನನಾತ್ಮಕ ವಯೋಮಾನದ ಸ್ತ್ರೀಯರು ಹಾಗೂ ಗರ್ಭಿಣಿಯರು ಮತ್ತು ಹಾಲೂಡುವ ತಾಯಂದಿರನ್ನು ವಿಶೇಷವಾಗಿ ಗಮನದಲ್ಲಿ ಇರಿಸಿಕೊಂಡು “ಅನೀಮಿಯಾ ಮುಕ್ತ ಭಾರತ’ ಯೋಜನೆಯನ್ನು ಆರಂಭಿಸಿದೆ.

Advertisement

ಕಬ್ಬಿಣಾಂಶ ಕೊರತೆಯ ರಕ್ತಹೀನತೆ (ಅನೀಮಿಯಾ)ಯು ಮಕ್ಕಳಿಂದ ತೊಡಗಿ ಹಿರಿಯರ ವರೆಗೆ ಎಲ್ಲ ವಯೋಮಾನದವರಲ್ಲಿ ಕಂಡುಬರುವ ಪೋಷಕಾಂಶ ಕೊರತೆಯ ಕಾಯಿಲೆಯಾಗಿದೆ. ಕಬ್ಬಿಣಾಂಶವು ಹಿಮೊಗ್ಲೋಬಿನ್‌ ಉತ್ಪತ್ತಿಯಾಗಲು ಅಗತ್ಯ ಮತ್ತು ಅದರ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ ಎಂಬುದನ್ನು ನಾವೆಲ್ಲರೂ ತಿಳಿದಿದ್ದೇವೆ. ರಕ್ತಹೀನತೆಯು ಪುರುಷರಲ್ಲಿ ಶೇ. 55 ಮಂದಿಯಲ್ಲಿ ಮತ್ತು ಸ್ತ್ರೀಯರಲ್ಲಿ ಶೇ. 75 ಮಂದಿಯಲ್ಲಿ ಕಂಡುಬರುತ್ತದೆ. ಅದು ಪ್ರಜನನಾತ್ಮಕ ವಯೋಮಾನದಲ್ಲಿಯೇ ಕಂಡುಬರುವುದು ಹೆಚ್ಚು.

ಹಿಮೊಗ್ಲೊಬಿನ್‌ ಸಹಜ ಮಟ್ಟಕ್ಕಿಂತ ಕೆಳಗಿಳಿಯುವುದಕ್ಕೆ ಅಸಂಖ್ಯಾತ ಕಾರಣಗಳಿರುತ್ತವೆ. ಕಬ್ಬಿಣಾಂಶ ಕೊರತೆಯು ಈ ಕೆಳಗಿನ ಕಾರಣಗಳಿಂದ ಕಂಡುಬರಬಹುದು:

 ಕಬ್ಬಿಣಾಂಶವು ದೇಹಕ್ಕೆ ಪೂರೈಕೆಯಾಗುವ ಪ್ರಮಾಣ ಕಡಿಮೆ ಇರುವುದು – ಸೇವನೆ ಕಡಿಮೆ, ಇಷ್ಟವಿಲ್ಲದಿರುವುದು ಮತ್ತು ಕಬ್ಬಿಣಾಂಶ ಸಮೃದ್ಧ ಆಹಾರ ವಸ್ತುಗಳು ದೊರಕದೆ ಇರುವುದು.

  ಕಬ್ಬಿಣಾಂಶವನ್ನು ದೇಹ ಸರಿಯಾಗಿ ಬಳಸಿಕೊಳ್ಳದೆ ಇರುವುದು – ಕೆಲವು ಅನಾರೋಗ್ಯಗಳಿಂದ ಈ ಸ್ಥಿತಿ ಉಂಟಾಗಬಹುದು.

Advertisement

  ರಕ್ತ ನಷ್ಟವಾಗುವುದು – ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಗಾಯ, ಋತುಸ್ರಾವ, ಗರ್ಭಧಾರಣೆ ಇತ್ಯಾದಿ.

  ದೇಹ ಕಬ್ಬಿಣಾಂಶವನ್ನು ಸರಿಯಾಗಿ ಹೀರಿಕೊಳ್ಳದೆ ಇರುವುದು – ಆಹಾರದಲಿ ಫೈಟೇಟ್‌ಗಳು ಮತ್ತು ಪಾಸೆ#àಟ್‌ ಹೆಚ್ಚಿದ್ದರೆ ಕಬ್ಬಿಣಾಂಶ ಹೀರಿಕೆಗೆ ತಡೆಯಾಗುತ್ತದೆ.

  ಕೆಲವು ಕಾಯಿಲೆಗಳು ಮತ್ತು ಔಷಧಗಳು ರಕ್ತಹೀನತೆಯನ್ನು ಉಂಟುಮಾಡಬಹುದು.

ವ್ಯಕ್ತಿಯೊಬ್ಬನಿಗೆ ರಕ್ತಹೀನತೆ ಇದ್ದರೆ  ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು:

  ರೋಗನಿರೋಧಕ ಶಕ್ತಿಯ ಸಾಮರ್ಥ್ಯ ಕಡಿಮೆಯಾಗುವುದು.

  ಕಾರ್ಯನಿರ್ವಹಣ ಶಕ್ತಿ ಕುಂಠಿತವಾಗುವುದು.

  ಏಕಾಗ್ರತೆಯ ಕೊರತೆ.

  ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವುದು.

  ತರಗತಿಯಲ್ಲಿ ಮಕ್ಕಳು ಹೆಚ್ಚು ಗೊಂದಲದಲ್ಲಿರುವುದು, ಕಿರಿಕಿರಿ ಉಂಟುಮಾಡುವುದು, ತಂಟೆಕೋರರಾಗುವುದು.

  ಕಳಾಹೀನವಾಗಿ, ದುರ್ಬಲವಾಗಿ ಕಂಡುಬರುವುದು.

  ಕಾಲುಗಳು ಮತ್ತು ಮುಖದಲ್ಲಿ ನೀರು ತುಂಬಿಕೊಂಡು ಊತ. ಇದು ಇತರ ಕಾಯಿಲೆಗಳಿಂದಾಗಿಯೂ ಉಂಟಾಗಬಲ್ಲುದು.

  ಗರ್ಭ ಧರಿಸಿದ ಸಂದರ್ಭದಲ್ಲಿ ಅಸಾಮಾನ್ಯ, ಅಸಹಜ ವಸ್ತುಗಳನ್ನು ತಿನ್ನುವ ಬಯಕೆ ತೋರ್ಪಡಿಸುವುದು.

  ದಣಿವು, ಅಸಹಜವಾದ ಬಳಲಿಕೆ.

ರಕ್ತಹೀನತೆಗೆ ಚಿಕಿತ್ಸೆಯಲ್ಲಿ ಕಬ್ಬಿಣಾಂಶಸಮೃದ್ಧ ಆಹಾರವಸ್ತುಗಳ ಸೇವನೆ, ಕಬ್ಬಿಣಾಂಶ ಪೂರೈಕೆ ಚಿಕಿತ್ಸೆ ಒಳಗೊಂಡಿರುತ್ತದೆ. ಫೊಲೇಟ್‌ ಕೊರತೆಯನ್ನು ಸರಿಪಡಿಸುವುದು ಕೂಡ ಒಂದು ಹಂತದವರೆಗೆ ರಕ್ತಹೀನತೆಯನ್ನು ಸರಿಪಡಿಸಲು ನೆರವಾಗುತ್ತದೆ.

ವಯಸ್ಕರ ದೇಹದಲ್ಲಿ ಕಬ್ಬಿಣಾಂಶ ಎರಡು ರೂಪಗಳಲ್ಲಿ ಶೇಖರವಾಗಿರುತ್ತದೆ:

 ಹಿಮೊಗ್ಲೊಬಿನ್‌, ಮೆಯೊಗ್ಲೊಬಿನ್‌ ಮತ್ತು ಕಿಣ್ವಗಳಲ್ಲಿ ಇರುವ ಕ್ರಿಯಾತ್ಮಕ ಕಬ್ಬಿಣಾಂಶ.

 ಫೆರಿಟಿನ್‌, ಹಿಮೊಸಿಡಿರಿನ್‌ ಮತ್ತು ಟ್ರಾನ್ಸ್‌ಫೆರಿನ್‌ ರೂಪದಲ್ಲಿ ದಾಸ್ತಾನು.

ಆರೋಗ್ಯವಂತ ವಯಸ್ಕ ಪುರುಷರ ದೇಹದಲ್ಲಿ 3.6 ಗ್ರಾಂಗಳಷ್ಟು ಕಬ್ಬಿಣಾಂಶ ಇದ್ದರೆ ಮಹಿಳೆಯರಲ್ಲಿ 2.4 ಗ್ರಾಂಗಳಷ್ಟಿರುತ್ತದೆ. ಪುರುಷರ ದೇಹಕ್ಕೆ ಹೋಲಿಸಿದರೆ ಮಹಿಳೆಯರ ದೇಹದಲ್ಲಿ ಕಬ್ಬಿಣಾಂಶದ ದಾಸ್ತಾನು ಇರುವುದು ಕಡಿಮೆ.

ಆಹಾರಾಭ್ಯಾಸದ ವಿಚಾರಕ್ಕೆ ಬರುವುದಾದರೆ, ಕೊರತೆಯನ್ನು ಸರಿಪಡಿಸಲು ಕಬ್ಬಿಣಾಂಶ ಪೂರಕ ಆಹಾರಗಳ ಜತೆಗೆ ಕಬ್ಬಿಣಾಂಶ ಸಮೃದ್ಧ ಆಹಾರವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಅಗತ್ಯ. ಚಿತ್ರದಲ್ಲಿ ಕಾಣಿಸಿರುವ ಆಹಾರ ಪಿರಾಮಿಡ್‌ನ‌ಲ್ಲಿ ವಿವಿಧ ಆಹಾರ ಗುಂಪುಗಳಲ್ಲಿ ಇರುವ ಕಬ್ಬಿಣಾಂಶ ಸಮೃದ್ಧ ಆಹಾರಗಳನ್ನು ತೋರಿಸಲಾಗಿದೆ. ನಿಮ್ಮ ಇಷ್ಟ – ಇಷ್ಟವಿಲ್ಲದಿರುವಿಕೆಯ ಆಧಾರದಲ್ಲಿ ವಿವಿಧ ಆಹಾರವಸ್ತುಗಳನ್ನು ನಿಮ್ಮ ದೈನಿಕ ಆಹಾರಾಭ್ಯಾಸದಲ್ಲಿ ಸೇರಿಸಿಕೊಳ್ಳಬಹುದು ಅಥವಾ ನೀವು ಸೇವಿಸುವ ಆಹಾರದ ಜತೆಗೆ ಇವುಗಳನ್ನು ಸೇರಿಸಿಕೊಂಡು ರುಚಿ ಹೆಚ್ಚಿಸಿಕೊಳ್ಳಬಹುದು. ಪಾಲಾಕ್‌ನ ಪ್ಯೂರಿಯನ್ನು ಪರೋಟ ಅಥವಾ ಸೂಪ್‌ಗ್ಳ ಜತೆಗೆ ಸೇರಿಸಿಕೊಳ್ಳುವುದು ಒಂದು ಸರಳ, ಸುಲಭ ಉದಾಹರಣೆ.

ಆಹಾರರೂಪದ ಕಬ್ಬಿಣಾಂಶವು ಎರಡು ರಾಸಾಯನಿಕ ರೂಪಗಳಲ್ಲಿ ಇರುತ್ತದೆ:

 ಹಿಮೆ ಕಬ್ಬಿಣಾಂಶ: ಹಿಮೊಗ್ಲೊಬಿನ್‌, ಮೆಯೊಗ್ಲೊಬಿನ್‌ ಮತ್ತು ಕಿಣ್ವಗಳಲ್ಲಿ ಕಂಡುಬರುತ್ತದೆ.

 ನಾನ್‌ ಹಿಮೆ ಕಬ್ಬಿಣಾಂಶ: ಸಸ್ಯಜನ್ಯ ಆಹಾರಗಳಲ್ಲಿ ಪ್ರಮುಖವಾಗಿ ಕಂಡುಬರು ತ್ತದೆ, ಆದರೆ ಕೆಲವು ಪ್ರಾಣಿಜನ್ಯ ಆಹಾರ ಗಳಲ್ಲಿಯೂ ನಾನ್‌ ಹಿಮೆ ಕಿಣ್ವಗಳು ಮತ್ತು ಫೆರಿಟಿನ್‌ ರೂಪದಲ್ಲಿ ಇರುತ್ತದೆ.

ಕಬ್ಬಿಣಾಂಶವನ್ನು ಯಾವ ಆಹಾರದಿಂದ ಪಡೆಯಲಾಯಿತು ಅಥವಾ ಅದನ್ನು ಯಾವ ಆಹಾರ ವಸ್ತುವಿನ ಜತೆಗೆ ಸೇವಿಸಲಾಯಿತು ಎಂಬುದನ್ನು ಆಧರಿಸಿ ದೇಹವು ಕಬ್ಬಿಣಾಂಶವನ್ನು ಎಷ್ಟು ದಕ್ಷ ವಾಗಿ ಹೀರಿಕೊಳ್ಳುತ್ತದೆ ಎಂಬುದು ನಿರ್ಧಾರವಾಗುತ್ತದೆ. ಹೆಚ್ಚು ಫೈಟೇಟ್‌ ಅಂಶ ಹೊಂದಿರುವ ಆಹಾರವಸ್ತುಗಳಲ್ಲಿ ಕಬ್ಬಿಣಾಂಶದ ಜೈವಿಕ ಲಭ್ಯತೆ ಕಡಿಮೆ ಇರುತ್ತದೆ. ಆದರೆ ಇದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಓಕ್ಸಲೇಟ್‌ಗಳು ಕಬ್ಬಿಣಾಂಶ ಹೀರಿಕೆಯನ್ನು ಪ್ರತಿಬಂಧಿಸುತ್ತವೆ. ಚಹಾದಲ್ಲಿ ಇರುವ ಪಾಲಿಫಿನೈಲ್‌ಗ‌ಳಾಗಿರುವ ಟ್ಯಾನಿನ್‌ಗಳು ನಾನ್‌ಹಿಮೆ ಕಬ್ಬಿಣಾಂಶದ ಹೀರುವಿಕೆಯನ್ನು ಕಡಿಮೆ ಮಾಡುತ್ತವೆ. ಸೂಕ್ತ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶ ಇದ್ದರೆ ಅದು ಕಬ್ಬಿಣಾಂಶ ಹೀರಿಕೆಗೆ ತಡೆಯಾಗುವ ಪಾಸೆ#àಟ್‌, ಓಕ್ಸಲೇಟ್‌ ಮತ್ತು ಫೈಟೇಟ್‌ಗಳನ್ನು ತೆಗೆದುಹಾಕುತ್ತದೆ.

ಕಬ್ಬಿಣಾಂಶ ಚಿಕಿತ್ಸೆ ಮತ್ತು ಸೂಕ್ತ ಆಹಾರಾಭ್ಯಾಸವನ್ನು ಅನುಸರಿಸಿದ ಬಳಿಕವೂ ಕೊರತೆಯು ಸರಿಹೋಗದಿದ್ದರೆ ರಕ್ತಹೀನತೆ ಮತ್ತು ಅದರ ಕಾರಣವನ್ನು ಇನ್ನಷ್ಟು ಸೂಕ್ಷ್ಮವಾಗಿ ತಿಳಿದು ಚಿಕಿತ್ಸೆ ಪಡೆಯಲು ಹೆಮಟಾಲಜಿಸ್ಟ್‌ರ ಮಾರ್ಗದರ್ಶನ ಅಗತ್ಯವಾಗಬಹುದು.

ಅರುಣಾ ಮಲ್ಯ

ಹಿರಿಯ ಪಥ್ಯಾಹಾರ ತಜ್ಞೆ ,

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next