Advertisement

ಕೋವಿಡ್ ತಡೆಗೆ ಸರಕಾರ ವಿಫಲ

06:02 PM Sep 08, 2020 | Suhan S |

ಭಾಲ್ಕಿ: ರಾಜ್ಯ ಹಾಗೂ ದೇಶದಲ್ಲಿ ಮಹಾಮಾರಿ ಕೋವಿಡ್  ವೈರಸ್‌ ಅಟ್ಟಹಾಸ ಮೆರೆಯುತ್ತಿದೆ. ಸೋಂಕು ನಿಯಂತ್ರಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದರು.

Advertisement

ಜಿಲ್ಲಾ ಹಾಗೂ ತಾಲೂಕು ಕಾಂಗ್ರೆಸ್‌ ವತಿಯಿಂದ ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಆರೋಗ್ಯ ಹಸ್ತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಆಡಳಿತ ವೈಫಲ್ಯದಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದೆ. ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದೇವೆ. ರಾಜ್ಯದಲ್ಲಿ 6500ಕ್ಕೂ ಅಧಿಕ ಜನ ಸೋಂಕಿಗೆ ಬಲಿಯಾಗಿದ್ದಾರೆ. ಆರಂಭದಲ್ಲಿ ಸೋಂಕು ನಿಯಂತ್ರಿಸಲು ಬಿಜೆಪಿ ಸರಕಾರಕ್ಕೆ ಕಾಂಗ್ರೆಸ್‌ ಸಹಕಾರ ನೀಡಿತು. ಲಾಕ್‌ಡೌನ್‌ ಸಂದರ್ಭದಲ್ಲಿ ಕಾಂಗ್ರೆಸ್‌ ನಿಯೋಗ ಸಿಎಂ ಬಿಎಸ್‌ವೈ ಅವರನ್ನು ಮೂರು ಬಾರಿ ಭೇಟಿ ಮಾಡಿ ಅಸಂಘಟಿತ ಕಾರ್ಮಿಕರು, ರೈತರು, ಬಡವರಿಗೆ ಸಹಾಯಧನ ನೀಡುವಂತೆ ಒತ್ತಾಯಿಸಿತು. ಆದರೆ ಬಿಜೆಪಿ ಸರಕಾರ ಸ್ಪಂದಿಸಲಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್‌ ನಾಯಕರು ಬಡಜನರ ನೆರವಿಗೆ ಧಾವಿಸಿರುವುದನ್ನು ಯಾರು ಮರೆಯುವಂತಿಲ್ಲ ಎಂದರು.

ಜನರ ಆರೋಗ್ಯ ರಕ್ಷಣೆಯಲ್ಲಿ ಬಿಜೆಪಿ ಸರಕಾರ ವಿಫಲವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಆರೋಗ್ಯ ಹಸ್ತ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಿ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ. ಪ್ರತಿ ಪಂಚಾಯಿತಿಗೆ ಇಬ್ಬರಿಗೆ ತರಬೇತಿ ನೀಡಿ ಮನೆ ಮನೆಗೂ ಕಳುಹಿಸಿ ಕೊಡಲಾಗುತ್ತಿದೆ. ಸುಮಾರು 15 ಸಾವಿರ ಕಾರ್ಯಕರ್ತರು ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. 8500ಕ್ಕೂ ಅಧಿಕ ಕಿಟ್‌ ನೀಡಲಾಗುತ್ತಿದೆ. 320 ಹಿರಿಯ ವೈದ್ಯರು, ತಜ್ಞರು ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕೋವಿಡ್ ದಿಂದ ದೇಶದ ಜನ ಸಂಕಷ್ಟದಲ್ಲಿದ್ದಾರೆ. ಆರಂಭದಲ್ಲಿ ಕಾಂಗ್ರೆಸ್‌ ಪ್ರತಿಪಕ್ಷವಾಗಿ ಸೋಂಕು ತಡೆಯಲು ಸರಕಾರಕ್ಕೆ ಸಾಥ್‌ ನೀಡಿತು.ಆದರೆ ಸರಕಾರ ಪೂರ್ವ ಸಿದ್ಧತೆ ಇಲ್ಲದೇ ಲಾಕ್‌ಡೌನ್‌ ಘೋಷಿಸಿದ ಪರಿಣಾಮ ಇವತ್ತು ರಾಜ್ಯದಲ್ಲಿ ಕೋವಿಡ್ ನಿಯಂತ್ರಣ, ನಿರ್ವಹಣೆಯಲ್ಲಿ ಬಿಜೆಪಿ ವಿಫಲವಾಗಿದೆ. ಕೋವಿಡ್ ಉಪಕರಣ ಖರೀದಿಯಲ್ಲಿ ಸಾಕಷ್ಟು ಲೂಟಿ ನಡೆದಿದೆ ಎಂದು ಆಪಾದಿಸಿದರು.

Advertisement

ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್‌ ಸೋಂಕು ನಿಯಂತ್ರಿಸಲು ಹಾಗೂ ಸಂಕಷ್ಟದಲ್ಲಿ ಇದ್ದವರ ನೆರವಿಗೆ ಧಾವಿಸುವಂತೆ ಒತ್ತಾಯಿಸಿತು. ಆದರೆ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ರಾಜ್ಯದಲ್ಲಿ ಪ್ರತಿದಿನ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟುತ್ತಿದೆ. ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸೋಂಕಿತರಿಗೆ ಸರ್ಮಪಕ ಚಿಕಿತ್ಸೆ ಸಿಗುತ್ತಿಲ್ಲ. ಕೋವಿಡ್‌ಗೆ ಬಲಿಯಾದವರ ಅಂತ್ಯಕ್ರಿಯೆ ಕೂಡ ಗೌರವಯುತವಾಗಿ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸರಕಾರ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ನೀತಿ ತಿದ್ದುಪಡಿ ತಂದು ರೈತರು, ಬಡ ಜನರ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡುತ್ತಿದೆ. ಇಂತಹ ವ್ಯವಸ್ಥೆ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

ಕಲಬುರಗಿ ಮಾಜಿ ಮೇಹರ್‌ ಶರಣು ಮೋದಿ, ಜಿಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್‌, ಎಪಿಎಂಸಿ ಅಧ್ಯಕ್ಷ ಬನಸಿಲಾಲ್‌, ತಾಪಂ ಉಪಾಧ್ಯಕ್ಷ ಶಿವರಾಜ ಪಾಟೀಲ, ಕಾಂಗ್ರೆಸ್‌ ನಗರ ಅಧ್ಯಕ್ಷ ನಜೀರ್‌, ಆರೋಗ್ಯ ಹಸ್ತದ ವೈದ್ಯರಾದ ಡಾ| ಸಂಗಮೇಶ, ಡಾ| ಯುವರಾಜ ಜಾಧವ, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ ಚವ್ಹಾಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next