Advertisement

ಆರೂಢ ಪರಂಪರೆ ಮಠಗಳ ಕೊಡುಗೆ ಅಪಾರ

11:13 AM Jul 06, 2019 | Suhan S |

ರಾಣಿಬೆನ್ನೂರ: ಹಳ್ಳಗಳೆಲ್ಲ ನದಿ ಸೇರುವಂತೆ, ನದಿಗಳು ಸಾಗರದಲ್ಲಿ ಸಂಗಮವಾಗುವಂತೆ ಎಲ್ಲ ಮಠಗಳು ಭಕ್ತರನ್ನು ಅಜ್ಞಾನದಿಂದ ಸುಜ್ಞಾನದಡೆ ಕೊಂಡೊಯ್ಯುತ್ತವೆ. ಅದರಲ್ಲೂ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರು ಅಗ್ರಗಣ್ಯರು ಎಂದು ಪೌರಾಡಳಿತ ಸಚಿವ ಆರ್‌.ಶಂಕರ್‌ ಹೇಳಿದರು.

Advertisement

ಶುಕ್ರವಾರ ತಾಲೂಕಿನ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 35ನೇ ಪುಣ್ಯಾರಾಧನೆ ಹಾಗೂ ಶ್ರೀ ಮಠದ ಬಸವರಾಜ ದೇಶಿಕೇಂದ್ರ ಸ್ವಾಮಿಗಳವರ ಅಂಬಾರಿ ಉತ್ಸವ, ತುಲಾಭಾರ, ರಥೋತ್ಸವ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರೂಢ ಪರಂಪರೆಯ ಮಠಗಳು ಜಾತಿಯ ಸೋಂಕಿಲ್ಲದೆ ನಾಡಿನ ಸರ್ವಧರ್ಮ ಸಮಾಜದ ಜನರು ಮುಕ್ತಿಯ ಮಾರ್ಗವನ್ನು ತಲುಪುವ ಸುಲಭ ಉಪಾಯ ತಿಳಿಸಿದವರು. ಧಾರ್ಮಿಕ ಪರಂಪರೆ ಉಳಿಸಿ ಬೆಳಸುವಲ್ಲಿ ಶ್ರಮಿಸುತ್ತಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ರೂಪದಿಂದ ಜನ್ಮ ತಾಳಿರುವ ಪ್ರತಿಯೊಬ್ಬ ವ್ಯಕ್ತಿಯಲ್ಲಡಗಿರುವ ಅಜ್ಞಾನ ಹೊಡೆದೋಡಿಸಿ, ಸುಜ್ಞಾನದೆಡೆ ಕೊಂಡೊಯ್ಯುವ ಇಂತಹ ಸತ್ಸಂಗಗಳಲ್ಲಿ ಭಾಗಿಗಳಾಗಿ ಮುಕ್ತಿ ದಾರಿ ಪಡೆಯಿರಿ ಎಂದು ನುಡಿದರು.

ಹುಬ್ಬಳ್ಳಿಯ ಸಿದ್ಧಾರೂಢರ ಪರಮ ಶಿಷ್ಯರಾದ ಮುಪ್ಪಿನಾರ್ಯರು ಈ ಕ್ಷೇತ್ರವನ್ನು ಪುಣ್ಯಮಯವನ್ನಾಗಿಸಿದ್ದಾರೆ. ತನ್ನನ್ನು ತಾನು ಅರಿತು ಬಾಳಲು ಸತ್ಸಂಗದ ಮೂಲಕ ತಿಳಿಸಿದವರು ಮುಪ್ಪಿನಾರ್ಯರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದವರ ಬದುಕು ಹಸನವಾಗುವುದು ಎಂದರು.

ಗುರುಗಳ ಸಮ್ಮುಖದಲ್ಲಿ ನಡೆದ ಇಂಥ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವು ಧನ್ಯರು. ನವದಂಪತಿಗಳು ಸಂಸ್ಕಾರಯುತವಾಗಿ ಬಾಳಬೇಕು. ಗುರುಹಿರಿಯರಿಗೆ ಗೌರವ ಕೊಡುವ ಮೂಲಕ ನಿಮ್ಮ ಬದುಕು ಇತರರಿಗೆ ಮಾದರಿಯಾಗಲಿ ಎಂದು ಶ್ರೀಗಳು ನವದಂಪತಿಗಳಿಗೆ ಕಿವಿ ಮಾತು ಹೇಳಿದರು.

Advertisement

ಹದಡಿ ಚಂದ್ರಗಿರಿ ಮಠದ ಮುರಳಿಧರ ಸ್ವಾಮೀಜಿ ಮಾತನಾಡಿ, ಪ್ರಪಂಚದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲು ಅದೈತ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಆದಿಗುರು ಶಂಕರಾಚಾರ್ಯರಿಗೆ ಸಲ್ಲುತ್ತದೆ. ಅಹಂ ಬ್ರಹ್ಮಾಸಿಂ ಎಂಬುದು ನನ್ನಲ್ಲಿಯೇ ಪರಶಿವನಿದ್ದಾನೆ ಎಂದು ತೋರಿಸಿ ಕೊಟ್ಟವರು. ತದನಂತರ ಅದೈತ ತತ್ವ ಎತ್ತಿ ಹಿಡಿದವರು ಸಿದ್ಧಾರೂಢರು. ಅದರ ಸಂರಕ್ಷಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ದಾವಣಗೆರೆಯ ಜಡಿಸಿದ್ಧೇಶ್ವರ ಆಶ್ರಮದ ಶಿವಾನಂದ ಸ್ವಾಮೀಜಿ, ಕುಳ್ಳೂರಿನ ಸಿದ್ಧಾರೂಢ ಮಠದ ಬಸವಾನಂದ ಭಾರತಿ ಸ್ವಾಮೀಜಿ, ತೆಲಗಿಯ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹ ಸಮಾರಂಭದಲ್ಲಿ 12 ಜೋಡಿ ನವದಂಪತಿ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು.

ನವವಿವಾಹಿತರಿಗೆ ಶ್ರೀ ಮಠದ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ನ್ಯಾಯವಾದಿ ಎಸ್‌.ಎಸ್‌. ರಾಮಲಿಂಗಣ್ಣನವರ, ಬಸವರಾಜ ಪಾಟೀಲ, ಧನಲಕ್ಷಿ ್ಮ ಶಂಕರ, ಕಲಾವಿದ ರಾಮಣ್ಣ ಇದ್ದರು. ಬಾಬಣ್ಣ ಶೆಟ್ಟರ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next