ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇನೆಗೆ ಸೇರುವುದಕ್ಕಾಗಿ ಮಕ್ಕಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ಸೇನಾ ಶಾಲೆಯನ್ನು ತೆರೆಯಲು ನಿರ್ಧರಿಸಿದೆ. ಮುಂದಿನ ವರ್ಷದಿಂದ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಶಿಕರ್‌ಪುರದಲ್ಲಿ ಆರಂಭವಾಗಲಿದೆ. ಆರೆಸ್ಸೆಸ್‌ನ ಶೈಕ್ಷಣಿಕ ವಿಭಾಗವಾದ ವಿದ್ಯಾ ಭಾರತಿ ಇದರ ನಿರ್ವಹಣೆ ಮಾಡಲಿದೆ. ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ರಾಜೇಂದ್ರ ಸಿಂಗ್ ಸ್ಮರಣಾರ್ಥ ಈ ಶಾಲೆ ತೆರೆಯಲಾಗಿದೆ.
ಈಗಾಗಲೇ ಶಾಲೆಯ ಕಟ್ಟಡ ನಿರ್ಮಾಣ ಆರಂಭವಾಗಿದ್ದು, ಮುಂದಿನ ವರ್ಷದಿಂದ ಸಿಬಿಎಸ್‌ಇ ಪಠ್ಯಕ್ರಮದಂತೆ ಬೋಧನೆ ಆರಂಭಿಸಲಾಗುತ್ತದೆ. ಆರಂಭದಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮುಂದಿನ ಏಪ್ರಿಲ್ನಿಂದ ತರಗತಿಗಳು ಆರಂಭವಾಗಲಿವೆ.
ಹುತಾತ್ಮರ ಮಕ್ಕಳಿಗೆ 56 ಸೀಟು: ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರಾಸ್ಪೆಕ್ಟಸ್ ಈಗಾಗಲೇ ಸಿದ್ಧವಿದೆ. ಮುಂದಿನ ತಿಂಗಳು ಅರ್ಜಿ ಕರೆಯಲಾಗುತ್ತದೆ. ಆರನೇ ತರಗತಿಯ ಮೊದಲ ಬ್ಯಾಚ್ಗೆ 160 ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಈ ಪೈಕಿ ಹುತಾತ್ಮರ ಮಕ್ಕಳಿಗಾಗಿ 56 ಸೀಟ್‌ಗಳನ್ನು ಕಾಯ್ದಿರಿಸಲಾಗುತ್ತದೆ.
ಇದೊಂದು ಪ್ರಯೋಗ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ಶಾಲೆಯನ್ನು ಆರಂಭಿಸಲಾಗಿದೆ. ಭವಿಷ್ಯದಲ್ಲಿ ಈ ಮಾದರಿಯನ್ನು ಇತರ ಸ್ಥಳಗಳಲ್ಲೂ ಜಾರಿಗೊಳಿಸಬಹುದು ಎಂದು ವಿದ್ಯಾ ಭಾರತಿ ಯಚ್ಛ ಶಿಕ್ಷಾ ಸಂಸ್ಥಾನದ ಉತ್ತರಾಖಂಡ ಮತ್ತು ಪಶ್ಚಿಮ ಉ.ಪ್ರ ವಿಭಾಗದ ಸಂಯೋಜಕ ಅಜಯ್ ಗೋಯಲ್ ಹೇಳಿದ್ದಾರೆ. ವಿದ್ಯಾ ಭಾರತಿ ದೇಶಾದ್ಯಂತ 20 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ನಿರ್ವಹಿಸುತ್ತಿದೆ.
ದೇಶದಲ್ಲಿ ಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಕೊರತೆಯಿದೆ. ಶಾಲಾ ಮಟ್ಟದಲ್ಲೇ ಸೇನಾ ಶಿಕ್ಷಣವನ್ನು ಒದಗಿಸಬೇಕು ಎಂದು ಆರೆಸ್ಸೆಸ್ ಭಾವಿಸಿದೆ. ಆರೆಸ್ಸೆಸ್‌ನ ಸಂಸ್ಥಾಪಕರಾದ ಕೆ.ಬಿ ಹೆಡ್ಗೆವಾರ್‌ರ ಮಾರ್ಗದರ್ಶಕರಾಗಿದ್ದ ಬಿಎಸ್ ಮೂಂಜೆ ನಾಶಿಕದಲ್ಲಿ 1937ರಲ್ಲಿ ಸೇನಾ ಶಾಲೆಯನ್ನು ಸ್ಥಾಪಿಸಿದ್ದರು. ಅದು ಇಂದಿಗೂ ಚಾಲ್ತಿಯಲ್ಲಿದೆ.ಆದರೆ ಆರೆಸ್ಸೆಸ್ ಇದೇ ಮೊದಲ ಬಾರಿಗೆ ಇಂಥ ಶಾಲೆಯನ್ನು ಸ್ಥಾಪಿಸುತ್ತಿದೆ.