ಕುಷ್ಟಗಿ: ದೇಶದ ಗಡಿಯಲ್ಲಿ ಸೈನಿಕನಾಗಿ ಬರೋಬ್ಬರಿ 21 ವರ್ಷಗಳ ಸೇವೆಯ ಬಳಿಕ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಮಾಜಿ ಸೈನಿಕ ಮಹಾಂತೇಶ ಬಸಪ್ಪ ಜಂಬನವರ್ ಅವರನ್ನು ಚಳಗೇರಾ ಗ್ರಾಮಸ್ಥರು, ರಾಷ್ಟ್ರಧ್ವಜಾ ಹೊಂದಿದ ಹೂವಿನ ಅಲಂಕೃತವುಳ್ಳ ತೆರೆದ ಜೀಪಿನಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡರು.
ಭಾರತೀಯ ಸೈನ್ಯದಲ್ಲಿ ಸೇವೆಯಲ್ಲಿದ್ದ ಚಳಗೇರಾ ಗ್ರಾಮದ ಹೆಮ್ಮೆಯ ಯೋಧ ಮಹಾಂತೇಶ ಜಂಬನವರ್ ಅವರನ್ನು ಗ್ರಾಮಸ್ಥರು ಹೂಗುಚ್ಚ ನೀಡಿ, ಮಹಿಳೆಯರು ಅರತಿ ಬೆಳಗಿ ಅಭಿಮಾನದಿಂದ ಬರಮಾಡಿಕೊಂಡರು.
ಗ್ರಾಮದ ಹೆಮ್ಮೆಯ ಪುತ್ರ ಭಾರತೀಯ ಸೈನ್ಯದಲ್ಲಿ ಸಾರ್ಥಕ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು. ಈ ಸಂಧರ್ಭದಲ್ಲಿ ಮಾಜಿ ಯೋಧನ ಕುಟುಂಬ ವರ್ಗ, ಮಾಜಿ ಸೈನಿಕರಾದ ಭೀಮನಗೌಡ ಪಾಟೀಲ, ಶಿವಾಜಿ ಹಡಪದ, ಆಂಜನೇಯ ದಾಸರ್, ಬುಡ್ಡಪ್ಪ ಹಿರೇಮನಿ, ಸಂಗಮೇಶ ಹಡಪದ, ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಂತೇಶ ಹಡಪದ ಸೇರಿದಂತೆ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.
ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಜಂಬನವರ್ ಅವರು, ಮನೆತನದ ಕಷ್ಟಕರ ಪರಿಸ್ಥಿತಿಯಲ್ಲಿ ಸೈನಿಕನಾಗಿ ಆಯ್ಕೆಯಾದೆ. ಬಸ್ ಚಾರ್ಜ್ ಇರಲಿಲ್ಲ. ಆ ವೇಳೆ ಶಿಕ್ಷಕರು ಆರ್ಥಿಕ ಸಹಾಯ ನೀಡಿದ್ದನ್ನು ಸ್ಮರಿಸಿದರು. 21 ವರ್ಷಗಳವರೆಗೆ ಜಮ್ಮು ಕಾಶ್ಮೀರ, ಪಂಜಾಬ್ ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತ ಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಸೈನಿಕನಾಗಿ ಸೇವೆ ಮಾಡಿರುವ ಬಗ್ಗೆ ಹೆಮ್ಮೆ ಇದ್ದು ಗ್ರಾಮಸ್ಥರೆಲ್ಲರೂ ನನ್ನನ್ನು ಮನೆಯ ಮಗನಂತೆ ಗೌರವಿಸಿರುವುದು ಮರೆಯುವುದಿಲ್ಲ ಎಂದರು.