Advertisement

ನಿರ್ಮಲಾ ಅಧಿಕಾರ ಸ್ವೀಕಾರದ ಬೆನ್ನಲ್ಲೇ ಸೇನೆಗೆ ಸ್ತ್ರೀಶಕ್ತಿ ಪ್ರವೇಶ!

12:35 PM Sep 09, 2017 | Karthik A |

ಹೊಸದಿಲ್ಲಿ: ತಾನು ಬಲಹೀನಳಲ್ಲ ಎಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಸಾಬೀತುಪಡಿಸುತ್ತಿದ್ದರೂ ಪೊಲೀಸ್‌ ಮತ್ತು ಸೇನೆಯ ವಿಷಯ ಬಂದಾಗ ಅವರನ್ನು ಮತ್ತದೇ ‘ದುರ್ಬಲ’ ದೃಷ್ಟಿಯಿಂದ ನೋಡಲಾಗುತ್ತಿದೆ. ಆದರೆ ಈ ದೃಷ್ಟಿಕೋನ ಬದಲಿಸಲು ಒಬ್ಬ ಮಹಿಳೆಯೇ ರಕ್ಷಣಾ ಮಂತ್ರಿಯಾಗಿ ಬರಬೇಕಿತ್ತು…

Advertisement

ಹೌದು. ಭಾರತದ ಮೊಟ್ಟಮೊದಲ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಅವರು ಅಧಿಕಾರ ವಹಿಸಿಕೊಂಡ ಮರುದಿನವೇ ಭಾರತೀಯ ಸೇನೆ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ದೇಶದ ಮಿಲಿಟರಿ ಪೊಲೀಸ್‌ ವಿಭಾಗದಲ್ಲಿ ಮಹಿಳೆಯರ ಸೇರ್ಪಡೆಗೆ ನಿರ್ಧರಿಸಿದೆ. ಪ್ರಸ್ತುತ ರಕ್ಷಣಾ ವಲಯದಲ್ಲಿ ಬೇರೂರಿರುವ ಲಿಂಗ ಭೇದದ ಬೇಲಿ ಕಿತ್ತೆಸೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಒಂದು ದಿಟ್ಟ ಹೆಜ್ಜೆ ಎಂದೇ ಬಣ್ಣಿಸಲಾಗಿದೆ.

800 ಮಹಿಳಾ ಪೊಲೀಸ್‌: ಈ ನಿರ್ಧಾರದ ಭಾಗವಾಗಿ ಪ್ರತಿ ವರ್ಷ 52 ಮಂದಿಯಂತೆ 800 ಮಹಿಳೆಯರನ್ನು ಮಿಲಿಟರಿ ಪೊಲೀಸ್‌ ಘಟಕಕ್ಕೆ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಪ್ರಸ್ತುತ ಸೇನೆಯ ಕೆಲ ವಿಭಾಗಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ವೈದ್ಯಕೀಯ, ಕಾನೂನು, ಶೈಕ್ಷಣಿಕ, ಸಿಗ್ನಲ್ಸ್‌ ಮತ್ತು ಎಂಜಿನಿಯರಿಂಗ್‌ ರೀತಿಯ ಕಾರ್ಯಗಳಿಗೆ ಅವರ ಸೇವೆ ಸೀಮಿತವಾಗಿದೆ. ಮುಂದೆ ನೇಮಿಸಿಕೊಳ್ಳುವ ಮಹಿಳೆಯರನ್ನು ಲಿಂಗಾಧಾರಿತ ಅಪರಾಧ ಪ್ರಕರಣಗಳ ವಿಚಾರಣೆಗೆ ಬಳಸಿಕೊಳ್ಳುವ ಚಿಂತನೆ ಸೇನೆಯದ್ದು.

ಮಹಿಳೆಯರಿಗೆ ಜವಾನ್‌ ಹುದ್ದೆ
‘ಭವಿಷ್ಯದಲ್ಲಿ ಯೋಧರ (ಜವಾನ್‌) ಹುದ್ದೆಗಳಿಗೂ ಮಹಿಳೆಯರನ್ನು ನೇಮಿಸಿ ಕೊಳ್ಳುವ ಆಲೋಚನೆಯಿದ್ದು, ಮಿಲಿಟರಿ ಪೊಲೀಸ್‌ಗೆ ಮಹಿಳೆಯರ ನೇಮಕದ ಮೂಲಕ ಮಹಿಳಾ ಯೋಧರನ್ನು ಪರಿಚಯಿಸುವ ಪ್ರಕ್ರಿಯೆಗೂ ಚಾಲನೆ ದೊರೆಯುವ ಸಾಧ್ಯತೆ ಇದೆ,’ ಎಂದು ಸೇನೆಯ ಮುಖ್ಯ ಲೆಫ್ಟಿನೆಂಟ್‌ ಜನರಲ್‌ ಬಿಪಿನ್‌ ರಾವತ್‌ ಮಾಹಿತಿ ನೀಡಿದ್ದಾರೆ.

ಮಹಿಳೆಯರಿಗೆ ಏನೆಲ್ಲಾ ಹೊಣೆ?
ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತಿತರ ಸೇವೆಗಳಿಗೆ ಹೊರತಾಗಿ ಯುದ್ಧ ಕೈದಿಗಳನ್ನು ನಿರ್ವಹಿಸುವ ಹೊಣೆಯನ್ನು ಮಹಿಳಾ ಮಿಲಿಟರಿ ಪೊಲೀಸರಿಗೆ ನೀಡಲಾಗುತ್ತದೆ. ಈ ಸಂಬಂಧ ಅಗತ್ಯ ತರಬೇತಿಯನ್ನೂ ಸೇನೆ ನೀಡಲಿದೆ. ಇದರೊಂದಿಗೆ ಕಂಟೋನ್ಮೆಂಟ್‌ ಮತ್ತು ಸೇನಾ ನೆಲೆಗಳ ಕಾವಲು ಕಾಯುವುದು, ಸೇನಾ ನಿಯಮಗಳಿಗೆ ಸಂಬಂಧಿಸಿದ ಶಿಸ್ತು ಪಾಲನೆ, ಲಾಜಿಸ್ಟಿಕ್ಸ್‌, ಸೈನಿಕರು ಮತ್ತು ವಾಹನಗಳ ಸಂಚಾರ ನಿಯಂತ್ರಣ, ರೆಜಿಮೆಂಟ್‌ಗಳು ಮತ್ತು ಸೈನಿಕರ ಕುಟುಂಬಗಳಿಗೆ ಸಹಾಯ ಮಾಡುವುದು, ಭಾರತೀಯ ಸೇನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ, ಟೆಲಿಫೋನ್‌ ಎಕ್ಸ್‌ಚೇಂಜ್‌ ರೀತಿಯ ಮೂಲ ಟೆಲಿಸಂವಹನ ಸಾಧನಗಳ ನಿರ್ವಹಣೆ ಸೇರಿದಂತೆ ಇನ್ನೂ ಹಲವು ಮಹತ್ವದ ಹೊಣೆಗಳನ್ನು ಮಹಿಳಾ ಸಿಬಂದಿ ನಿಭಾಯಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next