Advertisement
ಜ| ಬಿಪಿನ್ ರಾವತ್ ಅವರಿದ್ದ ಹೆಲಿಕಾಪ್ಟರ್ ದುರಂತ ಹಲವು ಆತಂಕಕಾರಿ ಪ್ರಶ್ನೆಗಳನ್ನು ಎದುರಿಟ್ಟಿದೆ. ಸೇನಾ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ಅವರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯದ ಅತ್ಯಂತ ಸುರಕ್ಷಿತ ಎಂದೇ ಪರಿಗಣಿಸಲ್ಪಡುವ ಈ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಸಾಮಾನ್ಯ ಸಂಗತಿಯಲ್ಲ. ಈ ಘಟನೆಗೆ ಏನು ಕಾರಣ ಎಂಬ ಲೆಕ್ಕಾಚಾರಗಳು, ಊಹೆಗಳು ಈಗ ಮೇಲುಗೈ ಸಾಧಿಸುತ್ತಿವೆ. ಈ ಕುರಿತು ಭಾರತೀಯ ವಾಯುದಳ ತನಿಖೆಗೆ ಆದೇಶಿಸಿದ್ದು, ಈ ದುರ್ಘಟನೆ ಹಿಂದಿನ ಸತ್ಯ ಹೊರಬೀಳುವವರೆಗೆ ದೇಶಕ್ಕೆ ನೆಮ್ಮದಿ ಇಲ್ಲ. ಘಟನೆ ಹಿಂದೆ ವಿದ್ರೋಹಿಗಳ ಸಂಚು ಇದೆ ಎಂಬ ವ್ಯಾಖ್ಯಾನಗಳೂ ಕೇಳಿಬಂದವಾದರೂ, ಸತ್ಯಾಸತ್ಯತೆ ಹೊರಬೀಳುವ ತನಕ ಕಾಯಲೇಬೇಕು.
Related Articles
Advertisement
ಇದರ ಜತೆಗೆ ಮೂರು ದಳಗಳನ್ನು ಒಳಗೊಂಡ ಥಿಯೇಟರ್ ಕಮಾಂಡ್ ರಚನೆಗೂ ಜ|ರಾವತ್ ಅವರು ಮುಂದಾಗಿದ್ದರು. ಅಂದರೆ ನೌಕಾದಳ ಮತ್ತು ವಾಯು ಸೇನೆಗೆ ಸಮ್ಮಿಳಿತ ಕಮಾಂಡ್‌ಗಳನ್ನು ರಚಿಸುವ ಯೋಜನೆ ರೂಪಿಸಿದ್ದರು. ಇದಕ್ಕೆ ವಾಯುಸೇನೆಯ ಒಳಗೆ ಟೀಕೆಯೂ ವ್ಯಕ್ತವಾಗಿತ್ತು. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಜ|ರಾವತ್ ಅವರು, ನೌಕಾದಳಕ್ಕಾಗಿ ಮೊದಲ ಸಮ್ಮಿಳಿತ ಕಮಾಂಡ್ ರಚನೆಯ ನಿರ್ಧಾರ ಮಾಡಿದ್ದರು. ಇದು 2022ರ ಮಧ್ಯಭಾಗದಲ್ಲಿ ಜಾರಿಗೆ ಬರಬೇಕಾಗಿತ್ತು.
2016ರಲ್ಲಿ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದಾಗ, ಇದರ ಯೋಜನೆ ರೂಪಿಸಿದ್ದವರು ಜ|ರಾವತ್ ಅವರು. ಅಲ್ಲದೆ ಈಶಾನ್ಯ ಭಾರತದಲ್ಲಿನ ಉಗ್ರವಾದ ಮಟ್ಟಹಾಕುವಲ್ಲಿಯೂ ಇವರ ಪಾತ್ರ ಗಣನೀಯವಾಗಿದೆ. ಯುದ್ಧತಂತ್ರ ವಿಚಾರದಲ್ಲಿ ನಿಪುಣರಾಗಿದ್ದ ಜ|ರಾವತ್ ಅವರು, ಸದಾ ಹಸನ್ಮುಖೀ. ಅಂದ ಹಾಗೆ, ಇವರು ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು.