Advertisement

ಸೇನೆ, ಪ್ರಧಾನಿಗೆ ಗೌರವ ನೀಡದ ಕಾಂಗ್ರೆಸ್‌

02:24 AM Mar 27, 2019 | Team Udayavani |

ಉಡುಪಿ: ಸೈನಿಕರು ಮತ್ತು ಸ್ವತಃ ತನ್ನ ಪಕ್ಷದಿಂದಲೇ ಆಯ್ಕೆಯಾದ ಪ್ರಧಾನಿಗೆ ಗೌರವ ನೀಡದ ಕಾಂಗ್ರೆಸನ್ನು ಅಧಿಕಾರಕ್ಕೇರಲು ಬಿಡಬಾರದು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

Advertisement

ಮಂಗಳವಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ನಾಯಕರು ಸೈನಿಕರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪಾಕ್‌ ಪ್ರಧಾನಿಗೆ ಶಾಂತಿ ನೊಬೆಲ್‌ ಕೊಡಬೇಕು ಎನ್ನುವವರನ್ನು ಕಾಂಗ್ರೆಸ್‌ ಸಮರ್ಥಿಸುತ್ತಿದೆ. ಆದರೆ ಅದೇ ಪಾಕಿಸ್ಥಾನ ಭಾರತದ ಕಾಲಿಯಾ ಎಂಬ ಯೋಧನನ್ನು ಕೊಂದು ಹೆಣ ಕಳುಹಿಸಿತ್ತು ಎಂಬುದನ್ನು ಮರೆಯಬಾರದು ಎಂದು ನಿರ್ಮಲಾ ಹೇಳಿದರು.

ಪುಲ್ವಾಮಾ ದಾಳಿ ಬಳಿಕ ದೇಶ ಆಕ್ರೋಶ, ದುಃಖ ದಲ್ಲಿತ್ತು. ಸುಮ್ಮನೆ ಇದ್ದರೆ ದೇಶ ಕ್ಷಮಿಸದು ಎಂದು ಮೋದಿಯವರು ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲು ನಿರ್ಧರಿಸಿದರು. ಭಯೋತ್ಪಾದನೆ ಬಗ್ಗೆ ಮೋದಿ “ಝೀರೋ ಟಾಲರೆನ್ಸ್‌’ ಹೊಂದಿದ್ದಾರೆ. ಇಂಥ ಪ್ರಧಾನಿ ಬೇಕು ಎಂದರು.

ಸೈನಿಕರಿಗೆ ಸ್ವಾತಂತ್ರ್ಯ
ಭಯೋತ್ಪಾದನೆ ವಿರುದ್ಧ ತಿರುಗೇಟು ನೀಡಲು ಸೈನಿಕರಿಗೆ ಮೋದಿಯವರು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಮುಂಬಯಿ ದಾಳಿ ಸಂದರ್ಭ ಇಂಥ ಸ್ವಾತಂತ್ರ್ಯ ವನ್ನು ಅಂದಿನ ಸರಕಾರ ನೀಡಿರಲಿಲ್ಲ ಎಂದರು.

Advertisement

ಕಾಯಿದೆ ಪ್ರತಿ ಹರಿದಿದ್ದರು
ಅಂದು ಕಾಯಿದೆಯೊಂದರ ಪ್ರತಿಯನ್ನು ತನ್ನದೇ ಪಕ್ಷದ ಪ್ರಧಾನಿ ವಿದೇಶದಲ್ಲಿರುವಾಗ ಪತ್ರಿಕಾಗೋಷ್ಠಿಯಲ್ಲಿ ಹರಿದೆಸೆದಿದ್ದ ವ್ಯಕ್ತಿ ಇಂದು ತಾನೇ ಪ್ರಧಾನಿಯಾಗುವ ಹಗಲುಗನಸು ಕಾಣು ತ್ತಿದ್ದಾರೆ. ಅದು ನನಸಾಗದು. ಮೋದಿಯಂಥ ನಾಯಕ ಇನ್ನೊಬ್ಬರಿಲ್ಲ, ಅವರು ಮತ್ತೂಮ್ಮೆ ಪ್ರಧಾನಿ ಆಗಬೇಕು ಎಂದರು.

ಶೋಭಾಗೆ ಮೆಚ್ಚುಗೆ
ಶೋಭಾ ಕರಂದ್ಲಾಜೆ ಸಂಸತ್ತಿನ ರಕ್ಷಣಾ ಸ್ಥಾಯೀ ಸಮಿತಿ ಸದಸ್ಯೆಯಾಗಿ ಉತ್ತಮ ಕೆಲಸ ಮಾಡಿ ದ್ದಾರೆ. ನಾನು ವಾಣಿಜ್ಯ ಸಚಿವೆಯಾಗಿದ್ದಾಗ ಅಡಿಕೆ ಬೆಳೆಗಾರರು ಸೇರಿದಂತೆ ರೈತರ ಸಮಸ್ಯೆ ಬಗ್ಗೆ ಅನೇಕ ಬಾರಿ ಪ್ರಸ್ತಾವಿಸಿದ್ದಾರೆ. ಅದರನ್ವಯ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರನ್ನು ಕಳೆದ ಬಾರಿಗಿಂತಲೂ ಅಧಿಕ ಅಂತರದಲ್ಲಿ ಗೆಲ್ಲಿಸಬೇಕು ಎಂದು ನಿರ್ಮಲಾ ತಿಳಿಸಿದರು.

ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಅಭ್ಯರ್ಥಿ ಶೋಭಾ ಕರಂದ್ಲಾಜೆ, ಮುಖಂಡರಾದ ಕೋಟ ಶ್ರೀನಿವಾಸ ಪೂಜಾರಿ, ಎಂ.ಪಿ. ಕುಮಾರಸ್ವಾಮಿ, ಡಿ.ಎಸ್‌. ಸುರೇಶ್‌, ಬೆಳ್ಳಿ ಪ್ರಕಾಶ್‌, ಲಾಲಾಜಿ ಆರ್‌. ಮೆಂಡನ್‌, ಸುಕುಮಾರ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುರೇಶ್‌, ಉದಯಕುಮಾರ್‌ ಶೆಟ್ಟಿ, ಭಾರತಿ ಶೆಟ್ಟಿ, ದಿನಕರ ಬಾಬು, ರೇಷ್ಮಾ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಭೋಜೇಗೌಡ ಉಪಸ್ಥಿತರಿದ್ದರು.

ಕುಯಿಲಾಡಿ ಸುರೇಶ್‌ ನಾಯಕ್‌, ಕುತ್ಯಾರು ನವೀನ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮಹಾಘಟಬಂಧನ್‌ ಪಿಎಂ ಅಭ್ಯರ್ಥಿ: ನಿರ್ಮಲಾ ವ್ಯಂಗ್ಯ
ಉಡುಪಿ: ಮಹಾಘಟಬಂಧನ್‌ ಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗದ ಸ್ಥಿತಿಯಲ್ಲಿವೆ ಎಂದು ನಿರ್ಮಲಾ ಸೀತಾರಾಮನ್‌ ವ್ಯಂಗ್ಯವಾಡಿದ್ದಾರೆ.

ಮಣಿಪಾಲದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ವಿರುದ್ಧ ಯಾವುದೇ ಆರೋಪ ಸಾಬೀತುಪಡಿಸ ಲಾಗದೆ ಕೇವಲ “ಚೋರ್‌’ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದಾರೆ. ಸಿಎಜಿ, ರಫೇಲ್‌ ಒಪ್ಪಂದ ಕುರಿತು ಸ್ಪಷ್ಟಪಡಿಸಿದೆ. ಇದರ ಪ್ರತಿಯನ್ನು ಕಾನೂನುಬಾಹಿರವಾಗಿ ಪಡೆಯಲಾಗಿದೆ. ಆದರೆ ಇದು ಹೇಗೆಂಬ ಕುರಿತು ಈಗ ಹೇಳಲು ಅಸಾಧ್ಯ, ನ್ಯಾಯಾಲಯಕ್ಕೆ ತಿಳಿಸಲಿದ್ದೇವೆ ಎಂದರು.

ನೌಕಾಪಡೆ ಮುಖ್ಯಸ್ಥರ ಭೇಟಿ
ಇಂದು ಮೀನುಗಾರರ ನಿಯೋಗದ ಜತೆ ಮಾತನಾಡಿದ್ದೇನೆ. ಆತಂಕದಿಂದಿರುವ ಮೀನು ಗಾರರು ಮತ್ತು ನೌಕಾ ಪಡೆಯ ಮುಖ್ಯಸ್ಥರನ್ನು ಭೇಟಿ ಮಾಡಿಸಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಿಸುತ್ತೇನೆ ಎಂದರು.

ಸೂಕ್ಷ್ಮ ವಿಷಯದಲ್ಲಿ ಆರೋಪ ಸಲ್ಲ
ಕಾಂಗ್ರೆಸ್‌- ಜೆಡಿಎಸ್‌ ಅಭ್ಯರ್ಥಿ ನೌಕಾ ಪಡೆಯ ಹಡಗು ಢಿಕ್ಕಿ ಹೊಡೆದ ಸಾಧ್ಯತೆ ಇದೆ ಎಂದು ಆರೋಪಿಸಿದ ಬಗ್ಗೆ ಗಮನ ಸೆಳೆದಾಗ, ದಾಖಲೆ ಇದ್ದರೆ ನಾನು ತನಿಖೆ ಮಾಡಿಸಲು ಬದ್ಧ. ಇಂತಹ ಸೂಕ್ಷ್ಮ ವಿಷಯದಲ್ಲಿ ಕೇವಲ ಆರೋಪ ಹೊರಿಸುವುದು ಸರಿಯಲ್ಲ. ಯಾವುದೇ ರೀತಿಯ ಪ್ರಚೋದನೆ, ಪ್ರಲೋಭನೆ ಬೇಡ ಎಂದು ನಿರ್ಮಲಾ ಹೇಳಿದರು.

ರಾಹುಲ್‌ಗೆ ಜೇಟಿÉ ಉತ್ತರ
ರಾಹುಲ್‌ ಗಾಂಧಿ ಬಡವರಿಗೆ ವಾರ್ಷಿಕ 72,000 ರೂ. ವರಮಾನ ನೀಡುವ ಘೋಷಣೆ ಮಾಡಿರುವ ಬಗ್ಗೆ, ಈಗಾಗಲೇ ವಿತ್ತ ಸಚಿವ ಅರುಣ್‌ ಜೇಟಿÉ ನಮ್ಮ ಸರಕಾರ ವಿವಿಧ ಯೋಜನೆಗಳ ಮೂಲಕ ಇಷ್ಟು ನೆರವನ್ನು ಬಡವರ್ಗಕ್ಕೆ ನೀಡುತ್ತಿದೆ ಎಂದು ಉತ್ತರಿಸಿದ್ದಾರೆ ಎಂದರು. ಇಂದಿರಾ ಗಾಂಧಿ 1971ರಲ್ಲಿ ಗರೀಬಿ ಹಠಾವೋ ಘೋಷಿಸಿದ್ದು, ಈಗಲೂ ಈ ಸ್ಥಿತಿ ಇರುವುದೇಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next