ಸ್ಟಾಕ್‌ಹೋಮ್: 2018ರಲ್ಲಿ ವಿಶ್ವಾದ್ಯಂತ ಮಿಲಿಟರಿ ಯುದ್ಧೋಪಕರಣಗಳ ವಹಿವಾಟಿನಲ್ಲಿ ಏರಿಕೆ ಕಂಡು ಬಂದಿದೆ. ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಶೇ. 5ರಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ಹೊರಹಾಕಿದೆ. ಈ ಕುರಿತಾದ ವರದಿ ಸೋಮವಾರದಂದು ಬಿಡುಗಡೆಗೊಂಡಿದೆ.
ಜಗತ್ತಿನ ನೂರು ಹೆಸರಾಂತ ಯುದ್ಧೋಪಕರಣ ತಯಾರಿ ಕಂಪೆನಿಗಳ ಒಟ್ಟು ವ್ಯವಹಾರವೇ 420 ಬಿಲಿಯನ್ ಡಾಲರ್ ನಷ್ಟಾಗಿತ್ತು ಮತ್ತು ಇವುಗಳಲ್ಲಿ ಅಮೆರಿಕಾ ದೇಶದ ಕಂಪೆನಿಗಳದ್ದೇ ಸಿಂಹಪಾಲು ಎಂಬುದು ಇನ್ನೊಂದು ಗಮನಾರ್ಹ ಅಂಶವಾಗಿದೆ.
ಒಟ್ಟು ಜಾಗತಿಕ ಮಾರುಕಟ್ಟೆಯ 59 ಪ್ರತಿಶತ ವ್ಯವಹಾರವನ್ನು ಅಮೆರಿಕಾದ ಶಸ್ತ್ರಾಸ್ತ್ರ ಕಂಪೆನಿಗಳೇ ದಾಖಲಿಸಿರುವುದು ಈ ಕ್ಷೇತ್ರದಲ್ಲಿ ಅಮೆರಿಕಾ ಹೊಂದಿರುವ ಪಾರಮ್ಯಕ್ಕೆ ಸಾಕ್ಷಿಯಾಗಿದೆ. ಈ ಕಂಪೆನಿಗಳು ಒಟ್ಟಾರೆ 246 ಬಿಲಿಯನ್ ಡಾಲರ್ ವ್ಯವಹಾರವನ್ನು ದಾಖಲಿಸಿದ್ದು ಇದು 2017ರ ವಹಿವಾಟಿಗಿಂತ 7.2 ಪ್ರತಿಶತ ಅಧಿಕವಾಗಿದೆ.
ಚೀನಾ ಮತ್ತು ರಷ್ಯಾ ದೇಶಗಳಿಗೆ ಪ್ರತಿಸ್ಪರ್ಧಿಯಾಗಿ ಮೂಡಿಬರಲು ಟ್ರಂಪ್ ಆಡಳಿತವು ತನ್ನ ಶಸ್ತ್ರಾಸ್ತ್ರಗಳನ್ನು ಆಧುನೀಕರಣಗೊಳಿಸಲು ನಿರ್ಧರಿಸಿದ್ದೇ ಅಮೆರಿಕಾ ಶಸ್ತ್ರಾಸ್ತ್ರ ಮಾರಾಟ ಕಂಪೆನಿಗಳಿಗೆ ವರದಾನವಾಗಿ ಪರಿಣಮಿಸಿತ್ತು.
ಇನ್ನು ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರಗಳಲ್ಲಿ ರಷ್ಯಾ ದ್ವಿತೀಯ ಸ್ಥಾನದಲ್ಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ 8.6 ಪ್ರತಿಶತ ಪಾಲನ್ನು ಹೊಂದುವ ಮೂಲಕ ಈ ಸಾಧನೆಯನ್ನು ದಾಖಲಿಸಿದೆ. ನಂತರದ ಎರಡು ಸ್ಥಾನಗಳಲ್ಲಿ ಇಂಗ್ಲಂಡ್ ಮತ್ತು ಫ್ರಾನ್ಸ್ ದೇಶಗಳಿದ್ದು ಜಾಗತಿಕ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಇವುಗಳ ಪಾಲು ಕ್ರಮವಾಗಿ 8.4 ಮತ್ತು 5.5 ಪ್ರತಿಶತಗಳಾಗಿವೆ.
ಸೂಕ್ತ ಮಾಹಿತಿ ಅಲಭ್ಯತೆಯಿಂದಾಗಿ ಈ ಸಮೀಕ್ಷೆಯಲ್ಲಿ ಚೀನಾ ದೇಶವನ್ನು ಪರಿಗಣಿಸಿಲ್ಲವಾದರೂ ಒಂದು ಅಂದಾಜಿನ ಪ್ರಕಾರ ಚೀನಾದ ಮೂರರಿಂದ ಏಳು ಕಂಪೆನಿಗಳು ಜಗತ್ತಿನ ನೂರು ಪ್ರಮುಖ ಶಸ್ತ್ರಾಸ್ತ್ರ ತಯಾರಿ ಕಂಪೆನಿಗಳಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ಅಂದಾಜಿಸಲಾಗುತ್ತಿದೆ.
ಅಮೆರಿಕಾ ಮೂಲದ ಶಸ್ತ್ರಾಸ್ತ್ರ ತಯಾರಿಕಾ ಕಂಪೆನಿಯಾಗಿರುವ ಲಾಕ್ ಹೀಡ್ ಮಾರ್ಟಿನ್ 2009ರಿಂದಲೇ ವಿಶ್ವದ ಅತೀದೊಡ್ಡ ಶಸ್ತ್ರಾಸ್ತ್ರ ತಯಾರಿ ಕಂಪೆನಿ ಪಟ್ಟದಲ್ಲಿದೆ ಮತ್ತು ಕಳೆದ ವರ್ಷ ಈ ಕಂಪೆನಿಯು 47.3 ಬಿಲಿಯನ್ ಡಾಲರ್ ವ್ಯವಹಾರವನ್ನು ದಾಖಲಿಸಿದೆ.