Advertisement

ಶಿಲೆಯಲ್ಲಿ ಅರಳುತ್ತಿದೆ ಮುನೀಂದ್ರ ಶ್ರೀಗಳ ಗದ್ದುಗೆ

11:31 AM Mar 25, 2019 | Team Udayavani |
ವಾಡಿ: ಸುಕ್ಷೇತ್ರ ಹಳಕರ್ಟಿ ಗ್ರಾಮದ ಕಟ್ಟಮನಿ ಹಿರೇಮಠದ ಮೂವರು ಲಿಂ.ಮುನೀಂದ್ರ ಶಿವಯೋಗಿಗಳ ಗದ್ದುಗೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅತ್ಯಾಕರ್ಷಕ ಶಿಲಾದೇಗುಲ ಮಠದ ಸೌಂದರ್ಯ ಹೆಚ್ಚಿಸುತ್ತಿದೆ.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಮೃತ ಹಸ್ತದಿಂದ ಕತೃ ಗದ್ದುಗೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಎರಡು ವರ್ಷಗಳು ಕಳೆದಿದ್ದು, ಸದ್ಯ ಶೇ.70 ರಷ್ಟು ಗದ್ದುಗೆ ಜೋರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಭಕ್ತಿ ಸೇವೆ ಮೂಲಕ ಕಟ್ಟಿಮನಿ ಮಠದತ್ತ ಭಕ್ತರನ್ನು ಆಕರ್ಷಿಸಿರುವ ಲಿಂ. ಮುನೀಂದ್ರ ಶಿವಯೋಗಿಗಳ ಗದ್ದುಗೆ ಸ್ಮಾರಕವಾಗಿ ನಿಲ್ಲಬೇಕು ಎಂಬ ಸದ್ಯದ ಪೀಠಾಧಿಪತಿ ಅಭಿನವ ಶ್ರೀಮುನೀಂದ್ರ ಸ್ವಾಮೀಜಿಗಳ ಕನಸು ಸಾಕಾರಗೊಳ್ಳುತ್ತಿದೆ.
ಶಿಲಾ ದೇಗುಲಗಳ ತವರೂರಾಗಿರುವ ಐತಿಹಾಸಿಕ ಹಂಪಿ ಸಮೀಪದ ಬುಕ್‌ ಸಾಗರ ಪರಿಸರದಲ್ಲಿನ ಶ್ವೇತವರ್ಣದ ಶಿಲಾ
ಬಂಡೆಗಳನ್ನು ಹಳಕರ್ಟಿ ಗ್ರಾಮಕ್ಕೆ ತರಿಸಲಾಗಿದೆ. ಈ ಬಂಡೆಗಳು ಹಾಗೂ 22 ಕಂಬಗಳಿಂದ ಕತೃ ಗದ್ದುಗೆ ನಿರ್ಮಾಣಗೊಳ್ಳುತ್ತಿದೆ. ಕಟ್ಟಡದ ಗುಹೆ ಮಾರ್ಗದಲ್ಲಿ ಲಿಂ.ಮುನೀಂದ್ರ ಶ್ರಿಗಳ ಗದ್ದುಗೆ ನಿರ್ಮಾಣಗೊಂಡಿವೆ. ಮೇಲ್ಭಾಗದಲ್ಲಿ ಶ್ರೀಗಳ ಶಿಲಾಮೂರ್ತಿ ಸ್ಥಾಪಿಸಲಾಗುತ್ತಿದೆ. ಶಿಲ್ಪ ಕಲಾವಿದನ ಕೈಚಳಕಕ್ಕೆ ಸಿಕ್ಕು ಇಡೀ ಗದ್ದುಗೆ ಕಲಾಕೃತಿಗಳಿಂದ ಬೆಸೆದುಕೊಂಡಿದೆ. ಸ್ಥಳದಲ್ಲಿಯೇ ಶಿಲೆಗಳ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಗದ್ದುಗೆಗೆ ಅಂತಿಮ ಸ್ಪರ್ಷ ನೀಡಲಾಗುತ್ತಿದೆ.
ಹಳಕರ್ಟಿ ಗ್ರಾಮವೊಂದು ಐತಿಹಾಸಿಕ ತಾಣವಾಗಿದ್ದು, ರಾಷ್ಟ್ರಕೂಟರ ಆಡಳಿತದ ಹಲವು ಕುರುಹುಗಳು ಇಲ್ಲಿವೆ. ಶಿಲಾಶಾಸನಗಳು, ಕೋಟೆ ಕೊತ್ತಲಗಳು, ಬಾವಿ, ದೇವಸ್ಥಾನಗಳು ಹಳಕರ್ಟಿ ಗ್ರಾಮದ ಇತಿಹಾಸ ಹೇಳುತ್ತಿವೆ. ಶ್ರೀ ವೀರಭದ್ರೇಶ್ವರ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ ಹಾಗೂ ಕಟ್ಟಿಮನಿ ಹಿರೇಮಠ, ಗ್ರಾಮದ ಭಕ್ತಿಯ ಕೇಂದ್ರಗಳಾಗಿವೆ. ಪ್ರತಿ ವರ್ಷ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆದು ಕಲ್ಯಾಣ ನಾಡಿನ ಗಮನ ಸೆಳೆಯುತ್ತದೆ.
ನಿರ್ಮಾಣ ಹಂತದಲ್ಲಿರುವ ಲಿಂ.ಮುನೀಂದ್ರ ಶ್ರೀಗಳ ಗದ್ದುಗೆಯೂ ಸಹ ಗ್ರಾಮದ ಭಕ್ತಿಯ ಕೇಂದ್ರಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದು, ನೂತನ ಗದ್ದುಗೆಯ ಲೋಕಾರ್ಪಣೆಗಾಗಿ ಭಕ್ತರು ಕಾಯ್ದು ಕುಳಿತಿದ್ದಾರೆ.
ಹಳಕರ್ಟಿ ಕಟ್ಟಿಮನಿ ಹಿರೇಮಠಕ್ಕೆ ಲಿಂ.ಮುನೀಂದ್ರ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಶ್ರೀಗಳು ಮಠವನ್ನು
ಕಟ್ಟುವ ಬದಲು ಭಕ್ತರಮನಸ್ಸು ಕಟ್ಟಿದ್ದಾರೆ.
ನಂಬಿದ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡಿ ಪವಾಡ ಮಾಡಿದ್ದಾರೆ. ಲಿಂ.ಮುನಿಂದ್ರ ಶ್ರೀಗಳ ಕೊಡುಗೆ ಚಿರಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವ ಕಾರಣಕ್ಕೆ ಸುಂದರ ಶಿಲಾ ಗದ್ದುಗೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಭಕ್ತರು ಸಹಾಯ-ಸಹಕಾರ ನೀಡಲು ಮುಂದೆ ಬಂದಿರುವುದು ಸಂತೋಷ ತಂದಿದೆ.
2020ರ ಫೆಬ್ರವರಿಯಲ್ಲಿ ಲಿಂ.ಮುನೀಂದ್ರ ಶ್ರೀಗಳ ಪುಣ್ಯಾರಾಧನೆ ಸಮಾರಂಭದಲ್ಲಿ ಜಗದ್ಗುರುಗಳ ಮೂಲಕ ಗದ್ದುಗೆ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಮುನೀಂದ್ರ ಸ್ವಾಮೀಜಿ ಪೀಠಾಧಿಪತಿ, ಕಟ್ಟಿಮನಿ ಹಿರೇಮಠ ಹಳಕರ್ಟಿ
Advertisement

Udayavani is now on Telegram. Click here to join our channel and stay updated with the latest news.

Next