Advertisement

ಪೊಲೀಸರಿಗೆ ಶಸ್ತ್ರ ಬಲ:  ಹಳೆಯ ಶಸ್ತ್ರಾಸ್ತ್ರಗಳು ಹಂತಹಂತವಾಗಿ ವಿಲೇವಾರಿ

01:16 AM Aug 24, 2022 | Team Udayavani |

ಬೆಂಗಳೂರು: ಸದ್ಯದಲ್ಲೇ ರಾಜ್ಯದ ಪೊಲೀಸರ ಕೈಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳಿಂದ ಬಲಿಷ್ಠವಾಗಲಿವೆ. ಪೊಲೀಸ್‌ ಪಡೆಗಳ ಬಲವರ್ಧನೆಯತ್ತ ಮಹತ್ವದ ಹೆಜ್ಜೆ ಇರಿಸಲಾಗಿದ್ದು, ರಾಜ್ಯ ಪೊಲೀಸ್‌ ಇಲಾಖೆಹಳೆಯ ಆಯುಧಗಳಿಗೆ ಮುಕ್ತಿ ನೀಡಿ, ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮುಂದಾಗಿದೆ.

Advertisement

ಅಪರಾಧ ಪ್ರಕರಣಗಳನ್ನು ತಡೆಯಲು, ಕ್ರಿಮಿನಲ್‌ಗ‌ಳನ್ನು ಮಟ್ಟ ಹಾಕಲು ಮತ್ತು ಕಿಡಿಗೇಡಿಗಳಿಗೆ ಅಂಕುಶ ಹಾಕಬೇಕಾದರೆ ಪೊಲೀಸರ ಬಳಿ ಹೊಸ ಶಸ್ತ್ರಾಸ್ತ್ರಗಳು ಇರಬೇಕು. ಪೊಲೀಸ್‌ ಪಡೆಯ ಆಧುನೀಕರಣದ ಅಗತ್ಯವನ್ನು ಬಹಳ ಹಿಂದಿನಿಂದಲೇ ಪ್ರತಿಪಾದಿಸುತ್ತ ಬರಲಾಗಿದೆ. ಈಗ ಪೊಲೀಸ್‌ ಇಲಾಖೆಯು ಹೊಸ ಶಸ್ತ್ರಾಸ್ತ್ರಗಳನ್ನು ಹಂತ ಹಂತವಾಗಿ ಪೂರೈಸಲು ನಿರ್ಧರಿಸಿದೆ.

ಕಾನ್‌ಸ್ಟೆಬಲ್‌ಗಳಿಗೆ ಎಸ್‌ಎಲ್‌ಆರ್‌(ರೈಫ‌ಲ್‌), ಮೇಲ್ದರ್ಜೆಯ ಅಧಿಕಾರಿಗಳಿಗೆ ಗ್ಲಾಕ್‌ ಪಿಸ್ತೂಲ್‌, ಎಂಪಿ5 ಪಿಸ್ತೂಲ್‌ ಮತ್ತು ಇತರ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ಕೇಂದ್ರ ಗೃಹ ಇಲಾಖೆಯ ಸೂಚನೆ ಮೇರೆಗೆ ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ, ವಿಶೇಷ ಪಡೆಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಕ್ರಮೇಣ ಪೂರೈಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಳೆಯ ಶಸ್ತ್ರಾಸ್ತ್ರಗಳ ವಿಲೇವಾರಿ
ಪೊಲೀಸ್‌ ಇಲಾಖೆಯಲ್ಲಿ ಸುಮಾರು 10-15 ವರ್ಷಗಳಷ್ಟು ಹಳೆಯ ಮತ್ತು ಬಳಕೆಯಲ್ಲಿಇಲ್ಲದ, ನಿರುಪಯುಕ್ತ 7,634 ಆಯುಧಗಳು ಮತ್ತು ಅವುಗಳ 49,091 ಬಿಡಿಭಾಗಗಳನ್ನು ವಿಲೇವಾರಿ ಮಾಡಲಾಗಿದೆ.

ಹತ್ತಾರು ವರ್ಷಗಳಿಂದ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಪೊಲೀಸರು ಹಳೆಗಾಲದ ಶಸ್ತ್ರಗಳನ್ನೇ ಬಳಸುತ್ತಿದ್ದಾರೆ. ಆದರೆ ಆರೋಪಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಿ ದಾಳಿ ಸಂಘಟಿಸುತ್ತಾರೆ, ಪೊಲೀಸರು ನಿಸ್ಸಹಾಯಕರಾಗಿರಬೇಕಾಗುತ್ತದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದವು. ಹೀಗಾಗಿ ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ನಿಯಮಾನುಸಾರವಾಗಿ ಹಳೆಯ ಶಸ್ತ್ರಾಸ್ತ್ರಗಳನ್ನು ವಿಲೇವಾರಿ ಮಾಡಲು ಸೂಚಿಸಿತ್ತು.

Advertisement

ಇದರ ಬೆನ್ನಲ್ಲೇ ರಾಜ್ಯ ಸರಕಾರವು ಸಿಐಡಿ ಪೊಲೀಸ್‌ ಮಹಾನಿರ್ದೇಶಕ ಪಿ.ಎಸ್‌. ಸಂಧು ನೇತೃತ್ವದಲ್ಲಿ ಈ ಸಂಬಂಧ ಅಧಿಕಾರಿಗಳ ಸಮಿತಿ ರಚಿಸಿತ್ತು.

ಈ ಸಮಿತಿ ಭಯೋತ್ಪಾದನೆ, ನಕ್ಸಲ್‌ ನಿಗ್ರಹ, ಕರಾವಳಿ ಭದ್ರತೆ ನಿರ್ವಹಣೆ ಮತ್ತು ರಾಜ್ಯ ಕೈಗಾರಿಕಾ ಭದ್ರತೆಗಾಗಿ ರಾಜ್ಯಕ್ಕೆ ಭಾರತೀಯ ಆರ್ಡಿನೆನ್ಸ್‌ ಫ್ಯಾಕ್ಟರಿಗಳಿಂದ, ಭಾರತೀಯ ಸೇನೆ, ಸಿಎಪಿಎಫ್ ಸಂಸ್ಥೆಗಳಿಂದ ವರ್ಗಾವಣೆ ಮಾಡಿಕೊಳ್ಳಲಾದ ಮತ್ತು ಮಾರಾಟಗಾರ ಸಂಸ್ಥೆಗಳ ಮೂಲಕ ಸಂಗ್ರಹಿಸಲಾದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗೆ ಹೆಚ್ಚುವರಿಯಾಗಿ ಸಂಗ್ರಹಿಸಲಾದ ಶಸ್ತ್ರಾಸ್ತ್ರಗಳು, ಬಿಡಿಭಾಗಗಳ ತಪಾಸಣೆ ನಡೆಸಿತ್ತು. ನಿರಂತರ ಬಳಕೆಯಿಂದ ನಿರುಪಯುಕ್ತವಾಗಿರುವ, ಬಳಕೆಯಲ್ಲಿಲ್ಲದ ಶಸ್ತ್ರಾಸ್ತ್ರಗಳ ತಪಾಸಣೆ ನಡೆಸಿ, ದೃಢೀಕರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ 7,634 ಆಯುಧಗಳು ಮತ್ತು 49,091 ಬಿಡಿಭಾಗಗಳ ವಿಲೇವಾರಿಗೆ ಸರಕಾರ ಸೂಚಿಸಿತ್ತು. ಇತ್ತೀಚೆಗೆ ಕೆಎಸ್‌ಆರ್‌ಪಿಯ ಮೂರನೇ ಬೆಟಾಲಿಯನ್‌ನ ಹಿರಿಯ ಅಧಿಕಾರಿಗಳು ಶಸ್ತ್ರಾಸ್ತ್ರಗಳ ವಿಲೇವಾರಿ ಪೂರೈಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರ್ಖಾನೆಗಳಲ್ಲಿ ವಿಲೇ
ಪೊಲೀಸ್‌ ಇಲಾಖೆ ಮತ್ತು ಭದ್ರತ ಪಡೆಗಳಿಗೆ ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಇತರೆಡೆ ಇರುವ ಶಸ್ತ್ರಾಸ್ತ್ರಗಳು ಮತ್ತು ಬಿಡಿಭಾಗ ಉತ್ಪಾದಕ ಕಾರ್ಖಾನೆಗಳಿಂದ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುತ್ತದೆ. ಈ ಕಾರ್ಖಾನೆಗಳ ಪೈಕಿ ಕೆಲವು ವಿಲೇವಾರಿಯಾದ ಶಸ್ತ್ರಾಸ್ತ್ರಗಳನ್ನು ಕರಗಿಸಿ, ಹೊಸ ಆಯುಧಗಳಿಗೆ ಬೇಕಾಗುವ ಉಕ್ಕನ್ನು ತಯಾರಿಸುತ್ತವೆ. ಸ್ಟೀಲ್‌ನ ಗ್ರೇಡ್‌ ಆಧರಿಸಿ ಶಸ್ತ್ರಾಸ್ತ್ರ ಉತ್ಪಾದಕ ಕಾರ್ಖಾನೆಗಳಿಗೆ ಪೂರೈಸುತ್ತವೆ. ಅನಂತರ ಹೊಸ ಮಾದರಿಯ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಲೇವಾರಿಯಾದ ಶಸ್ತ್ರಾಸ್ತ್ರಗಳು
410 ಮುಸ್ಕಟ್‌ (4,746), ಟಿಎಂಸಿ 45 (576), 038 ರಿವಾಲ್ವರ್‌ನ 11 ಮಾದರಿಯ (2,261) 16 ಬೋರ್‌ ಡಿಬಿಬಿಎಲ್‌ ಗನ್‌ (3), 12 ಬೋರ್‌ ಡಿಬಿಬಿಎಲ್‌ ಗನ್‌ (15) ಮತ್ತು 12 ಬೋರ್‌ ಎಸ್‌ಬಿಬಿಎಲ್‌ ಗನ್‌ (33). ಒಟ್ಟು 7,634 ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿವಿಧ 49,091 ಬಿಡಿಭಾಗಗಳನ್ನು ವಿಲೇವಾರಿ ಮಾಡಲಾಗಿದೆ.

ಹೊಸ ಶಸ್ತ್ರಾಸ್ತ್ರಗಳ ವೈಶಿಷ್ಟ್ಯ 
 ಗ್ಲಾಕ್‌ ಪಿಸ್ತೂಲ್‌
ಬಹಳ ಹಗುರ. ಎಷ್ಟೇ ವರ್ಷ ಬಳಸಿದರೂ ಇದರ ಪಾಲಿಮರ್‌ ಫ್ರೆàಮ್‌ ಬಿರುಕು ಬಿಡುವುದಿಲ್ಲ. ಇತರ ಪಿಸ್ತೂಲ್‌ಗ‌ಳಿಗೆ ಹೋಲಿಸಿದರೆ ಗ್ಲಾಕ್‌ ಪಿಸ್ತೂಲ್‌ ಹಲವು ಹೆಚ್ಚು ಸುತ್ತು ಮದ್ದುಗುಂಡುಗಳನ್ನು ಹೊಂದಿರುತ್ತದೆ.

ಎಂಪಿ5 ಪಿಸ್ತೂಲ್‌
ಇದನ್ನು ಡಿ ಸ್ವಾಟ್‌, ಸಿ ಸ್ವಾಟ್‌ ಮತ್ತು ಗರುಡ ಪಡೆ ಸೇರಿ ವಿಶೇಷ ಭದ್ರತ ಪಡೆಗಳಿಗೆ ಮಾತ್ರ ನೀಡಲಾಗುತ್ತದೆ. ಗಣ್ಯರ ಭದ್ರತೆಗೆ ನಿಯೋಜಿಸಲ್ಪಡುವ ಪಡೆಗಳಷ್ಟೇ ಇದನ್ನು ಬಳಸುತ್ತವೆ. ಎಕೆ 47 ಮಾದರಿಯ ಕಾರ್ಯಕ್ಷಮತೆ ಹೊಂದಿರುವ ಪಿಸ್ತೂಲ್‌ ಇದು. ಇದು ಸ್ವಯಂಚಾಲಿತವಾಗಿದ್ದು, ಕ್ಲೋಸ್ಡ್ ಕ್ವಾರ್ಟರ್‌ ಬ್ಯಾಟಲ್‌ (ಸಿಕ್ಯೂಬಿ)ನಲ್ಲಿ ಬಳಸಲಾಗುತ್ತದೆ.

 ಎಸ್‌ಎಲ್‌ಆರ್‌ ರೈಫ‌ಲ್‌
ಹೆಚ್ಚಿನ ತೂಕ ಹೊಂದಿರುವ ರೈಫ‌ಲ್‌. ಇದರಿಂದ ಹೊರಬರುವ ಬುಲೆಟ್‌ಗೆ ಮನುಷ್ಯನ ದೇಹವನ್ನು ಛಿದ್ರಗೊಳಿಸುವ ಸಾಮರ್ಥ್ಯವಿದೆ. ಹೀಗಾಗಿ ಇದನ್ನು ಬಹಳ ಎಚ್ಚರಿಕೆಯಿಂದ ಬಳಸಲಾಗುತ್ತದೆ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next