Advertisement

ರಾಷ್ಟ್ರ ರಕ್ಷಣೆಗೆ ಸಮೃದ್ಧ ಶಸ್ತ್ರ: ಜೇಟ್ಲಿ

08:25 AM Jul 26, 2017 | Team Udayavani |

ಹೊಸದಿಲ್ಲಿ: ‘ದೇಶದ ಸಮಗ್ರತೆ ಕಾಪಾಡುವಷ್ಟು ಶಸ್ತ್ರಾಸ್ತ್ರ ಬಲ ನಮ್ಮ ಸೇನೆಯಲ್ಲಿದೆ’ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಗಳವಾರ ರಾಜ್ಯಸಭೆಗೆ ತಿಳಿಸಿದರು. ಗಡಿಯಲ್ಲಿ ಚೀನ ಪಿರಿಪಿರಿ ಅತಿರೇಕಕ್ಕೆ ತಲುಪಿದ್ದು, ಈ ನಡುವೆ ಕಳೆದ ವಾರ ಭಾರತೀಯ ಸೇನಾ ಪಡೆಯ ಸಾಮರ್ಥ್ಯದ ಬಗ್ಗೆ ಸಿಎಜಿ ವರದಿ ನೀಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅರುಣ್‌ ಜೇಟ್ಲಿ, ಸಿಎಜಿ ಕೇವಲ ಒಂದು ನಿರ್ದಿಷ್ಟ ಸಮಯದ ವಿಷಯಗಳನ್ನಾಧರಿಸಿ ವರದಿ ಸಿದ್ಧಪಡಿಸಿದೆ. ಆದರೆ ಈಗ ಆತಂಕ ಪಡಬೇಕಾದ ಪರಿಸ್ಥಿತಿಯೇನಿಲ್ಲ. ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳುವಂಥ ಶಸ್ತ್ರಾಸ್ತ್ರ ಹೊಂದಿದ್ದೇವೆ. ಸೇನಾ ಬಲವನ್ನು ಹೆಚ್ಚಿಸುವ ಪ್ರಕ್ರಿಯೆಯೂ ನಡೆದಿದೆ’ ಎಂದು ಹೇಳಿದರು.

Advertisement

ಆದರೆ ಜೇಟ್ಲಿ ಅವರ ಈ ಉತ್ತರಕ್ಕೆ ವಿಪಕ್ಷ ನಾಯಕರು ತೃಪ್ತರಾಗಲಿಲ್ಲ. ಕಾಂಗ್ರೆಸ್‌ ನಾಯಕ ಆನಂದ್‌ ಶರ್ಮಾ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಡೆಪ್ಯುಟಿ ಸ್ಪೀಕರ್‌ ಪಿ.ಜೆ.ಕುರಿಯನ್‌, ವಿಪಕ್ಷಗಳು ಬಯಸಿದರೆ ಈ ಬಗ್ಗೆ ಚರ್ಚಿಸಲು ಪ್ರತ್ಯೇಕವಾಗಿ ಸಮಯಾವಕಾಶ ನೀಡುವುದಾಗಿ ಹೇಳಿದರು.

ಸಿಎಜಿ ನೀಡಿದ ವರದಿಯಲ್ಲಿ, ಒಂದೊಮ್ಮೆ ಯುದ್ಧ ನಡೆದರೆ ಭಾರತೀಯ ಸೇನೆಯಲ್ಲಿ ಕೇವಲ 10 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರಗಳಿವೆಯಷ್ಟೆ. ಶೇ.40ರಷ್ಟು ಕೊರತೆ ಇದೆ ಎಂದು ಹೇಳಿತ್ತು. ಇದು ಭದ್ರತಾ ಸಾಮರ್ಥ್ಯದ ಬಗ್ಗೆ ತೀವ್ರ ಚರ್ಚೆಯನ್ನೇ ಹುಟ್ಟುಹಾಕಿದೆ.

ಚೀನೀ ಮಾಧ್ಯಮಗಳಲ್ಲಿ ಭಿನ್ನಧ್ವನಿ ಪ್ರಕಟ
ಚೀನದ ಮಾಧ್ಯಮಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಭೇಟಿ ಹಿನ್ನೆಲೆಯಲ್ಲಿ ಭಿನ್ನವಾದ ಅಭಿಪ್ರಾಯ ಪ್ರಕಟಿಸಿವೆ. ದೋವಲ್‌ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವಿನ ಗಡಿ ವಿವಾದದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚೀನ‌ ಯಾವುದೇ ಕಾರಣಕ್ಕೂ ತನ್ನ ನಿಲುವು ಬದಲಿಸುವುದಿಲ್ಲ ಎಂದು ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. ಆದರೆ, ದೋವಲ್‌ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವಿನ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಎಂದು ಚೀನ ಡೈಲಿ ವರದಿ ಮಾಡಿದೆ.

ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೇನೆ ಅತಿಕ್ರಮಣ ಮಾಡಿರುವುದನ್ನು ಭಾರತವೇ ಒಪ್ಪಿಕೊಂಡಿದೆ. ಹೀಗಾಗಿ ಡೋಕ್ಲಾಂನಲ್ಲಿ ನಿಯೋಜಿಸಲಾದ ಸೇನೆಯನ್ನು ತತ್‌ಕ್ಷಣ ಹಿಂಪಡೆದುಕೊಳ್ಳಲಿ.
– ವಾಂಗ್‌ ಯೀ, ಚೀನ ವಿದೇಶಾಂಗ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next