Advertisement

ಸಶಸ್ತ್ರ ಸೇನಾಪಡೆ-ಪೊಲೀಸ್‌, ಗೃಹರಕ್ಷಕ ದಳ ಪಥಸಂಚಲನ

03:14 PM Apr 22, 2019 | Team Udayavani |

ಹಾವೇರಿ: ಶಾಂತಿಯುತ, ಸುಗಮ ಹಾಗೂ ನಿರ್ಭಿತಿಯಿಂದ ಮತ ಚಲಾಯಿಸಿ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಹೊತ್ತ ಕೇಂದ್ರ ಸಶಸ್ತ್ರ ಸೇನಾಪಡೆ ಹಾಗೂ ಸ್ಥಳೀಯ ಪೊಲೀಸ್‌, ಗೃಹರಕ್ಷಕ ದಳದಿಂದ ರವಿವಾರ ಸಂಜೆ ನಗರದಲ್ಲಿ ಪಥಸಂಚಲನ ನಡೆಯಿತು.

Advertisement

ನಗರದ ಹುಕ್ಕೇರಿಮಠ ಪ್ರೌಢಶಾಲಾ ಆವರಣದಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ, ಜಿಲ್ಲಾ ಸ್ವೀಪ್‌ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ಪೊಲೀಸ್‌ ನಡಿಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಚಾಲನೆ ನೀಡಿದರು.

ಹುಕ್ಕೇರಿಮಠದ ಶಿವಲಿಂಗೇಶ್ವರ ಪ್ರೌಢಶಾಲಾ ಆವರಣದಿಂದ ಆರಂಭಗೊಂಡ ಸಮವಸ್ತ್ರ ಧರಿಸಿದ ಮಿಲಿಟರಿ ಪಡೆಯ ಶಿಸ್ತುಬದ್ಧ ನಡಿಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇವರೊಂದಿಗೆ ಪೊಲೀಸ್‌ ವಿವಿಧ ತುಕಡಿಗಳು, ಗೃಹ ರಕ್ಷಕದಳದವರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಗಾಂಧಿ ವೃತ್ತ, ಸುಭಾಸ್‌ ವೃತ್ತದ ವರೆಗೂ ಪಥಸಂಚಲನ ಜರುಗಿತು.

ಪೊಲೀಸ್‌, ಕೇಂದ್ರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ದಳದ ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಶಿಸ್ತುಬದ್ಧ ನಡಿಗೆ ನೋಡುಗರ ಮನದಲ್ಲಿ ಹೆಮ್ಮೆಯ ಜತೆಗೆ ಪೊಲೀಸ್‌ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾದವು.

ಪಥಸಂಚಲನ ಪೂರ್ವದಲ್ಲಿ ಕೇಂದ್ರ ಪಡೆ ಹಾಗೂ ಸ್ಥಳೀಯ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಹಾವೇರಿ ಲೋಕಸಭಾ ಕ್ಷೇತ್ರ ಅತ್ಯಂತ ಶಾಂತಿಯುತ ಮತ ಕ್ಷೇತ್ರ. ದುರ್ಬಲ ಮತದಾರರು, ಸಾರ್ವಜನಿಕರು ನಿರ್ಭಿಡೆಯಿಂದ ಮತ ಚಲಾಯಿಸಬೇಕು. ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ಅವಕಾಶವಿಲ್ಲದಂತೆ ನಿಗಾವಹಿಸಿ ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಪಡೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ಕರ್ತವ್ಯದಲ್ಲಿ ಎಲ್ಲರೂ ಸಮಾನರು. ಶಾಂತಿಯುತ, ನ್ಯಾಯ ಸಮ್ಮತ ಚುನಾವಣೆಗೆ ನಾವೆಲ್ಲ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾತನಾಡಿ, ಈಗಾಗಲೇ ಮತಗಟ್ಟೆವಾರು ಕೇಂದ್ರಪಡೆಯ ಹಾಗೂ ಪೊಲೀಸ್‌ ಮತ್ತು ಗೃಹರಕ್ಷಕ ಪೇದೆಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ತಮಗೆ ನಿಯೋಜಿತ ಮತಗಟ್ಟೆಗಳಿಗೆ ತೆರಳಿ ತಮಗೆ ವಹಿಸಿದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿರ್ಭಿತವಾದ ಶಾಂತಿಯುತ ಮತದಾನಕ್ಕೆ ತಾವೆಲ್ಲ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತವಾದ ಗೃಹರಕ್ಷಕ ಅಥವಾ ಪೊಲೀಸ್‌ ಸಿಬ್ಬಂದಿ ಗೈರು ಹಾಜರಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಕೇಂದ್ರ ಮೀಸಲು ಪಡೆಯ ಕಮಾಂಡೆಂಟ್ ರಮೇಶ ಕಬಾಡೆ ಮಾತನಾಡಿ, ತಮಗೆ ನಿರ್ವಹಿಸಿದ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ, ಮತಗಟ್ಟೆಯ ಹೊರಗೆ ಕರ್ತವ್ಯದಲ್ಲಿ ತೊಡಗಿ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಿ. ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಬದ್ಧರಾಗಿ ಕಾರ್ಯನಿರ್ವಹಿಸಿ ಎಂದು ಹೇಳಿದರು.

ಜಿಪಂ ಸಿಇಒ ಕೆ.ಲೀಲಾವತಿ, ಡಿವೈಎಸ್‌ಪಿ ಕುಮಾರಪ್ಪ, ಹಾವೇರಿ ಸಹಾಯಕ ಚುನಾವಣಾಧಿಕಾರಿ ಎನ್‌.ತಿಪ್ಪೇಸ್ವಾಮಿ ಇತರ ಅಧಿಕಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next