Advertisement

Armed Forces Flag Day 2023;ವೀರ ಯೋಧರಿಗೆ ಗೌರವ ಸಲ್ಲಿಸೋಣ

11:58 PM Dec 06, 2023 | Team Udayavani |

ಭಾರತೀಯ ಸಶಸ್ತ್ರ ಪಡೆಗಳ ಶ್ರೇಯೋಭಿವೃದ್ಧಿಗಾಗಿ ಡಿಸೆಂಬರ್‌ 7 ರಂದು ದೇಶಾದ್ಯಂತ ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸಲಾಗುತ್ತದೆ. ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಶದ ನಾಗರಿಕರಿಂದ ವಿಭಿನ್ನ ಶೈಲಿಯಲ್ಲಿ ದೇಣಿಗೆಯನ್ನು ಸಂಗ್ರಹಿಸಿ, ವೀರ ಯೋಧರು ಮತ್ತು ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡಲಾಗುತ್ತದೆ. ದೇಶಕ್ಕಾಗಿ ಬಲಿದಾನಗೈದ ಯೋಧರು ಮತ್ತು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಸೈನಿಕರ ಒಳಿತಿಗಾಗಿ 1949ರಲ್ಲಿ ಇಂತಹ ಒಂದು ವಿನೂತನ ಪರಿಕಲ್ಪನೆಗೆ ಚಾಲನೆ ನೀಡಲಾಯಿತು. ಇದಾದ ಬಳಿಕ ಪ್ರತೀವರ್ಷ ಡಿ. 7ರಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು
ಆಚರಿಸುತ್ತ ಬರಲಾಗಿದೆ.

Advertisement

ಉದ್ದೇಶವೇನು?
ಕೆಂಪು, ಗಾಢ ನೀಲಿ, ತಿಳಿ ನೀಲಿ ಬಣ್ಣದ ಪುಟ್ಟ ಧ್ವಜವನ್ನು, ಬ್ಯಾಡ್ಜ್ ಅಥವಾ ಧ್ವಜ ದಿನದ ಸ್ಟಿಕ್ಕರ್‌ ಅನ್ನು ಜನರಿಗೆ ನೀಡಿ ಅವರಿಂದ ದೇಣಿಗೆ ಸಂಗ್ರಹಿಸಿ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದ ಹಿತರಕ್ಷಣೆಗೆ ಅದನ್ನು ಬಳಸಲಾಗುತ್ತದೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ, ಮಡಿದ ವೀರ ಯೋಧರನ್ನು ಸ್ಮರಿಸುವ ಜತೆಯಲ್ಲಿ ದೇಶ ರಕ್ಷಣೆಯ ಕಾರ್ಯದಲ್ಲಿ ನಿರತವಾಗಿರುವ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಧ್ವಜ ದಿನವನ್ನು ಆಚರಿಸಲಾಗು ತ್ತದೆ. ಈ ಮೂಲಕ ಪ್ರತಿಯೊಬ್ಬರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಮಾಡುತ್ತ ಬರಲಾಗಿದೆ.

ನಿಧಿ ಸಂಗ್ರಹಿಸುವವರು ಯಾರು?
ನಿಧಿ ಸಂಗ್ರಹದ ಹೊಣೆಗಾರಿಕೆ ಕೇಂದ್ರೀಯ ಸೈನಿಕ ಬೋರ್ಡ್‌ನ ಸ್ಥಳೀಯ ಸಂಸ್ಥೆಗಳದ್ದಾಗಿದೆ. ಅದರಲ್ಲಿ ಪ್ರತ್ಯೇಕ ಸಮಿತಿ ಕೂಡ ಇದ್ದು ಅಧಿಕೃತ ಹಾಗೂ ಸಾಮಾನ್ಯ ಸ್ವಯಂ ಸೇವಾ ಸಂಸ್ಥೆಗಳು ಇದರ ಜವಾಬ್ದಾರಿಯನ್ನು ನಿರ್ವಹಿಸುತ್ತವೆ. ಆನ್‌ಲೈನ್‌ ಮೂಲಕ ದೇಣಿಗೆ ನೀಡಬಹುದು ಡಿಸೆಂಬರ್‌ ಮಾಸದಾದ್ಯಂತ ದೇಣಿಗೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಸಶಸ್ತ್ರ ಪಡೆಗಳ ಧ್ವಜ ದಿನದಂಗವಾಗಿ ಸಾರ್ವಜನಿಕರು ಆನ್‌ಲೈನ್‌ ಮೂಲಕ ತಮ್ಮ ಕೈಲಾದಷ್ಟು ದೇಣಿಗೆ ನೀಡಬಹುದು. https://ksb.gov.in/DonateAFFDF.htm ಭೇಟಿ ನೀಡಿ ಧನಸಹಾಯ ಮಾಡಲು ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next