ಬೆಂಗಳೂರು:ಥಣಿಸಂದ್ರದಲ್ಲಿನ ಜಮೀನು ಅಕ್ರಮ ಡಿನೋಟಿಫಿಕೇಶನ್ ಪ್ರಕರಣದ ತನಿಖೆಯಲ್ಲಿ ತನ್ನ ಹೆಸರು ಕೈಬಿಡಬೇಕೆಂದು ಕೋರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪುರಸ್ಕರಿಸಿದ್ದು, ಇದರಿಂದ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ನಾಲ್ವರನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಖುಲಾಸೆಗೊಳಿಸಿದ್ದು, ಮಾಜಿ ಸಚಿವ ಚೆನ್ನಿಗಪ್ಪ ವಿರುದ್ಧದ ವಿಚಾರಣೆ ಮುಂದುವರಿಯಲಿದೆ ಎಂದು ಆದೇಶ ನೀಡಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಪ್ರಕರಣದ ತೀರ್ಪನ್ನು ವಿಶೇಷ ನ್ಯಾಯಾಲಯ ಆಗಸ್ಟ್ 27ಕ್ಕೆ ಕಾಯ್ದಿರಿಸಿತ್ತು.
ಅರ್ಕಾವತಿ ಬಡಾವಣೆ ಅಭಿವೃದ್ಧಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 3.8ಎಕರೆಯನ್ನು 2007ರಲ್ಲಿ ಡಿನೋಟಿಫೈ ಮಾಡಿದ ಆರೋಪ ಕುಮಾರಸ್ವಾಮಿ ಅವರ ಮೇಲಿತ್ತು.
ಅಂದಿನ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಸಿ.ಚೆನ್ನಿಗಪ್ಪ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದರು. ಜಮೀನಿನ ಮಾಲೀಕ ಎವಿ ರವಿಪ್ರಕಾಶ್ ಹಾಗೂ ಎವಿ ಶ್ರೀರಾಮ್ ಅವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಕ್ರಮವಾಗಿ ಡಿನೋಟಿಫೈ ಮಾಡಿಕೊಡಲಾಗಿದೆ ಎಂದು ಚಾಮರಾಜನಗರದ ಮಹದೇವಸ್ವಾಮಿ ಎಂಬವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡುವಂತೆ ಕೋರಿ ಕುಮಾರಸ್ವಾಮಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಮನವಿ ವಜಾ ಆಗಿತ್ತು. ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಪ್ರಕರಣವನ್ನು ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.