ಅರ್ಜುನನ ಬಹುದೊಡ್ಡ ಬಲವೇ ಪಾಶುಪತಾಸ್ತ್ರ. ಶಿವನ ಮೂಲಕ ಅದನ್ನು ಆತ ಪಡೆದಿದ್ದು ಎಲ್ಲಿ? ಮಲೆಶಂಕರನ ಹಿನ್ನೆಲೆಗೂ, ಈ ಪ್ರಶ್ನೆಗೂ ಭಕ್ತಿಯ ನಂಟಿದೆ. ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಲೆಶಂಕರ ಕ್ಷೇತ್ರದಲ್ಲಿ ಶಿವನು ಅರ್ಜುನನಿಗೆ ಪಾಶುಪತಾಸ್ತ್ರ ದಯಪಾಲಿಸಿದ ಎನ್ನುವುದು ಪೌರಾಣಿಕ ನಂಬಿಕೆ.
ಮಹಾಭಾರತ ಕಾಲದಲ್ಲಿ ಪರಶಿವನಿಂದ ಪಾಶುಪತಾಸ್ತ್ರ ಪಡೆಯಲು ಅರ್ಜುನ ತಪಸ್ಸು ಮಾಡಿದ ಸ್ಥಳ ಇದೆಂದು ಕಿರಾತಾರ್ಜುನ ಪ್ರಸಂಗದ ಕಥೆ ಇಲ್ಲಿನ ಸ್ಥಳ ಪುರಾಣವನ್ನು ಬಿಚ್ಚಿಡುತ್ತದೆ. ಅರ್ಜುನನ ಭಕ್ತಿ ಮತ್ತು ಶಕ್ತಿಯನ್ನು ಪರೀಕ್ಷಿಸಲು ಶಿವನು ಕಿರಾತ (ಶಬರ) ವೇಷ ಧರಿಸಿ ಪಾರ್ವತಿ ಸಹಿತ ಇಲ್ಲಿಗೆ ಬಂದನು. ಕಿರಾತ ವೇಷಧಾರಿ ಮತ್ತು ತಪಸ್ಸಿಗೆ ಕುಳಿತ ಅರ್ಜುನ ಏಕಕಾಲದಲ್ಲಿ ಹಂದಿಗೆ ಬಾಣ ಪ್ರಯೋಗಿಸಿದರು.
“ಬೇಟೆ ನನ್ನದೇ’ ಎಂದು ಇಬ್ಬರೂ ವಾದಿಸಿ, ಯುದ್ಧಕ್ಕೂ ಇಳಿದರು. ತನಗೆ ಸೋಲಾಗುವ ಸಂದರ್ಭ ಬಂದಾಗ, ಅರ್ಜುನ ಮರಳಿನಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದ ಶಿವಲಿಂಗಕ್ಕೆ ಹೂವಿನ ಹಾರ ಹಾಕಿ, ನಮಸ್ಕರಿಸುತ್ತಾನೆ. ಆ ಹಾರ ಕಿರಾತನ ಕೊರಳಿಗೆ ಬೀಳುತ್ತದೆ. ಇದರಿಂದ ಕಿರಾತನೇ ಶಿವನೆಂದು ಅರ್ಜುನನಿಗೆ ಮನದಟ್ಟಾಗಿ, ಶಿವನನ್ನು ಪೂಜಿಸುತ್ತಾನೆ. ಅದೇ ಶಿವ ಇಲ್ಲಿ ಉದ್ಭವಲಿಂಗವಾಗಿ ಹುಟ್ಟಿದನಂತೆ.
ದೇಗುಲದ ಹಿಂಭಾಗದಲ್ಲಿ ಎತ್ತದ ಪರ್ವತ ಇರುವುದರಿಂದ “ಮಲೆಯ ಶಂಕರ’ ಎಂಬ ಹೆಸರು ಈ ಕ್ಷೇತ್ರಕ್ಕೆ ಬಂತು. ದೇಗುಲದ ಮುಂದೆಯೇ ಎರಡು ಶಾಸನಗಳಿವೆ. ಐತಿಹಾಸಿಕ ಕಾಲ ಘಟ್ಟದಲ್ಲಿ ವೀರನೋರ್ವ ನಾಡಿಗಾಗಿ ಹೋರಾಡಿ ಪ್ರಾಣ ತ್ಯಜಿಸಿದ ವರ್ಣನೆ ಇದರಲ್ಲಿದೆ. ವಿಜಯನಗರದ ಅರಸರು, ಬೆಳಗುತ್ತಿ ನಾಯಕರು, ಕೆಳದಿ ಅರಸರು ಮತ್ತು ಮೈಸೂರು ಒಡೆಯರು ಈ ದೇಗುಲಕ್ಕೆ ಭಕ್ತಿಯಿಂದ ಪೂಜಿಸಿ, ದಾನ ದತ್ತಿ ನೀಡಿರುವ ಉಲ್ಲೇಖಗಳಿವೆ.
ಇಲ್ಲೊಂದು ವಿಶಿಷ್ಟ ಕೊಳವಿದೆ. ವರ್ಷವಿಡೀ ನೀರು ಇಲ್ಲಿ ಉಕ್ಕಿ ಹರಿಯುವುದರಿಂದ, ಇಲ್ಲಿ ಗಂಗೆಯ ಆವಾಸವಿದೆ ಎನ್ನಲಾಗಿದೆ. 1988ರಲ್ಲಿ ಕಲ್ಲು, ಸಿಮೆಂಟ್ ಮತ್ತು ಕಾಂಕ್ರೀಟ್ ಬಳಸಿ, ಆಕರ್ಷಕ ವಿನ್ಯಾಸದಲ್ಲಿ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿದೆ.
ಇಲ್ಲಿನ ನೂರಾರು ಕುಟುಂಬಗಳಿಗೆ ಮಲೆಯ ಶಂಕರನೇ ಮನೆದೇವರು. ತೆರೆದ ಬಾವಿ ಮತ್ತು ಕೊಳವೆ ಬಾವಿ ತೆಗೆಸುವಾಗ ಜಲಪ್ರಾಪ್ತಿಗಾಗಿ, ಮಳೆಗಾಗಿ ಈತನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ವಿವಾಹ, ಸಂತಾನಪ್ರಾಪ್ತಿ ಮತ್ತು ರೋಗಹರಣಕ್ಕಾಗಿಯೂ ಭಕ್ತಾದಿಗಳು ಹರಕೆ ಹೊರುತ್ತಾರೆ.
ಶಿವಮೊಗ್ಗ ಜಿಲ್ಲೆಯಲ್ಲಿರುವ ಪಂಚಕ್ಷೇತ್ರಗಳಾದ ಮಲೆಶಂಕರ, ಗುಳುಗುಳಿ ಶಂಕರ, ಹೆಬ್ಬಿಗೆ ಶಂಕರ, ಅಲಸೆ ಶಂಕರ ಮತ್ತು ಕೋಡೂರು ಶಂಕರ- ಇವುಗಳನ್ನು ಒಂದೇ ದಿನ, ಸೂರ್ಯೋದಯದಿಂದ ಸೂರ್ಯಾಸ್ತದೊಳಗೆ ದರ್ಶನ ಮಾಡಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ.
ದರುಶನಕೆ ದಾರಿ…: ಶಿವಮೊಗ್ಗ ಸಮೀಪದ ಆಯನೂರಿನಿಂದ ಹಣಗೆರೆಕಟ್ಟೆಯತ್ತ ಸಾಗುವ ದಾರಿಯಲ್ಲಿ 12 ಕಿ.ಮೀ. ಸಾಗಿದರೆ, ಮಲೆಶಂಕರ ಕ್ಷೇತ್ರ ಸಿಗುತ್ತದೆ.
* ಎನ್.ಡಿ. ಹೆಗಡೆ ಆನಂದಪುರಂ