ಬೆಂಗಳೂರು: ನಟಿ ಶೃತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳ ಆರೋಪದಲ್ಲಿ ನಟ ಅರ್ಜುನ್ ಸರ್ಜಾ ಅವರನ್ನು ಬಂಧಿಸದಂತೆ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಹೈಕೋರ್ಟ್ ನ.28ರವರೆಗೆ ವಿಸ್ತರಿಸಿದೆ. ಮತ್ತೂಂದೆಡೆ ಶ್ರುತಿ ಹರಿಹರನ್ ಮಹಿಳಾ ಆಯೋಗಕ್ಕೆ ತೆರಳಿ ತಮ್ಮ ಸಾಕ್ಷ್ಯಗಳನ್ನು ಹಾಜರು ಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ತಮ್ಮ ವಿರುದ್ಧ ಶೃತಿ ಹರಿಹರನ್ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಅರ್ಜುನ್ ಸರ್ಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾ. ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ ಬುಧವಾರ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಕಾಲಾವಕಾಶ ಕೇಳಿದ್ದರ ಹಿನ್ನೆಲೆಯಲ್ಲಿ “ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್ ಸರ್ಜಾ ಅವರನ್ನು ನ.14ರವರೆಗೆ ಬಂಧಿಸಬಾರದು ಎಂದು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ನ.28ರವರೆಗೆ ವಿಸ್ತರಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.
ಮಹಿಳಾ ಆಯೋಗಕ್ಕೆ ಶ್ರುತಿ ಭೇಟಿ: ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿಹರಿಹರನ್, ಬುಧವಾರ ಮಹಿಳಾ ಆಯೋಗಕ್ಕೆ ತೆರಳಿ ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ತೋರಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಆಯೋಗ ಈ ಕುರಿತು ನೋಟಿಸ್ ನೀಡಿತ್ತು.
ಇದೇ ವೇಳೆ ಮಾಧ್ಯಮ ಜೊತೆ ಮಾತನಾಡಿದ ಶ್ರುತಿ ಹರಿಹರನ್, “ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಾಕ್ಷ್ಯಗಳನ್ನು ತೋರಿಸಿದ್ದೇನೆ. ನಾನು ವಿನಾಕಾರಣ ಈ ರೀತಿ ಆರೋಪ ಮಾಡುತ್ತಿಲ್ಲ. ನನ್ನ ಬಳಿ ಬಲವಾದ ದಾಖಲೆಗಳಿವೆ. ನ್ಯಾಯಾಲಯದಲ್ಲಿ ನನ್ನ ಗೆಲುವು ಸಿದ್ಧ ಎಂದರು. ತಮಗೆ ಬೆದರಿಕೆ ಕರೆಗಳ ಕುರಿತು ಉತ್ತರಿಸಿದ ಶ್ರುತಿ, “ಸದ್ಯಕ್ಕೆ ಪ್ರಕರಣ ನ್ಯಾಯಾಲಯದಲ್ಲಿದೆ. ನನಗೆ ಇದುವರೆಗೂ ತುಂಬಾ ಬೆದರಿಕೆ ಕರೆಗಳು ಬಂದಿವೆ. ಆದರೆ, ನಾನು ಯಾವುದಕ್ಕೂ ಬಗ್ಗಲ್ಲ ಎಂದರು.
ಸಂಜನಾ ಕುರಿತು ಸಂಶಯ
ನಟಿ ಸಂಜನಾ ಈ ಹಿಂದೆ ಮೀ ಟೂ ಆರೋಪ ಮಾಡಿ, ನಂತರ ನಿರ್ದೇಶಕರಲ್ಲಿ ಕ್ಷಮೆ ಕೇಳಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶ್ರುತಿ, “ನಾನೆಂದೂ ಸಂಜನಾ ರೀತಿ ಕ್ಷಮೆ ಕೇಳುವುದಿಲ್ಲ. ಸಂಜನಾ ಕ್ಷಮೆ ಕೇಳಿದ್ದನ್ನು ಕಂಡು ನಿಜಕ್ಕೂ ಬೇಸರಗೊಂಡೆ. ಆಕೆಯ ಮನಸ್ಥಿತಿ ಹೇಗಿತ್ತು ಅಂತ ತಿಳಿದುಕೊಂಡೆ. ಇದರ ಹಿಂದೆ ಏನೋ ಇದೆ’ ಎಂದು ಶ್ರುತಿ ಹರಿಹರನ್ ಶಂಕೆ ವ್ಯಕ್ತಪಡಿಸಿದರು.