ಹುಟ್ಟುಹಬ್ಬದ ಸಂಭ್ರಮ ಆಚರಿಸಿರುವ ಅರ್ಜುನ್ ಕಾಪಿಕಾಡ್ ಕನ್ನಡ ಸಿನೆಮಾದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. “ಅಪ್ಪೆ ಟೀಚರ್’ ಸಿನೆಮಾ ನಿರ್ದೇಶಕ ಕಿಶೋರ್ ಮೂಡುಬಿದಿರೆ ನಿರ್ದೇಶನದ “ಮಾಲ್ಗುಡಿ ಡೇಸ್’ ಸಿನೆಮಾದಲ್ಲಿ ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಕೆಲವು ಕನ್ನಡ ಸಿನೆಮಾದಲ್ಲಿ ಅಭಿನಯಿಸಿದ ಅರ್ಜುನ್ ಅವರಿಗೆ ಬಹುನಿರೀಕ್ಷೆಯ ಮಾಲ್ಗುಡಿ ಡೇಸ್ ಹೊಸ ಭವಿಷ್ಯ ನೀಡುವ ಸಾಧ್ಯತೆಯಲ್ಲಿದೆ. ಕರಾವಳಿ ಭಾಗದಲ್ಲಿ ಶೂಟಿಂಗ್ ಕಂಡ ಸಿನೆಮಾವಾದ್ದರಿಂದ ಅರ್ಜುನ್ ಈ ಭಾಗದಲ್ಲಿಯೇ ಶೂಟಿಂಗ್‌ನಲ್ಲಿದ್ದರು.
ಅಂದಹಾಗೆ, ಅರ್ಜುನ್ ಕಾಪಿಕಾಡ್ ಅವರು ಕೆಲವು ಕನ್ನಡ ಸಿನೆಮಾದಲ್ಲಿ ಅಭಿನಯಿಸಿ, ಸುದ್ದಿಯಲ್ಲಿದ್ದರು. ಯೋಗರಾಜ್ ಭಟ್ ಅವರ ಮುಗುಳು ನಗೆ, ಮಧುರ ಸ್ವಪ್ನ ಸಿನೆಮಾದಲ್ಲಿ ಅರ್ಜುನ್ ಕಾಣಿಸಿಕೊಂಡಿದ್ದರು. ತುಳುವಿನಲ್ಲಿ ತೆಲಿಕೆದ ಬೊಳ್ಳಿ, ರಂಗ್, ಚಾಲಿಪೋಲಿಲು, ಒರಿಯನ್ ತೂಂಡ ಒರಿಯಗಾಪುಜಿ, ದಂಡ್, ಚಂಡಿಕೋರಿ, ಬರ್ಸ, ಅರೆ ಮರ್ಲೆರ್, ಏರಾ ಉಲ್ಲೆರ್‌ಗೆ, ಕರ್ಣೆ ಮುಂತಾದ ಸಿನೆಮಾಗಳ ಮೂಲಕವೂ ಮನೆಮಾತಾಗಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಬೇಕಿರುವ ತುಳುವಿನ “ರಾಹುಕಾಲ ಗುಳಿಗ ಕಾಲ’ ಸಿನೆಮಾದಲ್ಲಿಯೂ ಅರ್ಜುನ್ ನಟಿಸಿದ್ದಾರೆ. ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್ ಹಾಗೂ ಪ್ರೊಡಕ್ಷನ್ ಅರ್ಪಿಸಿದ ಕೆ. ರತ್ನಾಕರ್ ಕಾಮತ್ ನಿರ್ಮಾಣ ಹಾಗೂ ಕಿಶೋರ್ ಮೂಡುಬಿದಿರೆ ಕಥೆ-ಚಿತ್ರಕಥೆ, ನಿರ್ದೇಶನದ ವಿಜಯ ರಾಘವೇಂದ್ರ ಮುಖ್ಯಭೂಮಿಕೆಯ “ಮಾಲ್ಗುಡಿ ಡೇಸ್’ ಇದೇ ವಾರ ತೆರೆಕಾಣಲಿದೆ.