Advertisement

ಕ್ಷುಲ್ಲಕ ಕಾರಣಕ್ಕೆ ವಾಗ್ವಾದ-ರಿವಾಲ್ವರ್‌ ಎಂಟ್ರಿ

09:43 AM Aug 14, 2019 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ ಮುಖಂಡನೊಬ್ಬ ರೈಲ್ವೆ ನಿಲ್ದಾಣದಲ್ಲಿ ಸಶಸ್ತ್ರದೊಂದಿಗೆ ಕರ್ತವ್ಯದಲ್ಲಿದ್ದ ಆರ್‌ಪಿಎಫ್‌ ಮುಖ್ಯ ಪೇದೆಯೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ತನ್ನ ಬಳಿಯಿದ್ದ ರಿವಾಲ್ವರ್‌ ತೋರಿಸಿ ಬೆದರಿಕೆ ಹಾಕಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಘಟನೆಗೆ ಸಂಬಂಧಿಸಿ ಆರ್‌ಪಿಎಫ್‌ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಶಹರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಕಾಂಗ್ರೆಸ್‌ ಮುಖಂಡ, ಮಂಟೂರ ರಸ್ತೆ ಬ್ಯಾಳಿ ಪ್ಲಾಟ್‌ನ ಶರೀಫ ಅದ್ವಾನಿ ಹಾಗೂ ಮಜರಅಲಿ ಜಾಲಗಾರ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಶರೀಫ್‌ ಬಳಿ ಪರವಾನಗಿ ಹೊಂದಿದ ರಿವಾಲ್ವರ್‌ ಇದೆ ಎನ್ನಲಾಗುತ್ತಿದೆ.

ರೈಲ್ವೆ ನಿಲ್ದಾಣದ ರಿಸರ್ವೇಶನ್‌ ಕೌಂಟರ್‌ ಸಮೀಪದ ಮಂಟೂರ ರಸ್ತೆಯ ಲಾಂಡ್ರಿ ಬಳಿ ಆರ್‌ಪಿಎಫ್‌ನ ಮುಖ್ಯ ಪೇದೆ ರವಿಕುಮಾರ ಸಶಸ್ತ್ರದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಲಾಂಡ್ರಿಯ ಒಂದು ಬದಿ ಶರೀಫ ಸೇರಿದಂತೆ 8-10 ಜನರು ಗುಂಪು ಕೂಡಿಕೊಂಡು ನಿಂತಿದ್ದರು. ಅಲ್ಲದೆ ಕೆಲವರು ಪಾರ್ಕ್‌ ನಲ್ಲಿಯ ಪೋಟೋಗಳನ್ನು ತೆಗೆಯುತ್ತಿದ್ದಾಗ, ಹಾಗೆ ಮಾಡಬೇಡಿ. ಮೊದಲೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದಿದ್ದಾರೆ. ನೀನು ಯಾರು? ಪೋಟೋ ತೆಗೆದರೇನಾಯ್ತು ಎಂದು ಪೇದೆಯೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಮಹಾ ಪ್ರಬಂಧಕ ಎ.ಕೆ. ಸಿಂಗ್‌ ನಿಲ್ದಾಣದ ಪರಿವೀಕ್ಷಣೆಗೆ ಬಂದಿದ್ದಾರೆ. ಆಗ ಪೇದೆಯು ನಮ್ಮ ಇಲಾಖೆಯ ಜಿಎಂ ಅವರು ಪರಿವೀಕ್ಷಣೆಗೆ ಬಂದಿದ್ದಾರೆ. ಇಲ್ಲಿ ಗುಂಪಾಗಿ ನಿಲ್ಲಬೇಡಿ ಹೋಗಿ ಎಂದು ಹೇಳಿದಾಗ ಮತ್ತೆ ತೀವ್ರ ವಾಗ್ವಾದ ಮಾಡಿದ್ದಾರಲ್ಲದೆ, ಅವಾಚ್ಯವಾಗಿ ನಿಂದಿಸಿದ್ದಾರೆ. ಪೇದೆಯು ನನ್ನ ಬಳಿ ಸಶಸ್ತ್ರವಿದೆ ನೋಡಿ ಎಂದು ಹೇಳಿದಾಗ, ನೀನೇನು ಮಾಡಿಕೊಳ್ಳುತ್ತಿ. ನನ್ನ ಬಳಿಯೂ ರಿವಾಲ್ವರ್‌ ಇದೆ ನೋಡು ಎಂದು ಶರೀಫ ಅದ್ವಾನಿ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ ಗುಂಪಿನಲ್ಲಿಯ ಕೆಲವರು ಪೇದೆಗೆ ಕಲ್ಲು ಎಸೆದಾಗ ಕೈಗೆ ಹೊಡೆತ ಬಿದ್ದಿದೆ ಎಂದು ತಿಳಿದುಬಂದಿದೆ.

ಸ್ಥಳದಲ್ಲಿ ಜನ ಹೆಚ್ಚು ಸೇರುತ್ತಿದ್ದಂತೆ ಇನ್ನುಳಿದ ಸಿಬ್ಬಂದಿಯು ಸ್ಥಳಕ್ಕೆ ಬಂದು ಶರೀಫ ಅದ್ವಾನಿಯನ್ನು ಗದಗ ರಸ್ತೆಯಲ್ಲಿರುವ ಆರ್‌ಪಿಎಫ್‌ ಠಾಣೆಗೆ ಕರೆತಂದಿದ್ದಾರೆ. ಆಗ ಠಾಣೆ ಎದುರು ಹೆಚ್ಚಿನ ಪ್ರಮಾಣದಲ್ಲಿ ಜನರು ಗುಂಪಾಗಿ ಸೇರಿ ಗಲಾಟೆ ಮಾಡಲು ಮುಂದಾದಾಗ ಪೊಲೀಸರನ್ನು ಅವರನ್ನೆಲ್ಲ ಚದುರಿಸಿದರು.

Advertisement

ಮಹಿಳಾ ಪೇದೆ ಮೇಲೆ ಹಲ್ಲೆ ಯತ್ನ: ಠಾಣೆಯ ಬಳಿ ಸೇರಿದ್ದ ಪೊಲೀಸರು, ಜನರ ವಿಡಿಯೋವನ್ನು ಮಜರಅಲಿಯು ಮಾಡುತ್ತಿದ್ದಾಗ ಮಹಿಳಾ ಪೇದೆಯು ತಡೆದು ಮೊಬೈಲ್ ಕಿತ್ತುಕೊಂಡಾಗ, ಮಜರಅಲಿ ಮಹಿಳಾ ಪೇದೆ ಮೇಲೆಯೇ ಹಲ್ಲೆಗೆ ಯತ್ನಿಸಿದನೆಂದು ತಿಳಿದುಬಂದಿದೆ. ಪೊಲೀಸರು ಕೂಡಲೇ ಅವನನ್ನು ತಮ್ಮ ವಶಕ್ಕೆ ಪಡೆದರು. ಆರ್‌ಪಿಎಫ್‌ ಠಾಣೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಹಾಗೂ ರೈಲ್ವೆ ಪೊಲೀಸ್‌ ಠಾಣೆ ಡಿವೈಎಸ್‌ಪಿ ಬಿ.ಬಿ. ಪಾಟೀಲ, ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ಸುರೇಶ ಕುಂಬಾರ, ಶಹರ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಠಾಣೆ ಎದುರು ನೆರೆದಿದ್ದ ಜನರು ಅವರಿಬ್ಬರನ್ನು ಬಿಡುವಂತೆ ಒತ್ತಾಯಿಸುತ್ತಿದ್ದರು. ಆದರೆ ಪೊಲೀಸರು ವಿಚಾರಣೆ ನಂತರ ಅವರನ್ನು ಬಿಡಲಾಗುವುದು ಎಂದು ಹೇಳಿ ಅವರನ್ನೆಲ್ಲ ಅಲ್ಲಿಂದ ಕಳುಹಿಸಿದರು.

ನಂತರ ಇಬ್ಬರನ್ನು ಶಹರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಅವರು ಠಾಣೆಗೆ ಕರೆದುಕೊಂಡು ಹೋದರು. ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಯಿತು. ಪೊಲೀಸರು ಜನರನ್ನೆಲ್ಲ ಕಳುಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದರು. ಶರೀಫ್‌ ಅದ್ವಾನಿ ವಿರುದ್ಧ ಕೊಲೆಗೆ ಯತ್ನ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕುರಿತು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next