Advertisement
ಫೈನಲ್ ಪಂದ್ಯದ ತಾಣವಾದ “ಲುಸೈಲ್ ಸ್ಟೇಡಿಯಂ’ನಲ್ಲಿ ಫಿಫಾ ವಿಶ್ವಕಪ್ ಕೂಟದ ಮೊದಲ ಸೆಮಿಫೈನಲ್ ನಡೆಯಲಿದ್ದು, ಆರ್ಜೆಂಟೀನಾ ಕಳೆದ ಸಲದ ರನ್ನರ್ ಅಪ್ ಕ್ರೊವೇಶಿಯ ಸವಾಲನ್ನು ಎದುರಿಸಲಿದೆ.ಆರ್ಜೆಂಟೀನಾ ಇದಕ್ಕೂ ಹಿಂದಿನ ರನ್ನರ್ ಅಪ್ ತಂಡ (2014) ಎಂಬುದನ್ನು ಮರೆಯುವಂತಿಲ್ಲ.
ಆರ್ಜೆಂಟೀನಾ 1986ರ ಬಳಿಕ ವಿಶ್ವಕಪ್ ಎತ್ತಿಲ್ಲ. ಅದು ಮರಡೋನಾ ಕಾಲವಾಗಿತ್ತು. 35ರ ಹರೆಯದ ಮೆಸ್ಸಿ ಈ ಬಾರಿ ಮರಡೋನಾ ರೀತಿಯಲ್ಲೇ ತಂಡವನ್ನು ಮುನ್ನಡೆಸಿ ಉಪಾಂತ್ಯಕ್ಕೆ ತಂದು ನಿಲ್ಲಿಸಿದ್ದಾರೆ. ಅವರದು “ಕ್ಲೆವರ್ ಕ್ರಿಯೇಟರ್’ ಪಾತ್ರ. ಮುಂದಿನದು ಅದೃಷ್ಟದಾಟ.
Related Articles
Advertisement
ಕ್ರೊವೇಶಿಯದ ಕೆಚ್ಚು ಹೆಚ್ಚಿದೆಇನ್ನೊಂದೆಡೆ ಕೇವಲ 4 ಮಿಲಿಯನ್ ಜನಸಂಖ್ಯೆಯುಳ್ಳ ಪುಟ್ಟ ರಾಷ್ಟ್ರ ಕ್ರೊವೇಶಿಯ ತೊಡೆ ತಟ್ಟಿ ನಿಂತಿದೆ. ಕಳೆದ ಫೈನಲ್‌ನಲ್ಲಿ ಫ್ರಾನ್ಸ್‌ಗೆ ಶರಣಾದ ಬಳಿಕ ತಂಡದ ಕೆಚ್ಚು ಹೆಚ್ಚಿದಂತಿದೆ. ಆರ್ಜೆಂಟೀನಾಕ್ಕೆ ಮೆಸ್ಸಿ ಇದ್ದಂತೆ, ಕ್ರೊವೇಶಿಯಕ್ಕೆ ಲುಕಾ ಮೊಡ್ರಿಕ್ ಆಧಾರವಾಗಿದ್ದಾರೆ. ಹೀಗಾಗಿ ಇದು ಮೆಸ್ಸಿ ವರ್ಸಸ್ ಮೊಡ್ರಿಕ್ ಕದನವೆಂದೂ ಬಿಂಬಿಸಲ್ಪಟ್ಟಿದೆ. ಕಳೆದ ಸಲದ ಫೈನಲ್ ಹಾದಿಯಲ್ಲಿ ಕ್ರೊವೇಶಿಯನ್ ಪಡೆ ಆರ್ಜೆಂಟೀನಾವನ್ನೂ ಮಣಿಸಿತ್ತು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬೇಕು. ಲೀಗ್ ಪಂದ್ಯದಲ್ಲಿ ಅದು 3-0 ಭರ್ಜರಿ ಗೆಲುವು ಸಾಧಿಸಿತ್ತು. ಈ ಪರಾಕ್ರಮವನ್ನು ಅದು ಪುನರಾವರ್ತಿಸೀತೇ ಎಂಬ ಕುತೂಹಲ ಇದ್ದೇ ಇದೆ. ರಕ್ಷಣ ವಿಭಾಗದ ಮಾರ್ಸೆಲೊ ಬೊÅಝೋವಿಕ್, ಮ್ಯಾಟಿಯೊ ಕೊವಾಸಿಕ್ ಆಟ ಕ್ರೊವೇಶಿಯ ಪಾಲಿಗೆ ನಿರ್ಣಾಯಕ. ಕ್ರೊವೇಶಿಯ ಆಡಿದ 2018ರ ಎಲ್ಲ ನಾಕೌಟ್ ಪಂದ್ಯಗಳೂ ಹೆಚ್ಚುವರಿ ಅವಧಿಗೆ ವಿಸ್ತರಿಸಲ್ಪಟ್ಟಿದ್ದವು. ಈ ಬಾರಿ ಜಪಾನ್ ಹಾಗೂ ಬ್ರಝಿಲ್ ತಂಡಗಳೆರಡನ್ನೂ ಶೂಟೌಟ್ ಮಾಡಿ ಹೊರದಬ್ಬಿದೆ. ಅದರಲ್ಲೂ ಫೇವರಿಟ್ ಬ್ರಝಿಲ್ ವಿರುದ್ಧ ಆಡುವಾಗ ಕ್ರೊವೇಶಿಯ ಪರಿಪೂರ್ಣ ಪ್ರದರ್ಶನ ನೀಡಿತ್ತು. ಇನ್ನು ಆರ್ಜೆಂಟೀನಾಕ್ಕೆ ಏನು ಕಾದಿದೆಯೋ? 18 ಹಳದಿ ಕಾರ್ಡ್ ನೀಡಿದ ರೆಫ್ರಿ ಮನೆಗೆ!
ನೆದರ್ಲೆಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಯೋನೆಲ್ ಮೆಸ್ಸಿ ನಾಯಕತ್ವದ ಆರ್ಜೆಂಟೀನಾ ಗೆಲುವು ಸಾಧಿಸಿತ್ತು. ವಿಚಿತ್ರವೆಂದರೆ, ಈ ಪಂದ್ಯದಲ್ಲಿ ರೆಫ್ರಿಯಾಗಿದ್ದ ಸ್ಪೇನ್‌ನ ಆ್ಯಂಟೊನಿಯೊ ಮ್ಯಾಟಿಯೊ ಲಾಹೊಝ್, ಒಂದೇ ಪಂದ್ಯದಲ್ಲಿ 18 ಹಳದಿ ಕಾರ್ಡ್‌ಗಳನ್ನು ನೀಡಿದ್ದು! ಇದು ಎರಡೂ ತಂಡಗಳ ಕೆಂಗಣ್ಣಿಗೆ ಗುರಿಯಾಗಿದೆ. ಆಟಗಾರರು ಅಪಾಯಕಾರಿ, ಅಶಿಸ್ತಿನ ವರ್ತನೆ ತೋರಿದಾಗ ರೆಫ್ರಿ ಹಳದಿ ಕಾರ್ಡ್ ನೀಡುತ್ತಾರೆ. ಇದು ಎಚ್ಚರಿಕೆಯ ಗಂಟೆ. ಮತ್ತೂಮ್ಮೆ ಹಳದಿ ಕಾರ್ಡ್ ಸಿಕ್ಕಿದರೆ ಆಟಗಾರ ಪಂದ್ಯದಿಂದಲೇ ಹೊರನಡೆಯಬೇಕಾಗುತ್ತದೆ. “ಈ ಪಂದ್ಯದಲ್ಲಿ ಲಾಹೋಝ್ ತಲೆಬುಡವಿಲ್ಲದೇ ಹಳದಿ ಕಾರ್ಡ್ ನೀಡಿದ್ದಾರೆ, ಅವರಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಡಿ’ ಎಂದು ಸ್ವತಃ ಆರ್ಜೆಂಟೀನಾ ನಾಯಕ ಮೆಸ್ಸಿ ಕಿಡಿಕಾರಿದ್ದಾರೆ. ಇದಕ್ಕೆ ಸರಿಯಾಗಿ ಫಿಫಾ ಬಿಡುಗಡೆ ಮಾಡಿದ ವಿಶ್ವಕಪ್‌ನ ಉಳಿದ ಪಂದ್ಯಗಳ ರೆಫ್ರಿಗಳ ಪಟ್ಟಿಯಲ್ಲಿ ಲಾಹೋಝ್ ಹೆಸರು ಕಾಣಿಸಿಕೊಂಡಿಲ್ಲ!