Advertisement
ಸುಂಕಸಾಳ ಅರಣ್ಯ ವಲಯದಲ್ಲಿ ಅಂಕೋಲಾ ತಾಲೂಕು ಸಹಾಯಕ ವಲಯ ಅರಣ್ಯಾಧಿಕಾರಿ ಹಜರತ್ ಸಾಬ್ ಕುಂದಗೋಳ ಮೂವರು ಸಿಬ್ಬಂದಿ ಜತೆ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಎದುರಿನಿಂದ ಕಾಡುಗಳ್ಳರು ಗುಂಡಿನ ದಾಳಿ ನಡೆಸಿದ್ದಾರೆ. ಜೀಪ್ ಚಾಲಕ ರಾಮನಾಥ ನಾಯ್ಕ ಅವರ ಚಾಣಾಕ್ಷತನದಿಂದ ಹಜರತ್ ಸಾಬ್ ಗುಂಡು ತಾಗದೇ ಬಚಾವ್ ಆಗಿದ್ದಾರೆ. ಚಾಲಕ ರಾಮನಾಥ ನಾಯ್ಕ, ಸಿಬ್ಬಂದಿ ಕಿರಣ್ ನಾಯ್ಕ, ರಾಜಾಸಾವ್ ರಾಟಿ,ಲೋಕನಾಥ ನಾಯ್ಕ ಸ್ವಲ್ಪದರಲ್ಲೇ ಗುಂಡೇಟಿನಿಂದ ಪಾರಾಗಿದ್ದಾರೆ. ಜೀಪ್ ಮುಂಭಾಗದಲ್ಲಿ ಮೂರು ಗುಂಡುತಾಗಿವೆ.
ಎರಡು ಬುಲೆಟ್ ಜೀಪ್ ಮುಂಭಾಗದ ಗ್ಲಾಸ್ ಹೊಕ್ಕಿವೆ. ಒಂದು ಗುಂಡು ಕನ್ನಡಿಗೆ ತಾಗಿದೆ. ಉಳಿದ ಮೂರು ಗುಂಡು ಜೀಪ್ ಎಡ ಬದಿಗೆ ತಾಗಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಅರಣ್ಯದಲ್ಲಿ ಮರ ಕಡಿದು ಸಾಗಿಸುವವರ ಗುಂಪು
ಅಥವಾ ಪ್ರಾಣಿ ಬೇಟೆಯಾಡುವವರ ಗುಂಪು ಈ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ. ಇದು ನಾಡ ಬಂದೂಕಿನದೆ, ಪಿಸ್ತೂಲ್‌ನದೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಈಚೆಗೆ ಅರಣ್ಯದಲ್ಲಿ ಕಳ್ಳ ನಾಟಾ ಸಾಗಾಟ ಮತ್ತು ಪ್ರಾಣಿಬೇಟೆ ಪ್ರಕರಣಗಳಲ್ಲಿ ಬಂಧಿತರಾದವರನ್ನು ಗಮನದಲ್ಲಿರಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.