Advertisement

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

04:25 AM Dec 18, 2024 | Team Udayavani |

ವಿಟ್ಲ: ಕೊಳೆ ರೋಗ, ಎಲೆಚುಕ್ಕಿ ರೋಗ, ಸಿಂಗಾರ ಒಣಗುವ ರೋಗ ಮುಂತಾದವುಗಳಿಂದ ಫಸಲು ನಷ್ಟವಾಗಿ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ನೀಡುತ್ತಿದೆ. ಮತ್ತೂಂದೆಡೆ ಮಂಗ, ನವಿಲು, ಆನೆ, ಇಲಿ, ಅಳಿಲುಗಳ ಕಾಟವೂ ಜಾಸ್ತಿಯಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಶೇ.60ರಷ್ಟು ಬೆಳೆ ಕುಸಿದಿದೆ ಎನ್ನುತ್ತಾರೆ ಹೆಚ್ಚಿನ ಬೆಳೆಗಾರರು. ಕೆಲವರು ಶೇ.10ರಷ್ಟು ಮಾತ್ರ ಬೆಳೆ ಕುಸಿದಿದೆ ಎನ್ನುವುದೂ ಇದೆ. ಕಳೆದ ವರ್ಷ ಉತ್ತಮ ಫಸಲು ಪಡೆದಿದ್ದ ಬೆಳೆಗಾರರು ಈ ವರ್ಷ ಭಾರೀ ಕುಸಿತ ಅನುಭವಿಸುವುದು ಖಚಿತ ಎಂಬುದು ಸ್ಪಷ್ಟ. ತಜ್ಞರು ಈ ಬಗ್ಗೆ ವಿಶ್ಲೇಷಣೆ ನೀಡಿ, ಆದರೆ ಸ್ಥಿರ ಇಳುವರಿ ನೀಡುವ ತಳಿಗಳ ತೋಟಗಳಲ್ಲಿ ಈ ಏರುಪೇರು ಇರುವುದಿಲ್ಲ. ಎಪ್ರಿಲ್‌, ಮೇ ತಿಂಗಳಲ್ಲಿ ತಾಪಮಾನ ಜಾಸ್ತಿಯಾಗಿ, ತೇವಾಂಶ ಕಡಿಮೆಯಾಗಿರುವುದೂ ಈ ವರ್ಷದ ಕಡಿಮೆ ಫ‌ಸಲಿಗೆ ಕಾರಣ ಎನ್ನುತ್ತಾರೆ.

2 ವರ್ಷಕ್ಕೊಮ್ಮೆ ಬೆಳೆ ಕುಸಿತ ಯಾಕೆ?
ಬೆಳೆಗಾರರು ಅಡಿಕೆ ಅಥವಾ ಉಪಬೆಳೆಗೆ ಕೊಡುವ ರಾಸಾಯನಿಕ ಗೊಬ್ಬರ ಪ್ರಮಾಣ ಪ್ರತಿವರ್ಷವೂ ಒಂದೇ ರೀತಿ ಇರುತ್ತದೆ. ಪ್ರಥಮ ವರ್ಷ ಫಸಲು ಜಾಸ್ತಿ ಬಂದ ಅಡಿಕೆ ಮರದ ಶಕ್ತಿ ಎರಡನೇ ವರ್ಷಕ್ಕೆ ಕುಂಠಿತಗೊಳ್ಳುತ್ತದೆ. ಎರಡನೇ ವರ್ಷ ಇಳುವರಿಗೆ ತಕ್ಕುದಾದ ಪೋಷಕಾಂಶ ನೀಡಬೇಕು. ಅಂದರೆ ಗೊಬ್ಬರದ ಪ್ರಮಾಣ ಹೆಚ್ಚಿಸಬೇಕು. ಆಗ ಬೆಳೆ ಸಮತೋಲನ ಕಾಪಾಡುತ್ತದೆ.

ತಾಪಮಾನ ಹೆಚ್ಚಾ ದಾಗ ತೇವಾಂಶ ಕಡಿಮೆಯಾಗುತ್ತದೆ. ತಾಪಮಾನ ಏರಿದಾಗ ಹೆಚ್ಚುವರಿ ನೀರು ಕೊಟ್ಟು ತೋಟದಲ್ಲಿ ತೇವಾಂಶ ಹೆಚ್ಚುವಂತೆ ನೋಡಿಕೊಳ್ಳಬೇಕು. ಜನವರಿ ಯಿಂದ ಮೇ ತಿಂಗಳ ವರೆಗೆ ಅಡಿಕೆ ಕಾಯಿಕಟ್ಟುವ ಸಮಯವಾಗಿದ್ದು, ಸೂಕ್ತ ತೇವಾಂಶ ಕಾಪಾಡಲು ಬೆಳೆಗಾರರು ಒತ್ತುಕೊಡಬೇಕು. ಬಿಸಿಲಿನ ತಾಪಮಾನ ಏರಿದಾಗ ಹೆಣ್ಣು ಪರಾಗಸ್ಪರ್ಶ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಸಿಂಗಾರ ಒಣಗುತ್ತದೆ ಎಂದು ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿಗಳು ತಿಳಿಸಿದ್ದಾರೆ.

ತಳಿಗಳಲ್ಲಿ ಬೆಳೆ ವ್ಯತ್ಯಾಸ
ಮಂಗಳಾ ತಳಿಯಲ್ಲಿ ಎರಡನೇ ವರ್ಷ ಬೆಳೆ ಕುಸಿತವುಂಟಾಗುತ್ತದೆ. ಆದರೆ ಮೋಹಿತ್‌ನಗರ, ಶತಮಂಗಳಾ ತಳಿಗಳು ಸ್ಥಿರ ಇಳುವರಿ ನೀಡುತ್ತವೆ. ಊರ ತಳಿ, ಸ್ವರ್ಣಮಂಗಳಾ ತಳಿ ಕೂಡ ಸ್ಥಿರ ಇಳುವರಿ ನೀಡುತ್ತವೆ. ಊರ ತಳಿಯಲ್ಲಿ ವರ್ಷಕ್ಕೆ 2 ಕೆಜಿ ಅಡಿಕೆ ಲಭ್ಯವಾದರೆ ಮಂಗಳಾದಲ್ಲಿ 3 ಕೆಜಿ ಮತ್ತು ಸ್ವರ್ಣಮಂಗಳಾ, ಶತಮಂಗಳಾ ತಳಿಗಳಲ್ಲಿ 4 ಕೆಜಿ ಅಡಿಕೆ ಬೆಳೆಯಬಹುದು. ಮತ್ತು ಕಾಲಕಾಲಕ್ಕೆ ಔಷಧ ಸಿಂಪಡಣೆ ಅಗತ್ಯ. ಶಾರೀರಿಕ ಬೆಳವಣಿಗೆ ವಿಪರೀತವಾಗದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಗಿಡಗಳಲ್ಲಿ ಪುನರುತ್ಪಾದನೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Advertisement

ಕೊಬೆ ಕೊಳೆ ರೋಗಕ್ಕೆ ಪರಿಹಾರ
4-5 ವರ್ಷಗಳಿಂದ ಸಿಂಗಾರ ಒಣಗುವ ರೋಗ ಜಾಸ್ತಿಯಾಗಿದೆ. ಮತ್ತು ಈಗ ಕೊಬೆ ಕೊಳೆ ರೋಗ ಹೆಚ್ಚಾಗಿದೆ. ಈ ರೋಗಕ್ಕೆ ಫೈಟೋಪೇರ ಮೀಡೀ ಎನ್ನುವ ಶಿಲೀಂಧ್ರ ಕಾರಣ. ಆರಂಭದಲ್ಲಿ ಕೆಳಭಾಗದ ಸೋಗೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕ್ರಮೇಣ ಎಲ್ಲವೂ ಬಾಡಿ ಬೆಂಡಾಗಿ ಮರ ಸಾಯುತ್ತದೆ. ರೋಗ ಲಕ್ಷಣ ಕಂಡುಬಂದ ಕೂಡಲೇ ಮೆಟಲಾಕ್ಸಿಲ್‌ ಶೇ. 8 ಮತ್ತು ಮ್ಯಾಂಕೊಝೆಬ್‌ ಶೇ. 64 ಶಿಲೀಂಧ್ರನಾಶಕವನ್ನು ಒಂದು ಲೀಟರ್‌ ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಕೊಬೆಗೆ ಸಿಂಪಡಿಸಬೇಕು. ಇದರಿಂದ ಪ್ರಾಥಮಿಕ ಹಂತದಲ್ಲಿ ರೋಗ ನಿಯಂತ್ರಿಸಬಹುದು ಎಂದು ಸಿಪಿಸಿಆರ್‌ಐ ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next