Advertisement

ಅಡಿಕೆ ಸಹಕಾರ ಸಂಸ್ಥೆ ನಿಯೋಗದಿಂದ ಕೇಂದ್ರ ಕಾನೂನು ಸಚಿವರ ಭೇಟಿ

07:54 PM Mar 06, 2024 | Team Udayavani |

ಸಾಗರ: ಅಡಕೆಯನ್ನು ನಮ್ಮಲ್ಲಿಯೂ ಕೂಡ ಪಾರಂಪರಿಕವಾಗಿ ಬಳಕೆ ಮಾಡುವುದನ್ನು ನಾನು ನೋಡಿದ್ದೇನೆ. ಅದರ ಕುರಿತು ತಪ್ಪು ಮಾಹಿತಿಗಳು ದಾಖಲಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಶತಶತಮಾನಗಳಿಂದ ಕೃಷಿ ನಡೆಸಿರುವ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುತ್ತೇವೆ ಎಂದು ಕೇಂದ್ರ ಕಾನೂನು ಸಚಿವರಾದ ಅರ್ಜುನ್ ಮೇಗವಾಲ್ ಭರವಸೆ ನೀಡಿದ್ದಾರೆ.

Advertisement

ಅಡಿಕೆಯ ಬಳಕೆ ಕ್ಯಾನ್ಸರ್‌ಕಾರಕ ಎನ್ನುವ ಕುರಿತಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಆತಂಕ ತಲೆದೋರಿರುವ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ನೇತೃತ್ವದಲ್ಲಿ ಬುಧವಾರ ಭೇಟಿ ಮಾಡಿದ ನಿಯೋಗಕ್ಕೆ ಧೈರ್ಯ ತುಂಬುವ ಮಾತನಾಡಿದ ಅವರು, ನಮ್ಮಲ್ಲಿ ನೂರಾರು ವರ್ಷಗಳಿಂದ ಬಾಯಾರಿಕೆ ಆದಾಗ ಅಡಕೆ ತುಂಡನ್ನು ಬಾಯಲ್ಲಿ ಹಾಕಿಕೊಳ್ಳುವ ಸಂಪ್ರದಾಯವಿದೆ. ಅಡಕೆಯನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬಳಸುವುದನ್ನು ಕೂಡ ನೋಡಿದ್ದೇವೆ. ಅದಕ್ಕೆ ಒದಗಿರುವ ಅಪವಾದವನ್ನು ತೊಡೆಯಲು ವೈಜ್ಞಾನಿಕ ಹಾಗೂ ಕಾನೂನಾತ್ಮಕ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂದರು.

ನಿಯೋಗದ ನೇತೃತ್ವ ವಹಿಸಿದ್ದ ಕ್ರ್ಯಾಮ್ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಹೊಸಬಾಳೆ ಬೆಳೆಗಾರರ ಬದುಕಿಗೆ ನ್ಯಾಯಾಲಯದಲ್ಲಿರುವ ಪ್ರಕರಣದಿಂದಾಗುವ ಅಪಾಯದ ಕುರಿತು ಸಚಿವರಿಗೆ ಮನವರಿಕೆ ಮಾಡಿ, ಅಡಕೆಯ ಸಂಸ್ಕರಣದ ಸಂದರ್ಭದಲ್ಲಿ, ಕಳಪೆ ಮಾಲುಗಳನ್ನು ಸಾಂಪ್ರದಾಯಿಕ ಪರಿಷ್ಕೃತ ಅಡಕೆಯ ಜೊತೆ ಸೇರಿಸುವ ಸಂದರ್ಭದಲ್ಲಿ ರಾಸಾಯನಿಕಗಳನ್ನು, ಆರೋಗ್ಯಕ್ಕೆ ಹಾನಿಕಾರಕ ಅಂಶಗಳನ್ನು ಬೆರೆಸುತ್ತಿದ್ದರೆ ಅದನ್ನು ತಡೆಯುವ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳಬೇಕು. ಅಡಕೆ ಮೂಲದಲ್ಲಿ ಹಾಗೂ ಪ್ರಾಚೀನ ಕಾಲದಿಂದ ಬಂದಿರುವ ಪದ್ಧತಿಯಲ್ಲಿ ಪರಿಷ್ಕರಿಸಿದರೆ ಯಾವುದೇ ಅಪಾಯವಿಲ್ಲ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು. ಇದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಮನದಟ್ಟು ಮಾಡಿಕೊಳ್ಳಲು ಅಡಕೆ ಬೆಳೆಯುತ್ತಿರುವ ಮೂಲನೆಲೆಯಲ್ಲಿನ ಅಡಕೆಯನ್ನು ಆಯ್ದು ಪರೀಕ್ಷೆಗೆ ಒಳಪಡಿಸಬಹುದು ಎಂದರು.

ಆದರೆ ಈಗಾಗಲೇ ಅಡಕೆ ಹಾನಿಕರವಲ್ಲ ಎಂಬುದನ್ನು ವೈಜ್ಞಾನಿಕ ಸಂಶೋಧನೆಗಳು ರುಜುವಾತುಪಡಿಸಿರುವುದು ನಮ್ಮ ಮುಂದಿದೆ. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಲಯದ ಮುಂದೆ ಸತ್ಯವಾದ, ಅಡಕೆ ಬೆಳೆಗಾರರಿಗೆ ಪೂರಕವಾದ ಅಫಿಡವಿಟ್‌ನ್ನು ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ನಿಯೋಗದಲ್ಲಿ ಅಡಕೆ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಯಡಗೆರೆ, ಸಾಗರದ ಆಪ್ಸ್‌ಕೋಸ್ ಸಂಸ್ಥೆ ಅಧ್ಯಕ್ಷ ಬಿ.ಎ. ಇಂದೂಧರಗೌಡ, ಮ್ಯಾಮ್‌ಕೋಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ, ರಾಜೇಶ್ ಕುಮಾರ್ ಖೇರ್, ಶಿರಸಿ ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next