ಸಾಗರ: ಹವಮಾನ ವೈಪರೀತ್ಯದಿಂದ ಅಡಿಕೆ ಉದುರುವ ಸಂಭವ ಇದೆ. ಮಳೆ ವಿಪರೀತ ಬಂದಿರುವುದರಿಂದ ಕೊಳೆರೋಗ ಬರುವ ಸಾಧ್ಯತೆ ಇದ್ದು ಬೆಳೆಗಾರರು ಸೂಕ್ತ ಮುಂಜಾಗ್ರತೆ ವಹಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ತಿಳಿಸಿದರು.
ತಾಲೂಕಿನ ವರದಾಮೂಲದಲ್ಲಿ ಸೋಮವಾರ ಕೊಳೆರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಬಿಡುವಿಲ್ಲದೆ ಮಳೆ ಬರುತ್ತಿರುವುದರಿಂದ ಕೊಳೆರೋಗ ಹೆಚ್ಚುವ ಮತ್ತು ಅಡಿಕೆ ಮಿಡಿ ಉದುರುವ ಸಾಧ್ಯತೆ ಕಂಡು ಬಂದಿದೆ. ತಾಲೂಕಿನ ಬೇರೆಬೇರೆ ಭಾಗಗಳಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಇಲಾಖೆ ವತಿಯಿಂದ ರೈತಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೃಷಿ ಕೂಲಿಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಣೆಗೆ ಸಮಸ್ಯೆ ಆಗಬಾರದು ಎನ್ನುವ ದೃಷ್ಟಿಯಿಂದ ದೋಟಿಯನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ಕೊಳೆ ಕಾಣಿಸಿಕೊಂಡ ತೋಟಗಳಿಗೆ ತಕ್ಷಣ ಮೈಲುತುತ್ತವನ್ನು ಇಲಾಖೆಯ ಸೂಚನೆಯಂತೆ ಸಿಂಪಡಣೆ ಮಾಡಬೇಕು. ಪ್ರಸ್ತುತ ಕೊಳೆಔಷಧಿ ಸಿಂಪಡಣೆಗೆ ದೋಟಿ ಹೆಚ್ಚು ಉಪಯುಕ್ತವಾಗಿದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಪಂಗಡದವರಿಗೆ ಶೇ50, ಇತರೆಯವರಿಗೆ ಶೇ. 40 ಸಬ್ಸಿಡಿ ದರದಲ್ಲಿ ದೋಟಿ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಉಲ್ಲಾಸ್, ಗ್ರಾಮಸ್ಥರಾದ ವ.ಶಂ.ರಾಮಚಂದ್ರ ಭಟ್, ಮಂಜುನಾಥ್, ವರದಭಟ್ ಇನ್ನಿತರರು ಹಾಜರಿದ್ದರು.