ಬದಿಯಡ್ಕ: ರಾಷ್ಟ್ರ ಶತಮಾನಗಳ ವಿದೇಶಿ ದಾಸ್ಯದಿಂದ ನಲುಗಿದ್ದಾಗ ಹಲವು ಸ್ವಾಭಿಮಾನಿ ಹೋರಾಟಗಾರರು, ರಾಷ್ಟ್ರ ಪ್ರೇಮಿ ನೇತಾರರ ಶ್ರಮದ ಫಲವಾಗಿ ಸ್ವಾತಂತ್ರ್ಯಗಳಿಸಿ ಇಂದು ವಿಶ್ವ ಮಟ್ಟದಲ್ಲಿ ಗುರುತಿಸುವಂತಾಗಿದೆ. ವಿದೇಶಿಯರ ಕಾಪಟ್ಯದ ಕಾರಣ ಹಿಂದೊಮ್ಮೆ ಕನಿಷ್ಠ ಆಹಾರ, ವಸ್ತ್ರಗಳಿಗೂ ಪರರಾಷ್ಟ್ರಗಳನ್ನು ಆಶ್ರಯಿಸುವ ಸ್ಥಿತಿಯಿಂದ ವಿಮೋಚನೆ ಗೊಂಡು ಸ್ವಾವಲಂಬಿ, ಸುದೃಢ ಭಾರತ ನಿರ್ಮಾಣವಾಗಿದೆ. ಈ ನಿಟ್ಟಿನ ಸಾಧನೆಯಲ್ಲಿ ಇಲ್ಲಿಯ ಕೃಷಿಕನ ಎಡೆಬಿಡದ ಕ್ರಿಯಾತ್ಮಕ ಚಟುವಟಿಕೆ ಪ್ರಮುಖ ಕಾರಣ ಎಂದು ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಪ್ರತಿಷ್ಠಿತ ಅಡಿಕೆ ಸಹಿತ ಉಪ ಬೆಳೆಗಳ ಬೆಳೆಗಾರರ ಸಂಘಟನೆ ಕ್ಯಾಂಪ್ಕೋದ ನೇತೃತ್ವದಲ್ಲಿ ಬುಧವಾರ ನೀರ್ಚಾಲು ಸಮೀಪದ ವಿಷ್ಣುಮೂರ್ತಿ ನಗರದಲ್ಲಿನ ಒ.ಎಂ. ಅಡಿಟೋರಿಯಂ ನಲ್ಲಿ ಆಯೋಜಿಸಲಾಗಿದ್ದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ತನ್ನ ಸೇವೆ ಮತ್ತು ವ್ಯವಹಾರದಿಂದ ಗುರುತಿಸಿಕೊಂಡಿರುವ ಕ್ಯಾಂಪ್ಕೋ ಅಡಿಕೆ ಸಹಿತ ಇತರ ಉಪ ಬೆಳೆಗಳ ರೈತರೊಂದಿಗೆ ಅವರ ಆಶೋತ್ತರಗಳ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಅಡಿಕೆ ಮಾರುಕಟ್ಟೆಯ ಧಾರಣೆಯ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಸಮರೋಪಾದಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ತಿಳಿಸಿದರು.
ಕ್ಯಾಂಪ್ಕೋದ ವಿವಿಧ ಶಾಖೆಗಳ ಬೆಲೆಗಳ ನಡುವಿನ ತಾರತಮ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ಅವರು ಕ್ಯಾಂಪ್ಕೋ ವ್ಯವಹಾರ ನೂರಕ್ಕೆ ನೂರು ತೆರಿಗೆ ಪಾವತಿದಾರರ ಜೊತೆ ಇರಲಿದೆ ಎಂದು ತಿಳಿಸಿದರು.
ಹಿರಿಯ ಸದಸ್ಯರು ದೀಪ ಬೆಳಗಿಸಿ ಉದ್ಘಾಟಿಸಿದ ಸಭೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಕ್ಯಾಂಪ್ಕೋ ಪ್ರಸಕ್ತ ಸಾಲಿನಲ್ಲಿ 26.22 ಕೋಟಿ. ರೂ. ಗಳ ನಿವ್ವಳ ಲಾಭ ಗಳಿಸಿದ್ದು, ಶೇಕಡಾ ಹತ್ತು ಡಿವಿಡೆಂಡ್ ಪಾವತಿಸಲು ಮಹಾಸಭೆಗೆ ಶಿಫಾರಸು ಮಾಡಿದೆ. ಆಮದು ಅಡಿಕೆಯ ನಿಯಂತ್ರಣಕ್ಕೆ ಕ್ಯಾಂಪ್ಕೋ ಅವಿರತ ಯತ್ನ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಕ್ಯಾಂಪ್ಕೋ ನಿರ್ದೇಶಕರುಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ, ನ್ಯಾಯವಾದಿ ಕೆ. ರಾಜಗೋಪಾಲ, ಕೆ. ಬಾಲಕೃಷ್ಣ ರೈ ಬಾನೊಟ್ಟು, ಎಂ.ಕೆ.ಶಂಕರನಾರಾಯಣ ಭಟ್, ಜಯರಾಮ ಸರಳಾಯ, ಪ್ರಧಾನ ಪ್ರಬಂಧಕ ಪ್ರೇಮಾನಂದ ಶೆಟ್ಟಿಗಾರ್, ಮುರಳೀಧರ್ ಮೊದಲಾದವರು ಉಪಸ್ಥಿತರಿದ್ದರು.
ಸಿಪಿಸಿಆರ್‌ಐ ವಿಟ್ಲದ ಕೃಷಿ ವಿಜ್ಞಾನಿ ಡಾಣ ಭವಿಷ್ ಸಮಗ್ರ ಕೃಷಿ ಮತ್ತು ತೋಟಗಾರಿಕೆಯ ಬಗ್ಗೆ ಮಾಹಿತಿ ನೀಡಿ ಸಂವಾದ ನಡೆಸಿದರು. ನಿರ್ದೇಶಕ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು. ಟಿ.ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.