Advertisement

ನಿಮ್‌ ಏರಿಯಾದಲ್‌ ಇದೆಯಾ? ಏರಿಯಲ್‌ ಯೋಗ!

06:00 AM Nov 15, 2017 | Team Udayavani |

ಕಾಲದೊಂದಿಗೆ ಯೋಗವೂ ಹೆಜ್ಜೆ ಇಡುತ್ತಾ, ತನ್ನ ರೂಪ ರೂಪಗಳನ್ನು ದಾಟುತ್ತಿದೆ. ಮಕ್ಕಳು ಮಲಗುವ ಜೋಲಿಯಲ್ಲೂ “ಯೋಗ’ ಕಂಡುಕೊಳ್ಳುವ ದಿನಗಳಲ್ಲಿ ನಾವಿದ್ದೇವೆ. ಇದರ ಹೆಸರು ಏರಿಯಲ್‌ ಯೋಗ! ಸಿನಿಮಾಗಳಲ್ಲಿ “ಏರಿಯಲ್‌ ಶಾಟ್‌’ ಎಂಬ ಪದವನ್ನು ಬಳಸುತ್ತಾರೆ. ಮೇಲೆ, ಎತ್ತರದಲ್ಲಿ ಕ್ಯಾಮೆರಾ ಇಟ್ಟು ನಡೆಸುವ ಚಿತ್ರೀಕರಣಕ್ಕೆ ಏರಿಯಲ್‌ ಶಾಟ್‌ ಎನ್ನುತ್ತಾರೆ. ಅದೇ ರೀತಿ ನೆಲದಿಂದ ಮೇಲೆ, ತುಸು ಎತ್ತರದಲ್ಲಿ ಮಾಡುವ ಆಸನ, ಕಸರತ್ತಿಗೆ “ಏರಿಯಲ್‌ ಯೋಗ’ ಎಂದು ಹೆಸರು. ಬಾಲಿವುಡ್‌ ಸೆಲೆಬ್ರಿಟಿಯರಾದ ಅಲಿಯಾ ಭಟ್‌, ಬಿಪಾಶಾ ಬಸು ಮತ್ತು ಜೂಹಿ ಚಾವ್ಲಾ ಏರಿಯಲ್‌ ಯೋಗವನ್ನು ಅಭ್ಯಸಿಸುತ್ತಿರುವುದರಿಂದ ಜನರು ಅದರತ್ತ ಕುತೂಹಲದಿಂದ ನೋಡುತ್ತಿದ್ದಾರೆ.
ಏರಿಯಲ್‌ ಯೋಗ ಬೆಂಗಳೂರಿನಂಥ ಮಹಾನಗರಗಳಿಗೂ ಕಾಲಿಟ್ಟಿದೆ. ಉಯ್ನಾಲೆ ಮಾದರಿಯ ವಸ್ತ್ರೋಪಕರಣದಲ್ಲಿ ಜೀಕುತ್ತಾ, ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

Advertisement

ಯೋಗ ಮಾಡೋದು ಹೇಗೆ? 
ಏರಿಯಲ್‌ ಯೋಗ ಪ್ರಕಾರವನ್ನು ಅಭ್ಯಸಿಸಲು ವಿಶೇಷ ತೆರನಾದ ಬಟ್ಟೆ ಬೇಕು. ಇದು ಉಡುವ ಬಟ್ಟೆಯಲ್ಲ. ಉಯ್ನಾಲೆ ಕಟ್ಟುವ ಬಟ್ಟೆ. ಉತ್ತಮ ಗುಣಮಟ್ಟದ ಹೈಡೆನ್ಸಿಟಿ ನೈಲಾನ್‌ನಿಂದ ತಯಾರಿಸಲಾದ ಈ ಬಟ್ಟೆಯನ್ನು ಉಯ್ನಾಲೆಯಂತೆ ಕಟ್ಟಲಾಗುತ್ತೆ. ಅದನ್ನು ಸೊಂಟ, ಕೈಕಾಲುಗಳಿಗೆ ಬಿಗಿದುಕೊಂಡು ಯೋಗಾಸನ ಮತ್ತು ನೃತ್ಯ ಭಂಗಿಗಳನ್ನು ಅಭ್ಯಾಸ ಮಾಡಬೇಕು. ನೆನಪಿರಲಿ, ನಮಗೆ ನಾವೇ ಗುರುವಾಗುವುದಕ್ಕಿಂತ, ಮಾರ್ಗದರ್ಶಕರ ನಿರ್ದೇಶನದ ಅನುಸಾರ ಆ ಯೋಗಾಭ್ಯಾಸ ಮಾಡುವುದರಿಂದ ಪ್ರಯೋಜನ ಹೆಚ್ಚು.

ಆರೋಗ್ಯಕ್ಕೆ ಏನು ಲಾಭ?
ಗುರುತ್ವಾಕರ್ಷಣೆಗೆ ವಿರುದ್ಧವಾಗಿ ಮಾಡುವ ಈ ಆಸನಗಳಿಂದ ದೇಹದ ಮೂಳೆಗಳು ಮತ್ತು ಮಾಂಸ ಖಂಡಗಳು ಶಕ್ತಿಯುತವಾಗುವವು. ರಕ್ತ ಪರಿಚಲನೆ ಸುಗಮಗೊಳ್ಳುವುದು. ತೋಳುಗಳ ಸ್ನಾಯುಗಳು ಸಡಿಲಗೊಳ್ಳುವವು. ಏಕಾಗ್ರತೆ ಹೆಚ್ಚುವುದು. ಸಂಧಿಗಳು ಶಕ್ತಿಯುತವಾಗುವವು. ಜೀವನೋಲ್ಲಾಸ ಹೆಚ್ಚುವುದು.

Advertisement

Udayavani is now on Telegram. Click here to join our channel and stay updated with the latest news.