ಕಪ್ಪುಹಣವನ್ನು ನಿರ್ಮೂಲನ ಮಾಡಲು ಗರಿಷ್ಠ ಮೌಲ್ಯದ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂದೆಗೆದುಕೊಂಡ ನಿರ್ಧಾರಕ್ಕೆ ಒಂದು ವರ್ಷ ಪೂರ್ತಿಯಾದ ಸಂದರ್ಭದಲ್ಲೇ ರಾಜಕೀಯದವರು, ಉದ್ಯಮಿಗಳು, ಸಿನೆಮಾ ತಾರೆಯರು ಸೇರಿದಂತೆ ಶ್ರೀಮಂತ ಕುಳಗಳು ವಿದೇಶದಲ್ಲಿ ಬಚ್ಚಿಟ್ಟಿರುವ ಹಣದ ಮಾಹಿತಿಗಳು ಬಹಿರಂಗಗೊಂಡಿರುವುದು ಪರಿಸ್ಥಿತಿಯ ವಿಡಂಬನೆಯಂತಿದೆ. ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ ಬಹಿರಂಗವಾಗಿರುವ ದಾಖಲೆಗಳಲ್ಲಿ ಬ್ರಿಟನ್‌ನ ಮಹಾರಾಣಿಯೂ ಸೇರಿದಂತೆ ಜಗತ್ತಿನ ಹಲವು ದೇಶಗಳು ಪ್ರಮುಖ ಕುಳಗಳ ಹೆಸರುಗಳಿವೆ. ಕೇಂದ್ರ ಸಚಿವ ಜಯಂತ್ ಸಿನ್ಹ, ರಾಜ್ಯಸಭಾ ಸದಸ್ಯ ಆರ್. ಕೆ.ಸಿಂಗ್, ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ, ಸಂಸದ ವೀರಪ್ಪ ಮೊಯಿಲಿಯ ಪುತ್ರ ಹರ್ಷ ಮೊಲಿ, ಕಾರ್ಪೋರೇಟ್ ಲಾಬಿಗಾರ್ತಿ ನೀರಾ ರಾಡಿಯಾ, ಅಶೋಕ್ ಗೆಹೊಟ್, ಕಾರ್ತಿ ಚಿದಂಬರಂ, ಸಚಿನ್ ಪೈಲಟ್, ಅಮಿತಾಭ್ ಬಚ್ಚನ್ ಸೇರಿದಂತೆ 700ಕ್ಕೂ ಅಧಿಕ ಗಣ್ಯಾತಿಗಣ್ಯರ ಹೆಸರುಗಳಿವೆ. ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್‌ನ ಹಲವು ನಾಯಕರ ಹೆಸರುಗಳು ಇರುವುದರಿಂದ ಪರಸ್ಪರರಿಂದ ತೀವ್ರವಾದ ಟೀಕೆಗಳ ಸುರಿಮಳೆಯಾಗಿಲ್ಲ.
ಹಾಗೆಂದು ವಿದೇಶಗಳಲ್ಲಿ ಹಣ ಹೂಡಿಕೆ ಮಾಡಿರುವವರು ಅಥವಾ ವಿದೇಶಿ ಬ್ಯಾಂಕಿನಲ್ಲಿ ಹಣವಿಟ್ಟವರೆಲ್ಲ ಕಪ್ಪುಕುಳಗಳು ಎಂದು ಸಾರ್ವತ್ರೀಕರಿಸುವಂತಿಲ್ಲ. ತೆರಿಗೆ ಇಲಾಖೆಗಳ ಗಮನಕ್ಕೆ ತಂದು, ಕಾನೂನುಗಳನ್ನು ಪಾಲಿಸಿ ಇಟ್ಟ ವಿದೇಶ ಠೇವಣಿ ಅಥವಾ ಹೂಡಿಕೆ ಕಪ್ಪುಹಣವಾಗುವುದಿಲ್ಲ. ಹೀಗಾಗಿ ಪ್ಯಾರಡೈಸ್ ಪೇಪರ್ಸ್ ಬಹಿರಂಗಗೊಳಿಸಿದರೆಲ್ಲರನ್ನು ಕಳಂಕಿತರು ಎಂದು ಕರೆಯುವುದು ಸರಿಯಲ್ಲ. ಆದರೆ ತೆರಿಗೆ ಕಳ್ಳತನವನ್ನು ತಡೆಯಲು ಸರಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ತೆರಿಗೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ವಿದೇಶಗಳಿಗೆ ಈಗಲೂ ದುಡ್ಡು ಹರಿದು ಹೋಗುತ್ತಿದೆ ಎನ್ನುವುದು ಪ್ಯಾರಡೈಸ್ ಪೇಪರ್ಸ್‌ನಿಂದ ದೃಢಪಟ್ಟಿದೆ. ಪ್ಯಾರಡೈಸ್ ಪೇಪರ್ಸ್ ಸ್ಫೋಟಿಸಿರುವ ರಹಸ್ಯ ಭಾರತಕ್ಕಿಂತಲೂ ಅಮೆರಿಕ, ಬ್ರಿಟನ್, ರಶ್ಯಾ ಮುಂತಾದ ಮುಂದುವರಿದ ದೇಶಗಳಲ್ಲಿ ಹೆಚ್ಚು ಸಂಚಲನ ಉಂಟು ಮಾಡಿದೆ. ಟ್ರಂಪ್, ಪುಟಿನ್ ಅವರಂತಹ ಜಾಗತಿಕ ದಿಗ್ಗಜರು ಕೂಡ ಇದರಿಂದ ಚಿಂತಿತರಾಗಿದ್ದಾರೆ. ಬರ್ಮುಡಾದಲ್ಲಿ ಕಚೇರಿಯನ್ನು ಹೊಂದಿರುವ ಅಪ್ಲೆಬಿ ಎಂಬ ಕಾನೂನು ಸಂಸ್ಥೆ, ಕೇಮ್ಯಾನ್ ಐಲ್ಯಾಂಡ್, ಬ್ರಿಟಿಶ್ ವರ್ಜಿನ್ ಐಲ್ಯಾಂಡ್ ಮತ್ತಿತರ ಕೆಲ ಚಿಕ್ಕಪುಟ್ಟ ದೇಶಗಳೇ ತೆರಿಗೆ ಕಳ್ಳರ ಸ್ವರ್ಗವಾಗಿರುವುದು ಪ್ಯಾರಡೈಸ್ ಪೇಪರ್ಸ್‌ನಿಂದ ತಿಳಿದು ಬಂದಿದೆ.
ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಎಂಬ ಸಂಘಟನೆ ಯೊಂದಿದ್ದು, ಇದು ಕಾಲಕಾಲಕ್ಕೆ ಗಣ್ಯರ ಸಾಗರೋತ್ತರ ಹಣಕಾಸು ವ್ಯವ ಹಾರಗಳ ಮಾಹಿತಿಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡುತ್ತದೆ. ಭಾರತದ ಕೆಲ ಪತ್ರಿಕೆಗಳೂ ಸೇರಿ 67 ದೇಶಗಳ 90 ಪತ್ರಿಕೆಗಳ 380 ಪತ್ರಕರ್ತರು ಇರುವ ಒಕ್ಕೂಟವಿದು. ವಿದೇಶಗಳ ವಿವಿಧ ಕಂಪೆನಿಗಳಲ್ಲಿ ಹೂಡಿಕೆಯಾಗಿ ರುವ ಕೋಟ್ಯಂತರ ಡಾಲರ್ ಮೊತ್ತಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಈ ಒಕ್ಕೂಟ ದಾಖಲೆಗಳನ್ನು ತಯಾರಿಸುತ್ತದೆ. ಈ ಸಲ ಪ್ಯಾರಡೈಸ್ ಪೇಪರ್ಸ್ ಹೆಸರಿನಲ್ಲಿ 13.4 ದಶಲಕ್ಷ ಕಡತಗಳನ್ನು ಬಹಿರಂಗಗೊಳಿಸಲಾಗಿದ್ದು, ಈ ಅಂಶವೇ ತನಿಖಾ ಪತ್ರಕರ್ತರು ಎಷ್ಟು ಶ್ರಮ ಪಡಬೇಕಾಗುತ್ತದೆ ಎನ್ನುವುದನ್ನು ತಿಳಿಸುತ್ತದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ಯಾರಡೈಸ್ ಪೇಪರ್ಸ್ ದಾಖಲೆಗಳು ಬಹಿರಂಗವಾಗಿರುವುದನ್ನು ಭಾರೀ ದೊಡ್ಡ ಬೆಳವಣಿಗೆ, ಈಗ ಯಾವುದೂ ರಹಸ್ಯವಾಗಿ ಉಳಿಯುವುದಿಲ್ಲ ಎಂದು ಬಣ್ಣಿಸಿ ಭಾರತೀಯರ ಸಾಗರೋತ್ತರ ಹಣಕಾಸು ವಹಿವಾಟುಗಳ ತನಿಖೆ ನಡೆಸಲು ಪ್ರತ್ಯಕ್ಷ ತೆರಿಗೆ ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸುವ ಭರವಸೆಯಿತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಪನಾಮ ಪೇಪರ್ಸ್ ಬಹಿರಂಗಗೊಳಿಸಿದ 426 ಪ್ರಕರಣಗಳಲ್ಲಿ 147 ಪ್ರಕರಣಗಳು ಶಂಕಾಸ್ಪದ ಎಂದು ಕಂಡು ಬಂದಿವೆ. ಅವುಗಳ ವಿರುದ್ಧವೇ ಇನ್ನೂ ತನಿಖೆ ಪ್ರಾರಂಭ ವಾಗಿಲ್ಲ. ಈ ತನಿಖೆಯ ಮುಗಿಯದಿರುವಾಗ ಪ್ಯಾರಡೈಸ್ ಪೇಪರ್ಸ್ ತನಿಖೆ ಪ್ರಾರಂಭವಾಗುವುದು ಯಾವ ಕಾಲದಲ್ಲೋ!