ಹೊಸದಿಲ್ಲಿ : “ನಿಮ್ಮನ್ನು ನೀವು ಮುಜಾಹಿದೀನ್‌ಗಳೆಂದು ಕರೆದುಕೊಳ್ಳುವುದು ಸುಲಭ; ಆದರೆ ನೀವು ನಿಜಕ್ಕೂ ಮುಜಾಹಿದೀನ್‌ಗಳಾ ಅಥವಾ ಪಾಕಿಸ್ಥಾನದ ಪರವಾಗಿರುವ ಉಗ್ರರಾ’ ಎಂದು ಜಮ್ಮು ಕಾಶ್ಮೀರದ ಸ್ಥಳೀಯ ಉಗ್ರರನ್ನು 15ನೇ ತುಕಡಿಯ ಜನರಲ್ ಆಫೀಸರ್ ಕಮಾಂಡಿಂಗ್ ಲೆ| ಜ| ಜೆ ಎಸ್ ಸಂಧು ಪ್ರಶ್ನಿಸಿದ್ದಾರೆ, ಮತ್ತು ಆ ಮೂಲಕ ಅವರು ನೈತಿಕತೆ ಮತ್ತು ನಿಷ್ಣೆಯನ್ನು ಕೂಡ ಪ್ರಶ್ನಿಸಿದ್ದಾರೆ.
ಬಂಡಿಪೋರಾದಲ್ಲಿ ಮೊನ್ನೆ ಶನಿವಾರ ಆರು ಉಗ್ರರನ್ನು ಹತ್ಯೆಗೈದ ಬಳಿಕ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಭದ್ರತಾ ಪಡೆಗಳ ಮೊನ್ನೆಯ ಎನ್‌ಕೌಂಟರ್‌ನಲ್ಲಿ ಹತರಾದ ಆರು ಉಗ್ರರಲ್ಲಿ ಒಬ್ಟಾತನು ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಕೀ ಉರ್ ರೆಹಮಾನ್ ಲಖ್‌ವಿ ಯ ಸೋದರ ಸಂಬಂಧಿ ಮತ್ತು ಇನ್ನೊಬ್ಟಾತನು ನಿಷೇಧಿತ ಪಾಕ್ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಇದರ ಎರಡನೇ ಸಾಲಿನ ಕಮಾಂಡರ್ ಅಬ್ದುಲ್ ರೆಹಮಾನ್ ಮಕ್ಕಿ ಎಂಬಾತನ ಮಗ ನಾಗಿದ್ದಾನೆ.
ಸ್ಥಳೀಯ ಉಗ್ರರು ತಾವು ಪಾಕ್ ಪ್ರತಿನಿಧಿಗಳಲ್ಲ ಎಂಬುದನ್ನು ಅರಿತುಕೊಳ್ಳುವ ವಿವೇಕವನ್ನು ತೋರಬೇಕು ಎಂದು ಹೇಳಿದ ಸಂಧು, ನೀವು ನಿಜವಾದ ಮುಜಾಹಿದೀನ್‌ಗಳೇ ಆಗಿದ್ದಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಪುನರ್ ಸ್ಥಾಪಿಸುವ ಕೆಲಸದಲ್ಲಿ ತೊಡಗಬೇಕು ಎಂದು ಸ್ಥಳೀಯರ ರೂಪದಲ್ಲಿರುವ “ಪಾಕ್’ ಉಗ್ರರಿಗೆ ಬುದ್ಧಿವಾದ ಹೇಳಿದರು.
“ನಾವೀ ವಿಷಯವನ್ನು ಸ್ಥಳೀಯ ಉಗ್ರರ ವಿವೇಚನೆಗೆ ಬಿಡುತ್ತೇವೆ; ನೀವು ಮುಖ್ಯ ವಾಹಿನಿಗೆ ಮರಳುವುದಿದ್ದರೆ ನಿಮ್ಮನ್ನು ನಾವು ಗೌರವದಿಂದ ಸ್ವೀಕರಿಸುತ್ತೇವೆ; ಇಲ್ಲದಿದ್ದರೆ ಭದ್ರತಾ ಪಡೆಗಳ ಗುಂಡಿಗೆ ನೀವು ಹತರಾಗಬೇಕಾಗುತ್ತದೆ’ ಎಂದು ಲೆ| ಜ| ಸಂಧು ಸ್ಪಷ್ಟವಾದ ಮಾತುಗಳಲ್ಲಿ ಸ್ಥಳೀಯ ಉಗ್ರರಿಗೆ ಹೇಳಿದರು.