Advertisement

ನಾವು ಮರೆತೇವದನ ಹ್ಯಾಂಗ?

07:00 AM May 27, 2018 | |

ಇತ್ತೀಚೆಗೆ ನಿಧನರಾದ ಪ್ರಸಿದ್ಧ ವಿಮರ್ಶಕ ಗಿರಡ್ಡಿ ಗೋವಿಂದರಾಜರನ್ನು ಅವರ ಗೆಳೆಯ ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಕಳೆದ ರವಿವಾರದ ಸಾಪ್ತಾಹಿಕ ಸಂಪದದಲ್ಲಿ ನೆನಪಿಸಿಕೊಂಡಿದ್ದರು. ಗಿರಡ್ಡಿಯವರ ಬಗ್ಗೆ ಮಾತನಾಡುವಾಗಲೆಲ್ಲ ಇಡೀ ಧಾರವಾಡದ ಚಿತ್ರ ಕಣ್ಣೆದುರು ಸುಳಿಯುತ್ತದೆ ಎನ್ನುತ್ತಾರೆ ಮತ್ತೋರ್ವ ಸಾಹಿತಿ ರಾಘವೇಂದ್ರ ಪಾಟೀಲ…

Advertisement

ನಿಮ್ಮ ಸೆರಗ ಮರೀ ಮಾಡಿದಿರಿ,
ಲಾಲಿ ಹಾಡಿದಿರಿ
ಆಟ ಆಡಿದಿರಿ-ಏನೋ ಹಾಂಗ
ಮರೆತೆವು-ಕಳೆದ ಜನ್ಮಧಾಂಗ!

ಜೋಲಿ-ಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲು-ಲೋಕದಾಗ?
ನಾವು-ಮರೆತೇವದನ ಹ್ಯಾಂಗ?  
         
ಅಂಬಿಕಾತನಯ ದತ್ತ

-ಇವು, ಬೇಂದ್ರೆಯವರು 1944ರಲ್ಲಿ ಧಾರವಾಡವನ್ನು ಬಿಟ್ಟು ಸೊಲ್ಲಾಪುರಕ್ಕೆ ಹೋಗುವಾಗ ಬರೆದ ನಾವು ಬರತೇವಿನ್ನ  ಕವಿತೆಯ ಸ್ಟಾಂಜಾಗಳು. ಇಲ್ಲಿನ ಸಾಲುಗಳು ಧಾರವಾಡವು ಬೇಂದ್ರೆಯವರಿಗೆ ಊಡಿಸಿದ ಪ್ರೀತಿಯನ್ನು ಮಾತ್ರ ಹೇಳುವಂತಹವುಗಳಲ್ಲ  ಇವು ಧಾರವಾಡದಲ್ಲಿ ನೆಲೆಸಿದ ಎಲ್ಲ ಸಾಹಿತಿ ಕಲಾವಿದರಿಗೆ ಧಾರವಾಡವು ನೀಡಿದ ಬೆಚ್ಚನೆಯ ಸಾಂಸ್ಕೃತಿಕ ವಾತಾವರಣವನ್ನು ತಿಳಿಸುವಂತಹವುಗಳು! ಧಾರವಾಡವು ಒಟ್ಟು ಕರ್ನಾಟಕದ ಮತ್ತು ಬಹುಮುಖ್ಯವಾಗಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ಪುನರುತ್ಥಾನದ ಕಾಳಜಿಯನ್ನು ವಹಿಸಿಕೊಂಡು, ಅದರಂಗವಾಗಿ ಎಲ್ಲ ಸಾಂಸ್ಕೃತಿಕ ವ್ಯಕ್ತಿಗಳನ್ನೂ ತಾಯ್ತನದ ವಾತ್ಸಲ್ಯದ ನೆರಕೆಯನ್ನು ಕಟ್ಟಿ ಪೋಷಿಸುವ ನಂಟನ್ನು ನಿರ್ವಹಿಸಿತು. 

ಹತ್ತೂಂಬತ್ತನೆಯ ಶತಮಾನದ ಉತ್ತರಾರ್ಧದ ಕಾಲದಲ್ಲಿ, ಇಂಜಿನಿಯರ್‌ ಆಗಿದ್ದ ಡೆಪ್ಯುಟಿ ಚೆನ್ನಬಸಪ್ಪನವರು ತಮ್ಮ ಇಂಜಿನಿಯರ್‌ ಹು¨ªೆಯನ್ನು ಬಿಟ್ಟುಕೊಟ್ಟು ಶಿಕ್ಷಣ ಇಲಾಖೆಯನ್ನು ಸೇರಿ ಉತ್ತರಕರ್ನಾಟಕದ ಭಾಗದಲ್ಲಿ ಕನ್ನಡದ ಸಬಲೀಕರಣದ ಆವಶ್ಯಕತೆಯನ್ನು ಪೂರೈಸುವ ಒತ್ತಾಸೆಯನ್ನು ತೋರಿದರು. ಅವರ ಇಂತಹ ಒತ್ತಾಸೆಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸುವುದಕ್ಕೆ ಪ್ರೇರಣೆ ದೊರೆಯಿತು. ಕನ್ನಡ ಗಂಡುಮಕ್ಕಳ ಸರ್ಕಾರೀ ಟ್ರೇನಿಂಗ್‌ ಕಾಲೇಜು ಆರಂಭಗೊಂಡು ಕನ್ನಡದ ಕೆಲಸಗಳು ಹುರಿಗಟ್ಟಲು ಆರಂಭವಾದವು. ಬರೀ ಕನ್ನಡ ಶಾಲೆಗಳನ್ನು ಆರಂಭಿಸಿಬಿಟ್ಟರೆ ಸಾಲದು, ಕನ್ನಡದಲ್ಲಿ ಓದಲು ಸೂಕ್ತ ಪಠ್ಯಗಳು ಸಿಕ್ಕಬೇಕು ಎನ್ನುವ ಅವರ ಪ್ರೋತ್ಸಾಹದಿಂದ ವೆಂಕಟ ರಂಗೋ ಕಟ್ಟಿ, ಗಂಗಾಧರ ಮಡಿವಾಳೇಶ್ವರ ತುರಮುರಿ ಮುಂತಾದವರು ಕನ್ನಡದಲ್ಲಿ ಗ್ರಂಥ ರಚನೆಯನ್ನು ಆರಂಭಿಸಿದರು. ಕನ್ನಡ ವಾತಾವರಣ ನಿರ್ಮಾಣ ಮಾಡುವ ಕುರಿತ ಡೆಪ್ಯುಟಿ ಚೆನ್ನಬಸಪ್ಪನವರ ಇಂತಹ ಚಟುವಟಿಕೆಗಳು ಹೊಸ ಯುವಕರಲ್ಲಿ ಕನ್ನಡದ ಬಗೆಗಿನ ಕಿಚ್ಚನ್ನು ಉದ್ದೀಪಿಸಿದವು. 1887ರಲ್ಲಿ ಇಪ್ಪತ್ತೇಳು ವರ್ಷದ ಚಿಕ್ಕ ವಯಸ್ಸಿನ ರಾ. ಹ. ದೇಶಪಾಂಡೆ ಅವರು ಕನ್ನಡದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಅನುಕೂಲವಾಗುವಂತೆ ಒಂದು ಸಂಸ್ಥೆಯನ್ನು ಕಟ್ಟಬೇಕೆನ್ನುವ ಕನಸನ್ನು ತಾಳಿದರು. ಆ ಸಂದರ್ಭದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದ ರಾವ್‌ಸಾಹೇಬ ಗುರುಸಿದ್ದಪ್ಪ ಗಿಲಗಂಜಿಯವರು, ಶಾಂತವೀರಪ್ಪ ಮೆಣಸಿನಕಾಯಿ ಮುಂತಾದವರೊಡನೆ ಈ ಬಗ್ಗೆ ಅವರು ತಮ್ಮ ಕನಸನ್ನು ಹಂಚಿಕೊಂಡಾಗ ಅವರೆಲ್ಲರೂ ಇದು ಬರೀ ಕನಸಾಗಿರುವುದು ಏಕೆ, ನಾವೆಲ್ಲ ಸೇರಿ ಇದನ್ನು ನನಸು ಮಾಡೋಣ ಎನ್ನುವ ನಿಶ್ಚಯದಿಂದ 1890ರ ಜುಲೈ 20ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. “ಹೊಸಯಲ್ಲಾಪುರದ ಮಂಗ್ಯಾನಮಹಲ್‌’ (ಅಲ್ಲಿ ಬಹು ಸಂಖ್ಯೆಯಲ್ಲಿ ಮಂಗಗಳು ಬಂದು ಕೂರುತ್ತಿದ್ದುವಂತೆ!) ಎನ್ನುವ ಕಟ್ಟಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ವಿಧ್ಯುಕ್ತವಾಗಿ ಆರಂಭಗೊಂಡಿತು. ಸಂಘದ ಮೊದಲ ಅಧ್ಯಕ್ಷರು ಶ್ಯಾಮರಾವ್‌ ಕೈಕಿಣಿಯವರಾಗಿದ್ದರು. ರಾ. ಹ. ದೇಶಪಾಂಡೆಯವರು ಅದರ ಪ್ರಧಾನ ಕಾರ್ಯದರ್ಶಿಗಳು. ರೆವೆರೆಂಡ್‌ ಕಿಟ್ಟೆಲ್‌, ಝಿಗ್ಲರ್‌, ರೈಸ್‌ ಮತ್ತು ಫ್ಲೀಟ್‌ ಅವರು ಸಂಘದ ಖಾಯಂ ಆಹ್ವಾನಿತ ಸದಸ್ಯರಾಗಿದ್ದರು. ಸಂಘವು ತಾನು ಆರಂಭಗೊಂಡ ಮರುವರ್ಷವೇ ಕನ್ನಡದ ಓದಿಗಾಗಿ ಇರುವ ಪಠ್ಯಗಳ ಕೊರತೆಯನ್ನು ಮನಗಂಡು ಗ್ರಂಥ ಸಂಪಾದನೆ ಮತ್ತು ಪ್ರಕಟಣೆಯ ಕಾರ್ಯವನ್ನು ಆರಂಭಿಸಿತು. 1991-92ರಷ್ಟೊತ್ತಿಗೆ ಧೋಂಡೋ ಮುಳಬಾಗಲು ಅವರು ಅನುವಾದಿಸಿದ ಭವಭೂತಿಯ ಉತ್ತರ ರಾಮಚರಿತೆ ಗ್ರಂಥವನ್ನು ಪ್ರಕಟಿಸಿತು. ಮುಂದೆ 1896-97ರಲ್ಲಿ ಗಳಗನಾಥ ಅವರ ಪ್ರಬುದ್ಧಪದ್ಮನಯನೆ  ಕಾದಂಬರಿಯನ್ನು ಪ್ರಕಟಿಸಿತು. ಸಂಘಕ್ಕಾಗಿ ಗ್ರಂಥಗಳನ್ನು ಸಂಪಾದಿಸಿಕೊಡುವ ಕೆಲಸವನ್ನು ಸರ್ವಶ್ರೀ ಧೋಂಡೋ ಮುಳಬಾಬಲು, ವೆಂಕಟ ರಂಗೋ ಕಟ್ಟಿ, ಗಂಗಾಧರ ಮಡಿವಾಳೇಶ್ವರ ತುರಮುರಿ ಮುಂತಾದವರು ಅತ್ಯಂತ ನಿಸ್ಪೃಹತೆಯಿಂದ ನಡೆಸಿದರು. ಮುಂದೆ, ಸಂಘ ಜನ್ಮತಾಳಿದ ಆರುವರ್ಷಗಳ ತರುವಾಯ ವಾಗೂ½ಷಣ ಎನ್ನುವ ಪತ್ರಿಕೆಯನ್ನು ಆರಂಭಿಸಿ ಕನ್ನಡ ಸಂಸ್ಕೃತಿಯ ಪುನರುತ್ಥಾನದ ಕೆಲಸ ಪ್ರಾರಂಭಿಸಲಾಯಿತು. ಶ್ರೀಯುತರಾದ ಸಕ್ರಿ ಬಾಳಾಚಾರ್ಯರು, ವೆಂಕಟೇಶ ರಂಗೋ ಕಟ್ಟಿ ಮತ್ತು ಗಂಗಾಧರ ಮಡಿವಾಳೇಶ್ವರ ತುರಮುರಿ ಇವರು ಈ ಪತ್ರಿಕೆಯ ಕರ್ಣಧಾರತ್ವವನ್ನು ವಹಿಸಿಕೊಂಡರು. ಓದಿಗಾಗಿ ಇರುವ ಪಠ್ಯಗಳ ಕೊರತೆಯನ್ನು ಮನಗಂಡು ಸಂಘವು ಮತ್ತು ಧಾರವಾಡದ ಸಾಂಸ್ಕೃತಿಕ ಮುಖಂಡರು ಗ್ರಂಥಸಂಪಾದನೆಯ ಒಂದು ಹೊಸ ಚಳುವಳಿಯನ್ನೇ ಆರಂಭಿಸಿದರು.

Advertisement

ಕರ್ನಾಟಕ ಏಕೀಕರಣ ಚಳುವಳಿ
ಇಪ್ಪತ್ತನೆಯ ಶತಮಾನದ ಆರಂಭದೊಂದಿಗೆ ಧಾರವಾಡದಲ್ಲಿ, ಮುಂದೆ ಕರ್ನಾಟಕದ ಕುಲಪುರೋಹಿತ ಎನ್ನುವ ಅನ್ವರ್ಥಕ ಬಿರುದನ್ನು ಗಳಿಸಿಕೊಂಡ, ಆಲೂರ ವೆಂಕಟರಾಯರ ಪ್ರವೇಶವಾಯಿತು. ಇವರು ಕನ್ನಡ ಮತ್ತು ಕರ್ನಾಟಕತ್ವದ ವಿಕಾಸದ ಕನಸನ್ನು ಕಂಡು ಅದಕ್ಕಾಗಿ ಅಹರ್ನಿಶಿ ದುಡಿದವರು. ಇವರು ಕರ್ನಾಟಕದ ಗತವೈಭವ ಕೃತಿಯನ್ನು ರಚಿಸಿ, ಕನ್ನಡಿಗರಲ್ಲಿ ಕರ್ನಾಟಕತ್ವದ ಬಗೆಗಿನ ಅಭಿಮಾನವನ್ನು ಉದ್ದೀಪಿಸುವ ಪ್ರಯತ್ನ ಮಾಡಿದರು. ಇವರಿಗೆ ಕೂಡ ಕನ್ನಡದಲ್ಲಿನ ಪಠ್ಯಗಳ ಕೊರತೆ ಕಾಡಿತು. ಜೊತೆಗೆ ಹರಿದು ಹಂಚಿಹೋದ ಕನ್ನಡ ನಾಡಿನ ನಾಲ್ಕು ಕಡೆಗಳ ಗ್ರಂಥಗಳಲ್ಲಿ ಬಳಕೆಯಾಗುವ ಭಾಷೆಯ ವ್ಯತ್ಯಾಸಗಳು ಒಂದು ದೊಡ್ಡ ಸಮಸ್ಯೆ ಎನ್ನುವುದು ಇವರ ನಂಬಿಕೆಯಾಗಿತ್ತು. ಈ ಭಾಷಾಭೇದಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಅಳಿಸಿ ಏಕರೂಪತೆಯನ್ನು ಉಂಟುಮಾಡುವದು ವಿದ್ವಾಂಸರ ಮುಖ್ಯಕಾರ್ಯ ಎಂದು ಮನಗಂಡ ಆಲೂರು ವೆಂಕಟರಾಯರು, ಕರ್ನಾಟಕ ವಿದ್ಯಾವರ್ಧಕ ಸಂಘದ ವಾರ್ಷಿಕ ಅಧಿವೇಶನದ ಅಂಗವಾಗಿ ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಪ್ರಥಮ ಸಮ್ಮೇಳನವನ್ನು ಆಯೋಜಿಸಿದರು (1907). ಕರ್ನಾಟಕದ ವಿವಿಧ ಭಾಗಗಳಿಂದ ಗ್ರಂಥಕರ್ತರೂ, ಶಿಕ್ಷಕರೂ, ವಿದ್ಯಾಧಿಕಾರಿಗಳೂ ಸೇರಿದ್ದರು. “ಎಲ್ಲ ಭಾಗದವರಿಗೂ ಸಮ್ಮತವಾಗುವ ರೀತಿಯಲ್ಲಿ ಗ್ರಂಥಗಳನ್ನು ರಚಿಸಿ “ಕರ್ನಾಟಕ ಗ್ರಂಥಮಾಲೆ ಎಂಬ ಹೆಸರಿನಲ್ಲಿಯೇ ಪ್ರಕಟಿಸತಕ್ಕದ್ದು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಇದರ ಮರುವರ್ಷವೇ, ಸಂಘದ ಆಶ್ರಯದಲ್ಲಿ ಗ್ರಂಥಕರ್ತರ ಎರಡನೆಯ ಸಮ್ಮೇಳನವೂ ನಡೆಯಿತು. ಮುಂದೆ 1915ರಲ್ಲಿ ಬೆಂಗಳೂರಿನಲ್ಲಿ ಇದರ ಮೂರನೆಯ ಸಮ್ಮೇಳನವು ನಡೆಯಿತು. ಈ ಪ್ರಯತ್ನಗಳು ಕನ್ನಡದ ಉಪಭಾಷೆಗಳನ್ನು ಕುರಿತ ಒಂದು ಪರಸ್ಪರ ತಿಳುವಳಿಕೆ ಲಭ್ಯವಾಯಿತು. ಕನ್ನಡದ ಸಬಲೀಕರಣಕ್ಕೆ ಇದು ಬಹುಮುಖ್ಯ ಅನುಕೂಲವನ್ನೊದಗಿಸಿತು. 

ಇನ್ನೊಂದು ಬಹುಮುಖ್ಯ ಘಟನೆಯೆಂದರೆ, ಕರ್ನಾಟಕ ಏಕೀಕರಣ ಚಳುವಳಿ. 1906ರಲ್ಲಿ ಗದಿಗೆಯ್ಯ ಹೊನ್ನಾಪುರಮಠ ಅವರ ಮನೆಯ ಅಟ್ಟದಲ್ಲಿ ಆಲೂರ ವೆಂಕಟರಾಯರು, ಜಂಗಿನ ಮುರಿಗೆಯ್ಯ ಮುಂತಾದ ಗೆಳೆಯರು ಸೇರಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಹುಟ್ಟಿಹಾಕಿದರು. ಆಗ ಅವರು ಹಚ್ಚಿದ ಕಿಚ್ಚು ಮುಂದೆ ದೇವರಾಜ ಅರಸುರವರು ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರನ್ನು ಘೋಷಿಸುವವರೆಗೆ ಮುಂದುವರೆದಿತ್ತು. 

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಧಾರವಾಡದ ಇನ್ನೊಂದು ಬಹುದೊಡ್ಡ  ಕಾಣಿಕೆಯೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ. ಕ.ವಿ.ವ. ಸಂಘದ ಸ್ಥಾಪಕ ರಾ.ಹ. ದೇಶಪಾಂಡೆಯವರು ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರಿಗೆ ತುಂಬ ಆಪ್ತರು. ವಿಶ್ವೇಶ್ವರಯ್ಯನವರು 1914ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ “ಎಕೊನೊಮಿಕ್‌ ಕಾನ್ಫರೆನ್ಸ್‌’ಗೆ ರಾ.ಹ. ಅವರನ್ನು ಮತ್ತು ಆಲೂರ ಅವರನ್ನು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಆಲೂರ ಮತ್ತು ರಾ.ಹ. ಅವರು ಕನ್ನಡದ ಹಿತ ಸಾಧಿಸುವುದಕ್ಕೆ ಒಂದು ಸಂಘಟನೆಯನ್ನು ಆರಂಬಿಸಬೇಕೆನ್ನುವ ಸಲಹೆಯನ್ನು ನೀಡಿದರು. ಇದರ ಪರಿಣಾಮವಾಗಿ 1915ರಲ್ಲಿ “ಕನ್ನಡ ಸಾಹಿತ್ಯ ಪರಿಷತ್ತು’ ಜನ್ಮತಾಳಿತು. ಈ ಸಂಘಟನೆಯ ಬಗೆಗೆ ಧಾರವಾಡದ ಸಾಂಸ್ಕೃತಿಕ ವಲಯದಲ್ಲಿ ಎಷ್ಟು ಆಸಕ್ತಿ ಮತ್ತು ಉತ್ಸಾಹಗಳಿದ್ದವೆಂದರೆ, ಅವರು ಧಾರವಾಡದ, ಆಗಿನ ಕಾಲದ ಪ್ರಸಿದ್ಧ ಜ್ಯೋತಿಷಿಯಾಗಿದ್ದ ಶ್ರೀ ಜೋಗಳೇಕರ್‌ ಎನ್ನುವವರಿಂದ ಪರಿಷತ್ತಿನ ಜನ್ಮ ಕುಂಡಲಿಯನ್ನು ಹಾಕಿಸುತ್ತಾರೆ! ಅದು ಕನ್ನಡದ ಹಿತಕ್ಕಾಗಿ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಮುಂಗಾಣಲು ಪ್ರಯತ್ನಿಸುತ್ತಾರೆ! ಶ್ರೀ ಜೋಗಳೇಕರ್‌ ಅವರ ಭವಿಷ್ಯದ ವಿವರಗಳು ಎಂತಿದ್ದವೋ, ಮತ್ತು ಅವು ಇಂದಿನ ವಾಸ್ತವವನ್ನು ಬಿಂಬಿಸುತ್ತವೆಯೋ ಇಲ್ಲವೋ ಎನ್ನುವುದು ಕುತೂಹಲಕರವಾದ ಅಂಶಗಳು. ಇರಲಿ.

ಕನ್ನಡ ಸಾಹಿತ್ಯದ ನವೋದಯದ ಹಂತವು ಧಾರವಾಡದ ಸಾಂಸ್ಕೃತಿಕ ಇತಿಹಾಸದಲ್ಲಿ ಮರೆಯಲಾಗದ ಒಂದು ಭಾಗ. ಶಂಬಾ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಜಿ. ಬಿ. ಜೋಶಿ, ಪ್ರಹ್ಲಾದ ನರೇಗಲ್‌, ವಿ.ಕೃ. ಗೋಕಾಕ, ಎನೆR, ಕೀರ್ತಿನಾಥ ಕುರ್ತಕೋಟಿ, ವಾಡಪ್ಪಿ , ಶೇ.ಗೋ. ಕುಲಕರ್ಣಿ, ಕೃಷ್ಣಕುಮಾರ ಕಲ್ಲೂರು… ಹೀಗೆ ಹಲವಾರು ಪ್ರತಿಭಾನ್ವಿತರು ಒಟ್ಟಿಗೆ ಸೇರಿ ಸಾಹಿತ್ಯಕ ಸಾಂಸ್ಕೃತಿಕ ಸುಗ್ಗಿಯನ್ನು ತಂದ ಕಾಲ, ಇಪ್ಪತ್ತನೆಯ ಶತಮಾನದ ಎರಡನೆಯ ದಶಕದಿಂದ ಆರಂಭವಾಯಿತು. ಹೀಗೆ ಒಟ್ಟಿಗೆ ಸೇರಿದ ಇವರು ತಮ್ಮನ್ನು ಗೆಳೆಯರ ಗುಂಪು ಎಂದು ಕರೆದುಕೊಂಡರು. “ನಲ್‌’ ಎನ್ನುವುದು ಗುಂಪಿನ ಎಲ್ಲ ಸದಸ್ಯರ ಧ್ಯೇಯಘೋಷವಾಯಿತು. ಸಾಹಿತ್ಯ ಸಮ್ಮೇಳನಕ್ಕೆ ಒಟ್ಟಿಗೇ ಹೋಗುವುದು, ಅಲ್ಲಿ ಒಟ್ಟಿಗೆ ಒಂದೇ ಕಡೆ ಉಳಿದು, ಅಕ್ಕಪಕ್ಕದಲ್ಲಿ ಮಲಗಿ ಸ್ನೇಹ ಸಲ್ಲಾಪದಲ್ಲಿ ತೊಡಗುವುದು- ಹೀಗೆ ಸ್ನೇಹ ಸಾನ್ನಿಧ್ಯದಲ್ಲಿ ಸಂತೋಷಪಡುತ್ತಿದ್ದ ಯುವಪಡೆ ಇದು. ಆ ಕಾಲದಲ್ಲಿ ಗುಂಪಿನ ಪ್ರತಿಯೊಬ್ಬ ಲೇಖಕನೂ ತನ್ನ ಕೃತಿಗೆ “ಗೆಳೆಯರ ಗುಂಪಿನ’ ಎಂದು ತಮ್ಮ ಹೆಸರನ್ನು ಹಾಕಿಸಿಕೊಳ್ಳುತ್ತಿದ್ದರು. ಗೆಳೆಯರ ಗುಂಪು 1922ರಲ್ಲಿ ಆರಂಭಗೊಂಡಿತು. ಗೆಳೆಯರ ಗುಂಪಿನ ಲೇಖಕರು 1922ರಲ್ಲಿ ಆಲೂರರು ಆರಂಭಿಸಿದ “ಜಯಕರ್ನಾಟಕ’ ಪತ್ರಿಕೆಯ ಲೇಖಕಬಳಗವೂ ಆಗಿದ್ದಿತು. “ಜಯಕರ್ನಾಟಕ’ ಅನೇಕ ಹೊಸ ಲೇಖಕರನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿತು. ಅಂತೆಯೇ ಅದು ಉತ್ತರಕರ್ನಾಟಕದ ಭಾಗದಲ್ಲಿ ಸಾಂಸ್ಕೃತಿಕ ಜಾಗೃತಿಯನ್ನುಂಟು ಮಾಡುವಲ್ಲಿ ಶ್ರಮಿಸಿತು. ಶಂಬಾ ಅವರು ಜಯಕರ್ನಾಟಕದೊಂದಿಗೆ ಗರಿಷ್ಠ ಸಂಬಂಧ ಇರಿಸಿಕೊಂಡವರು. ಮುಂದೆ 1930ರಲ್ಲಿ ಆಲೂರರು ಜಯಕರ್ನಾಟಕ  ಪತ್ರಿಕೆಯನ್ನು ಗೆಳೆಯರ ಗುಂಪಿಗೆ ವಹಿಸಿಕೊಟ್ಟರು. ಬೆಟಗೇರಿ ಕೃಷ್ಣಶರ್ಮರು ಜಯಕರ್ನಾಟಕ ದ ಕರ್ಣಧಾರತ್ವವನ್ನು ವಹಿಸಿದರು. ಆದರೆ, ಅಷ್ಟರಲ್ಲಿ ಗುಂಪಿನಲ್ಲಿ ಪರಸ್ಪರ ಅಪನಂಬಿಕೆಗಳು ಆರಂಭಗೊಂಡಿದ್ದವು. ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳದ ಗೆಳೆಯರ ಗುಂಪು ಅನಧಿಕೃತವಾಗಿಯೇ ತನ್ನ ವಿಘಟನೆಯನ್ನು ಘೋಷಿಸಿಕೊಂಡಿತು. ಜಯಕರ್ನಾಟಕ  ನಿಂತುಹೋಯಿತು (1932). ಆಗ ಬೆಟಗೇರಿ ಕೃಷ್ಣಶರ್ಮ, ಜಿ.ಬಿ. ಜೋಶಿ ಮತ್ತು ಗೋವಿಂದ ಚುಳಕಿ ಅವರು ಸೇರಿಕೊಂಡು “ಮನೋಹರ ಗ್ರಂಥಮಾಲಾ’ ಎನ್ನುವ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದರು (1933). ಧಾರವಾಡದ ಸುಭಾಷ ಬೀದಿಯ ಲಕ್ಷ್ಮೀಭವನದ ಅಟ್ಟದ ಮೇಲೆ ಆರಂಭಗೊಂಡ ಮನೋಹರ ಗ್ರಂಥಮಾಲಾ ಇಂದಿನವರೆಗೂ ತನ್ನ ಸಾಂಸ್ಕೃತಿಕ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಜಿಬಿ, ಕೀರ್ತಿ, ಕಾರ್ನಾಡ್‌, ಗಿರಡ್ಡಿ ಮುಂತಾದ ಸಾಹಿತ್ಯ ದಿಗ್ಗಜರ ಹರಟೆಯ ಅಡ್ಡೆಯಾಗಿ, ವಾš¾ಯ ಪ್ರಯೋಗಶಾಲೆಯಾಗಿ ಈ ಅಟ್ಟವು ನಿತ್ಯ ಪ್ರಸ್ತುತವಾಗುಳಿದಿದೆ. ಆರಂಭಗೊಂಡ ಎರಡು ವರ್ಷಗಳಲ್ಲಿಯೇ, ಆರ್ಥಿಕ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬೆಟಗೇರಿ ಮತ್ತು ಚುಳಕಿಯವರು ಮಗ್ರಮಾವನ್ನು ಜೀಬಿ ಒಬ್ಬರಿಗೇ ವಹಿಸಿ ತಾವು ಅದರಿಂದ ಹೊರಬಿದ್ದರು. ಮುಂದೆ 1938ರಲ್ಲಿ ಬೆಟಗೇರಿಯವರು ಜಯಂತಿ ಎನ್ನುವ ಮಾಸಪತ್ರಿಕೆಯನ್ನು ಆರಂಭಿಸಿ, ಧಾರವಾಡದ ಸಾಂಸ್ಕೃತಿಕ ಲೋಕಕ್ಕೆ ಇನ್ನೊಂದು ಹರಟೆಯ ಅಡ್ಡೆ-ವಾš¾ಯ ಪ್ರಯೋಗಶಾಲೆಯಾಗಿ, ಇನ್ನೊಂದು ಅಟ್ಟವನ್ನು ನಿರ್ಮಿಸಿದರು. ಪ್ರತಿದಿನ ಸಂಜೆಗೆ ಈ ಎರಡು ಅಟ್ಟಗಳಲ್ಲಿ ಲೇಖಕರ ಬಳಗಗಳು ಸೇರಿಕೊಂಡು ಸಾಹಿತ್ಯ ಸÇÉಾಪದ ರಸದೌತಣವನ್ನು ಏರ್ಪಡಿಸುತ್ತಿದ್ದವು. ಜಯಂತಿ ಪತ್ರಿಕೆಯೂ ಕನ್ನಡದ ನವೋದಯಕ್ಕೆ ಅತ್ಯಂತ ಫ‌ಲಪ್ರದವಾದ ಕಾಣಿಕೆಯನ್ನು ನೀಡುತ್ತ 1961ರವರೆಗೆ ಬದುಕುಳಿಯಿತು. 

ಧಾರವಾಡವು ಕೇವಲ ಸಾಹಿತ್ಯದ ಕೇಂದ್ರ ಮಾತ್ರವಲ್ಲ. ಇಲ್ಲಿನ ಸಂಗೀತ ಲೋಕವು ಜಗತ್‌ಪ್ರಸಿದ್ಧವಾದದ್ದು. ಬಸವರಾಜ ರಾಜಗುರು, ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್‌ ಹೀಗೆ ಹತ್ತಾರು ಪ್ರಸಿದ್ಧ ಪ್ರತಿಭಾನ್ವಿತ ಸಂಗೀತಗಾರರು ಧಾರವಾಡದ ವಾತಾವರಣವನ್ನು ಸಂಗೀತಮಯವಾಗಿಸಿದವರು. ಇದಲ್ಲದೆ ಇಲ್ಲಿ ಹಾಲಭಾವಿಯವರಂತಹ ಚಿತ್ರಕಲೆಯ ಪ್ರತಿಭಾನ್ವಿತರೂ ಕ್ರಿಯಾಶೀಲರಾಗಿದ್ದರು. ಒಟ್ಟಿನಲ್ಲಿ ಧಾರವಾಡವು ಎಲ್ಲಾ ಕಲೆಗಳ ಆಗರವಾಗಿ ಬಹುದೊಡ್ಡ ಸಂಖ್ಯೆಯ ಸಾಂಸ್ಕೃತಿಕ ಮನಸ್ಸುಗಳನ್ನು ಪೋಷಿಸುತ್ತ ಬಂದಂತಹದು. 

ಸಮಕಾಲೀನ ಸಂದರ್ಭ ಕೂಡ ಧಾರವಾಡದ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿಯೇ ಉಳಿದದ್ದು. ಸಾಂಸ್ಕೃತಿಕ ಧುರೀಣರಾದ ಪಾಟೀಲ ಪುಟ್ಟಪ್ಪ ಮತ್ತು ಅವರ ಪ್ರಪಂಚ, ಹಿರಿಯ ವಿಮರ್ಶಕರಾದ ಜಿ. ಎಸ್‌. ಆಮೂರ, ಕನ್ನಡದ ಮಹತ್ವದ ಕವಿ ಚೆನ್ನವೀರ ಕಣವಿ, ಕೀರ್ತಿನಾಥ ಕುರ್ತಕೋಟಿ, ಗಿರೀಶ್‌ ಕಾರ್ನಾಡ್‌, ಎಂ.ಎಂ. ಕಲುºರ್ಗಿ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ ಹೀಗೆ ಮಹತ್ವದ ಚಿಂತಕರು ಮತ್ತು ಬರಹಗಾರರು ಧಾರವಾಡದ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದವರು. ಇವರೆಲ್ಲ ಕಿರಿಯ ಲೇಖಕರೊಂದಿಗೆ ಅತ್ಯಂತ ಪ್ರೀತಿಯ ಸಂಬಂಧವನ್ನು ಇಟ್ಟುಕೊಂಡು ಮುಂದಿನ ಪೀಳಿಗೆಯ ಜೀವಂತಿಕೆಗೆ ನೀರನ್ನೆರೆದರು. ಧಾರವಾಡದ ವಾತಾವರಣದಲ್ಲಿ “ನಲ್‌’ ಎಂಬ ಶಬ್ದಕ್ಕೆ ಇದ್ದ ಮಹತ್ವವನ್ನು ಅನೂಚಾನವಾಗಿ ಕಾಯ್ದುಕೊಂಡು ಬಂದವರು. 

ಇವರಲ್ಲಿ ಡಾ. ಗಿರಡ್ಡಿ ಗೋವಿಂದರಾಜ ಅವರು ಆರು ವರ್ಷಗಳ ಹಿಂದೆ ಆರಂಭಿಸಿದ “ಧಾರವಾಡ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ಕರ್ನಾಟಕದಾದ್ಯಂತ ತನ್ನ ಮಹತ್ವವನ್ನು ಪ್ರತಿಷ್ಠಾಪಿಸಿರುವುದನ್ನು ಪ್ರಮುಖವಾಗಿ ಗಮನಿಸಬೇಕು. ಗಿರಡ್ಡಿಯವರದು ಜೀವನನಿಷ್ಠವಾದ, ಸೈದ್ಧಾಂತಿಕತೆಯನ್ನು ಕುರಿತಂತೆ ಇತ್ಯಾತ್ಮಕವಾದ ನಿರ್ಲಿಪೆ¤ಯನ್ನು ತೋರುವ ವ್ಯಕ್ತಿತ್ವ. ಅವರು ಆಗಾಗ ಹೇಳುತ್ತಿದ್ದ ಒಂದು ಮಾತನ್ನು ಇಲ್ಲಿ ಹೇಳಲೇ ಬೇಕು: “”ನಮ್ಮ ಕಾಲ ಮುಗಿಯಿತು. ಇನ್ನು ಏನಿದ್ದರೂ ಕಿರಿಯ ತಲೆಮಾರಿನವರ ಕಾಲ. ಅವರು ಬೆಳೆಯುವುದನ್ನು ನೋಡಿ ಸಂತೋಷಪಡುವ ಕಾಲ. ಕಿರಿಯ ತಲೆಮಾರಿನವರು ಜೀವನವನ್ನು ಕುರಿತಂತೆ ಹೆಚ್ಚಿನ ಗಾಂಭೀರ್ಯದಿಂದ ಯೋಚಿಸಬೇಕು. ಅವರು ಘೋಷಣೆಗಳಿಗೆ ಮರುಳಾಗದೇ, ಜೀವನವನ್ನು ಒರೆಗೆ ಹಚ್ಚುತ್ತ ಯಾವುದು ನಿಜ ಎನ್ನುವುದನ್ನು ತಮ್ಮ ವೈಯಕ್ತಿಕತೆಯ ನೆಲೆಯಲ್ಲಿಯೇ ನಿರ್ಧರಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯಬೇಕು”

ಕಿರಿಯ ತಲೆಮಾರಿನವರನ್ನು ಒಂದೆಡೆಗೆ ತಂದು ಅವರಿಗೆ ಇಂದಿನ ಜೀವನದ ಸಂದರ್ಭದಲ್ಲಿ ಏರ್ಪಡುತ್ತಿರುವ ವಿವಿಧ ವಾಗ್ವಾದಗಳನ್ನು ಪರಿಚಯಿಸುವ ಅವಕಾಶ ಸೃಷ್ಟಿಸಬೇಕೆನ್ನುವುದಕ್ಕಾಗಿಯೇ ಗಿರಡ್ಡಿಯವರು “ಧಾರವಾಡ ಸಾಹಿತ್ಯ ಸಂಭ್ರಮ’ವನ್ನು ಸಂಘಟಿಸಿದರು. ಗಿರಡ್ಡಿಯವರ ನಿಷ್ಠುರ ಆಶಯದಂತೆ, ಧಾರವಾಡ ಸಾಹಿತ್ಯ ಸಂಭ್ರಮವು ಯಾವುದೇ ಪಂಥಗಳನ್ನು ಪೋಷಿಸುವ ದಂದುಗಕ್ಕೆ ಹೋಗಲಿಲ್ಲ. ಅದು ಒಂದು ನಿರ್ಲಿಪ್ತ-ನಿರಪೇಕ್ಷ ಸಂವಾದದ ವೇದಿಕೆಯಾಗಬೇಕೆನ್ನುವುದು ಅವರ ಸದಾಶಯವಾಗಿದ್ದಿತು. ಗಿರಡ್ಡಿಯವರು ಸಾಹಿತ್ಯ ಸಂಭ್ರಮದ ಮೂಲಕ ಧಾರವಾಡದ ವಾತಾವರಣದಲ್ಲಿ ಅಂತರ್ಗತವಾಗಿದ್ದ ಗೆಳೆತನದ ಚೈತನ್ಯವನ್ನು ಪುನರುಜ್ಜೀವನಗೊಳಿಸ ಬಯಸಿದ್ದರು. ಬೇಂದ್ರೆಯವರು ಗೆಳೆಯರ ಗುಂಪಿನ ಮೊದಲ ಅವತರಣಿಕೆಗೆ ಅಧ್ವರ್ಯುವಾಗಿದ್ದರೆ, ಗಿರಡ್ಡಿ ಗೋವಿಂದರಾಜ ಅವರು ಗೆಳೆಯರ ಗುಂಪಿನ ಎರಡನೆಯ ಅವತರಣಿಕೆಯ ಆಧಾರಸ್ತಂಭವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಗಿರಡ್ಡಿಯವರು “ನಾವು ಬರತೇವಿನ್ನ ನೆನಪಿರಲಿ ತಾಯಿ ನಂ ನಮಸ್ಕಾರ ನಿಮಗ, ಕಾಯ್ದಿರಿ ಕೂಸಿನ್ಹಾಂಗ ನಮಗ ನಾವು ಬರತೇವಿನ್ನ…’ ಎಂದು ಎದ್ದು ನಡೆದು ಇಲ್ಲವಾಗಿಬಿಟ್ಟರು! ಈಗ ಜಿ. ಎಸ್‌. ಆಮೂರ, ಚೆನ್ನವೀರ ಕಣವಿಯಂಥ ಹಿರಿಯರ ಮೇಲೆ ಹೆಚ್ಚು ಜವಾಬ್ದಾರಿ ಬಿದ್ದಿದೆ. ಸಂಪೂರ್ಣ ಸಾತ್ವಿಕ ವ್ಯಕ್ತಿತ್ವದ ಈ ಹಿರಿಯರು ಕಿರಿಯರನ್ನೆಲ್ಲ ಒಟ್ಟುಗೂಡಿಸಿ ಮುನ್ನಡೆಸಬೇಕಾಗಿದೆ.

ರಾಘವೇಂದ್ರ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next