ಒಂದು ಐತಿಹಾಸಿಕ ಸಾಲು ಇದೆ, ಖೈದಿಯು ನಮಗೆ ಕಂಬಿಯ ಹಿಂದೆ ಕಾಣುತ್ತಾನೆ., ಅಂತೆಯೇ ನಾವು ಅವರ ಕಣ್ಣಿನಲ್ಲಿ ಕಂಬಿಯ ಹಿಂದೆಯೇ ಕಾಣುವುದು. ಅಲ್ಲವೇ? ಈ ಮಾತು ಅಕ್ಷರಶಃ ಸತ್ಯವಾದುದ್ದು.
ಅಪರಾಧಿಗಳನೆಲ್ಲ ಕಂಬಿಯ ಹಿಂದೆ ಹಾಕುವುದಾದರೆ ಭೂಮಿಗೆ ಬೇಲಿ ಹಾಕಬೇಕು. ಇಂತಹ ಪರಿಸ್ಥಿತಿ ಇದೆ. ಇಲ್ಲಿ ಯಾವುದು ಸತ್ಯ, ಯಾವುದು ಸುಳ್ಳು, ಎಲ್ಲವೂ ಗೊಂದಲವೇ. ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಯಾರನ್ನು ಪ್ರಶ್ನಿಸುವುದು?.
ಸ್ನೇಹಿತರೇ ದೇಶ ಬದಲಾಗಬೇಕಾದರೆ ಮೊದಲು ನಮ್ಮ ಯೋಚನಾ ಲಹರಿ ಬದಲಾಗಬೇಕು. ಎಲ್ಲಿಯ ವರೆಗೂ ವಸ್ತು ಪೂಜೆ, ವ್ಯಕ್ತಿ ಪೂಜೆಗಳು ನೆಡೆಯುತ್ತವೆಯೋ ಅಲ್ಲಿಯವರೆಗೂ ಎಲ್ಲವೂ ಅಸ್ತವ್ಯಸ್ತವೇ ಆಗಿರುತ್ತದೆ. ನಮ್ಮ ದೇಶದ ಕಾನೂನು ಉಳಿದ 175 ದೇಶ, 7 ಖಂಡಗಳಲ್ಲಿ ಎಲ್ಲಿಯೂ ಇಲ್ಲದಂತಹ ಶ್ರೇಷ್ಠ ಕಾನೂನು, ಶ್ರೇಷ್ಠ ಸಂವಿಧಾನ, ಯಾವ ದೇಶದಲ್ಲೂ ಇಲ್ಲದಂಥ ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಸಂವಿಧಾನ ಕೊಟ್ಟಿದೆ. ಇದನ್ನು ದೇಶದ ನಾಡಿನ ಏಳಿಗೆಗಾಗಿ ಬಳಸಬೇಕೇ ವಿನಃ, ಯಾರೂ ಹಣವಂತನ ನೈತಿಕತೆ ಇಲ್ಲದವನ ಪರ ಮಾತನಾಡಿ, ನಮ್ಮ ನೈತಿಕತೆಗೂ, ನಮ್ಮ ಸಂವಿಧಾನಕ್ಕೂ ಮೋಸ ಮಾಡಬಾರದು.
ಮೊದಲೇ ಹೇಳಿದಂತೆ ಸ್ವಾಭಿಮಾನ ಉಕ್ಕುವ ಹಾಲಿನಂತೆ ಹೊರತು ತೂತು ಮಡಿಕೆ ಅಲ್ಲ ಎಂದು. ಸ್ವಾಭಿಮಾನ ಯಾರಪ್ಪನ ಸ್ವತ್ತು ಅಲ್ಲ, ಅದು ಸತ್ತರೆ ನಮ್ಮ ಅಸ್ತಿತ್ವಕ್ಕೆ ಬೆಲೆ ಇಲ್ಲ. ದೇಶದ ಕಾನೂನು, ನ್ಯಾಯ, ಕೇವಲ ಹಣವಂತರ ಹಿಂದೆ ಹೋಗುತ್ತಿರುವಾಗ ಕಂಬಿಯ ಹಿಂದಿನ ಬದುಕು ಕೇವಲ ಅಸಹಾಯಕರ ಅಮಾಯಕರ ಪಾಲೇ.!? ಸಿನೆಮಾ ಸಾಹಿತ್ಯದಂತೆ ನ್ಯಾಯದ ಮನೆಗೆ ಈಗ್ಲೂ ಎರೆಡೆರಡಂತೆ ಬಾಗಿಲು.! ಇದು ನಮ್ಮ ನೈಜ ಸ್ಥಿತಿಯ ಸಾಕ್ಷಿಯಾಗಿದೆ.
ಈ ಎರಡನೇ ಬಾಗಿಲು ಮುಚ್ಚುವ ವರೆಗೂ ಕಂಬಿಯ ಹಿಂದೆ ನಾವೋ? ನೀವೋ? ಎಂಬ ಗೊಂದಲದಿಂದ ಹೊರ ಬರುವುದಿಲ್ಲ. ನ್ಯಾಯ ನೀತಿ ಸತ್ಯದ ಕಡೆ ಇದ್ದವರಿಗೆ ಯಾಕೀ ಎರಡನೇ ಬಾಗಿಲು? ಯೋಚಿಸಿ ಅಂತಹ ಸಮಾಜಘತುಕರ ಹಿಂದೆ ಇದ್ದರೆ ನಮ್ಮ ನೈತಿಕಥೆ ನಮ್ಮನ್ನು ಪ್ರಶ್ನಿಸುವುದಿಲ್ಲವೇ? ಡಿ. ವಿ. ಗುಂಡಪ್ಪ ನವರು ಹೇಳುವಂತೆ, ಭಯ ಪಡುವವರು ಅಧರ್ಮದ ಹಿಂದೆ ಇರುತ್ತಾರೆ. ಧೈರ್ಯವಂತರು ದರ್ಮದ ಜತೆ ಇರುತ್ತಾರೆ ಎಂದು.
ನಿಮಗೆ ಗೊತ್ತೇ ಧೈರ್ಯವಂತನ ಕಟ್ಟಕಡೆಯ ಲಕ್ಷಣ ಸೌಜನ್ಯತೆ. ಸ್ನೇಹಿತರೇ ನೆನಪಿರಲಿ ನಮ್ಮೆಲರಲ್ಲಿ ಸಾತ್ವಿಕತೆ, ರಾಜಸಿಕತೆ ಮತ್ತು ತಾಮಸಿಕ ಲಕ್ಷಣಗಳು ಇರಬೇಕು. ಯಾವುದು ಎಲ್ಲಿ ಸೂಕ್ತವೋ ಅಲ್ಲೇ ಇರಬೇಕು. ನಮ್ಮ ನಡೆ ಧರ್ಮದ ಪರವೇ ಹೊರೆತು ಅಧರ್ಮದ ಕರಿನೆರಳಿನಲ್ಲಿ ಅಲ್ಲ. ಕಂಬಿಯ ಹಿಂದೆಯೂ ಎಷ್ಟೋ ಹೂ ಅರಳಿರುವ ಉದಾಹರಣೆಗಳು ಗೊತ್ತಿರಲಿ.
ಹಾಗೇ ಸಮಾಜದಲ್ಲಿ ಬಂಗಾರದ ಪಂಜರದಲ್ಲಿ ಅಳುತ್ತಿರುವ ಎಷ್ಟೋ ಮುಗ್ಧ ಮನಸ್ಸುಗಳು ಇವೆ. ಕಂಬಿಯ ಹಿಂದಿನ ಬದುಕು ದಾರಿದ್ರ್ಯವಲ್ಲ, ಅಸಹ್ಯವಲ್ಲ. ಕೆಲ ಸಣ್ಣ ತಪ್ಪಿನಿಂದ ಕೂಡ ಶಿಕ್ಷೆಗೊಳಗಾದ ಎಷ್ಟೋ ಬುದ್ದಿವಂತರು, ವಿದ್ಯಾರ್ಥಿಗಳು, ಅಮಾಯಕರು ತಮ್ಮ ಬದುಕನ್ನು ಅಲ್ಲಿಯೂ ಶೇಷ್ಠವಾಗೇ ಸೃಷ್ಟಿಸಿಕೊಂಡಿದ್ದಾರೆ.
ತಪ್ಪು ಮಾಡುವುದು ಸಹಜ ಅದನ್ನು ತಿದ್ದಿ ನೆಡೆಯುವುದೇ ಶೇಷ್ಠತೆಯ ಪರಮಾವಧಿ. ಇಂತಹ ಶ್ರೇಷ್ಠರನ್ನು ಕ್ಷಮಿಸಿ ಸಮಾಜದಲ್ಲಿ ನಡೆಸುವುದೇ ಪರಮ ಶ್ರೇಷ್ಠತೆ ಇಲ್ಲಿ ವ್ಯಕ್ತಿ ಶ್ರೇಷ್ಠ ಅಲ್ಲ ವ್ಯಕ್ತಿತ್ವ ಶ್ರೇಷ್ಠ. ಆಯ್ಕೆ ನಮ್ಮದು.
-ಮಂಜುನಾಥ್ ಕೆ. ಆರ್.
ದಾವಣಗೆರೆ