Advertisement

ದಾಳಿ ಮಾಡಿದವರು ಅಮಾಯಕರೇ?

10:55 PM Dec 24, 2019 | Lakshmi GovindaRaj |

ಬೆಂಗಳೂರು: ಮಂಗಳೂರು ಗಲಭೆ ಪ್ರಕರಣ ವ್ಯವಸ್ಥಿತ ಸಂಚು. ಪೊಲೀಸರ ಮೇಲೆ ದಾಳಿ ಮಾಡಿದವರು ಅಮಾಯಕರೇ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಗಲಭೆ ಸೃಷ್ಟಿಸಿದವರು ಎರಡು ರೀತಿಯಲ್ಲಿ ಇದ್ದಾರೆ. ಒಂದೆಡೆ ಕೇರಳದಿಂದ ಬಂದವರು ಹಾಗೂ ಮತ್ತೂಂದೆಡೆ ಕಾಲೇಜಿಗೆ ಪ್ರವೇಶಕ್ಕೆ ಬಂದವರು ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗಿದೆ ಎಂದರು
.
ಮಂಗಳೂರು ಗಲಭೆ ಪ್ರಕರಣ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸಲಾಗಿದೆ. ಉಡುಪಿ ಡೀಸಿ ನೇತೃತ್ವದಲ್ಲಿ ತನಿಖೆ ಆಗಲಿದೆ. ಗೋಲಿ ಬಾರ್‌ ಆಗಿರುವ ಬಗ್ಗೆ ಸಂಪೂರ್ಣ ತನಿಖೆ ನಡೆಯಲಿದೆ. ಯಾವ ಕಾರಣಕ್ಕೆ ಆಯಿತು ಎಂಬುದು ಗೊತ್ತಾಗಲಿದೆ. ಪೊಲೀಸರ ಮೇಲೆ ದಾಳಿ ಮಾಡಿದವರು ಅಮಾಯಕರೇ? ಎಂದರು. ಮಾಜಿ ಸಚಿವ ಯು.ಟಿ.ಖಾದರ್‌ ಮೇಲೆ ಪ್ರಕರಣ ದಾಖಲಾಗಿದೆ. ಯಾವ ಸೆಕ್ಷನ್‌ ಮೇಲೆ ಪ್ರಕರಣ ದಾಖಲಾಗಿದೆಯೋ ಅದರ ಮೇಲೆ ಕ್ರಮ ಆಗಲಿದೆ.

Advertisement

ಮಂಗಳೂರು ಪೊಲೀಸರು ಅದನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಗೃಹ ಸಚಿವರು ರಾಜೀನಾಮೆ ಕೊಡಬೇಕೆಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ನಮ್ಮ ಸಹೋದರ ಇದ್ದ ಹಾಗೆ. ಪ್ರೀತಿಯಿಂದ ಆ ರೀತಿ ಹೇಳಿದ್ದಾರೆ. ಹಿಂದೆಲ್ಲಾ ಈ ರೀತಿ ಆದಾಗ ಯಾರೆಲ್ಲಾ ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿದೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ನಮ್ಮ ಜತೆ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಜೆಡಿಎಸ್‌-ಕಾಂಗ್ರೆಸ್‌ ಅವಧಿಯಲ್ಲೂ ಗೋಲಿಬಾರ್‌ ಪ್ರಕರಣಗಳಾಗಿವೆ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ಅಮಾಯಕರು ಎಂದು ಹೇಳಿದ ತಕ್ಷಣ ಕ್ಲೀನ್‌ ಚಿಟ್‌ ಕೊಡಲು ಸಾಧ್ಯವಿಲ್ಲ. ಕಲ್ಲು ಹೊಡೆಯುವವರು, ಸಂಘಟಿತವಾಗಿ ಅಪರಾಧ ಕೃತ್ಯಮಾಡುವವರು ಆಮಾಯಕರು ಎಂದರೆ ಒಪ್ಪಿಕೊಳ್ಳಲಾಗದು ಎಂದರು.

ವಿದೇಶಿಗರ ಮಾಹಿತಿ ಸಂಗ್ರಹಕ್ಕೆ ಸೂಚನೆ
ಬೆಂಗಳೂರು: ರಾಜ್ಯದ ಎಲ್ಲಾ ಠಾಣೆ ವ್ಯಾಪ್ತಿಯ ಬಾಂಗ್ಲಾ ಸೇರಿ ವಿದೇಶಿ ಪ್ರಜೆಗಳ ಸಂಪೂರ್ಣ ಮಾಹಿತಿ ಕಲೆಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಸೌಧದಲ್ಲಿ ಮಾತನಾಡಿ, ಆಯಾ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ವಿದೇಶಿಯರು, ಅವರ ವೀಸಾ ಅವಧಿ, ಅವರ ಭೇಟಿ ಉದ್ದೇಶ ಮತ್ತಿತರ ಮಾಹಿತಿ ಪ್ರತಿ ಠಾಣೆಯಲ್ಲಿ ಇರಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಬಾಂಗ್ಲಾ, ಆಫ್ಘಾನಿಸ್ತಾನ ಅಷ್ಟೇ ಅಲ್ಲದೆ ನೇಪಾಳದವರೂ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮಾಹಿತಿ ಇದೆ. ಕಡಿಮೆ ವೇತನ ಹಾಗೂ ರಜೆ ಇಲ್ಲದೆ ಕೆಲಸ ಮಾಡಲು ಬರುತ್ತಾರೆ ಎಂಬ ಕಾರಣಕ್ಕೆ ರಾಜ್ಯದ ಕೆಲವು ಕೈಗಾರಿಕೆಗಳಲ್ಲಿ ಬಾಂಗ್ಲಾ ದೇಶಿಯರನ್ನು ಕರೆತರಲಾಗಿದೆ ಎಂಬ ದೂರು ಇವೆ. ಈ ಎಲ್ಲದರ ಬಗ್ಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದರು.

Advertisement

ರಾಜ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ವಿದೇಶಿಯರ ಕೈವಾಡ ಇರುವ ಬಗ್ಗೆಯೂ ಸಾಕಷ್ಟು ಮಾಹಿತಿಯಿದ್ದು, ಅಂತಹವರ ಮೇಲೆ ಹದ್ದಿನ ಕಣ್ಣಿಡಲು ತಿಳಿಸಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಪೌರತ್ವ ಕಾಯ್ದೆಯಡಿ ಅಗತ್ಯ ದಾಖಲೆ ನೀಡಲು ವಿಫ‌ಲರಾದವರಿಗೆ ಸಮಾಜ ಕಲ್ಯಾಣ ಇಲಾಖೆ ವಲಸಿಗರ ಶಿಬಿರ ಸ್ಥಾಪನೆ ಮಾಡಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಅದು ಸುಳ್ಳು. ಸಮಾಜ ಕಲ್ಯಾಣ ಇಲಾಖೆ ಸ್ಥಾಪಿಸಿರುವ ಆ ಕಟ್ಟಡದಲ್ಲಿ ವೀಸಾ ಅವಧಿ ಮುಗಿದ ನಂತರವೂ ಇಲ್ಲೇ ಇರುವವರನ್ನು ಪತ್ತೆ ಹಚ್ಚಿ ಅಲ್ಲಿ ಆಶ್ರಯ ನೀಡಿ ಅವರವರ ದೇಶಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next