ಟೋಕಿಯೊ: ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಆರ್ಚರ್ ದೀಪಿಕಾ ಕುಮಾರಿ ಆಘಾತಕಾರಿ ಸೋಲನುಭವಿಸಿದ್ದಾರೆ. ಕ್ವಾರ್ಟರ್ ಫೈನಲ್ ನಲ್ಲಿ ಕೊರಿಯಾದ ಆಟಗಾರ್ತಿಯ ವಿರುದ್ಧ ದೀಪಿಕಾ ಸೋಲನುಭವಿಸಿದ್ದಾರೆ. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ದೀಪಿಕಾ ಪಯಣ ಅಂತ್ಯವಾಗಿದೆ.
ಇಂದು ಬೆಳಗ್ಗೆ ನಡೆದ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಕ್ಸೆನಿಯಾ ಪೆರೋವಾ ವಿರುದ್ಧ ದೀಪಿಕಾ ಕುಮಾರಿ ಗೆಲುವು ಸಾಧಿಸಿದ್ದರು. ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ದೀಪಿಕಾಗೆ ಎದುರಾಗಿದ್ದ ಕಠಿಣ ಪ್ರತಿಸ್ಪರ್ಧಿ ಆ್ಯನ್ ಸಾನ್ ವಿರುದ್ಧ ಸೋಲಬೇಕಾಯಿತು. 6-0 ಸೆಟ್ ಗಳ ಅಂತರದಿಂದ ಕೊರಿಯಾದ ಸ್ಪರ್ಧಿ ಜಯ ಗಳಿಸಿದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲವ್ಲೀನಾ
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ದೀಪಿಕಾ, ರಿಯೋ ಒಲಿಂಪಿಕ್ಸ್ ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ್ದರು. ಆದರೆ ಈ ಬಾರಿ ಕ್ವಾರ್ಟರ್ ಫೈನಲ್ ವರೆಗೆ ತಲುಪಿದ್ದ ಭಾರತದ ಅಗ್ರ ಬಿಲ್ಲುಗಾರ್ತಿ ದೀಪಿಕಾ ಈ ಬಾರಿಯೂ ನಿರಾಸೆ ಅನುಭವಿಸಿದರು.
ಸದ್ಯ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತದ ಏಕೈಕ ಸ್ಪರ್ಧಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಉಳಿದುಕೊಂಡಿದ್ದಾರೆ. ಅವರೆಂದರೆ ದೀಪಿಕಾ ಪರಿ ಅತನು ದಾಸ್. ಅವರು ಪ್ರಿ ಕ್ವಾರ್ಟನ್ ಫೈನಲ್ ಹಂತ ತಲುಪಿದ್ದಾರೆ.