ಭುವನೇಶ್ವರ: ಒಡಿಶಾದ ಬಡತನದ ಕೇಂದ್ರ ಎಂದು ಬಿಂಬಿಸಲ್ಪಟ್ಟಿರುವ ಕಾಳಹಂಡಿ ಜಿಲ್ಲೆಯ 26 ವರ್ಷದ ಮಹಿಳೆ ಅರ್ಚನಾ ನಾಗ್ ಇವತ್ತು ಕೋಟ್ಯಧಿಪತಿ!
ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಆಕೆ ಕಳೆದ ವಾರವೇ ಬಂಧನಕ್ಕೊಳಗಾಗಿದ್ದಾಳೆ. ಈಗ ಆಕೆಯ ವಿರುದ್ಧ ವಸೂಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನೂ ವಿಶೇಷ ಗೊತ್ತಾ? ಒಡಿಶಾ ಚಿತ್ರನಿರ್ದೇಶಕರೊಬ್ಬರು ಆಕೆಯ ಬಗ್ಗೆ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ.
ಒಂದು ಕಾಲದಲ್ಲಿ ಬಡವಳಾಗಿದ್ದ ಅರ್ಚನಾ ಈಗ ಭವ್ಯ ಬಂಗಲೆಯನ್ನು ಹೊಂದಿದ್ದಾಳೆ. ಮನೆಯ ಆಂತರಿಕ ವಿನ್ಯಾಸಕ್ಕೆ ವಿದೇಶಗಳಿಂದ ತರಿಸಲಾದ ವಸ್ತುಗಳನ್ನೇ ಬಳಸಲಾಗಿದೆ. ಐಷಾರಾಮಿ ಕಾರುಗಳು, 4 ಹೈಬ್ರಿಡ್ ಶ್ವಾನಗಳು, ಒಂದು ಬಿಳಿ ಬಣ್ಣದ ಕುದುರೆ ಸೇರಿದಂತೆ ಎಲ್ಲ ವೈಭೋಗಗಳನ್ನೂ ಆಕೆ ಅನುಭವಿಸುತ್ತಿದ್ದಾಳೆ.
2015ರಲ್ಲಿ ಭುವನೇಶ್ವರಕ್ಕೆ ಬಂದು ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದ ಆಕೆ, ನಂತರ ಬ್ಯೂಟಿಪಾರ್ಲರ್ ತೆರೆದರು. 2018ರಲ್ಲಿ ಜಗಬಂಧು ಚಂದ್ ಎಂಬವರನ್ನು ಮದುವೆಯಾದಳು. ಬ್ಯೂಟಿ ಪಾರ್ಲರ್ ಜತೆಗೆ ವೇಶ್ಯಾವಾಟಿಕೆ ದಂಧೆಯನ್ನೂ ನಡೆಸುತ್ತಿದ್ದಳು. ಜಗಬಂಧುಗೆ ಹಳೆಯ ಕಾರುಗಳ ಶೋರೂಮ್ ಇತ್ತು. ಹೀಗಾಗಿ ಅವರಿಗೆ ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಪ್ರಭಾವಿಗಳ ಸಂಪರ್ಕವಿತ್ತು. ಇದೇ ಸಂಪರ್ಕವನ್ನು ಬಳಸಿಕೊಂಡ ಅರ್ಚನಾ, 18ಕ್ಕೂ ಹೆಚ್ಚು ಶಾಸಕರು, ಸಚಿವರು, ಶ್ರೀಮಂತರು, ಪ್ರಭಾವಿಗಳಿಗೆ ಹೆಣ್ಣುಮಕ್ಕಳನ್ನು ಪೂರೈಸುತ್ತಿದ್ದಳು. ಅವರು ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಚಿತ್ರಗಳು, ವಿಡಿಯೋ ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದಳು!
ಸಿನಿಮಾ ನಿರ್ಮಾಪಕರೊಬ್ಬರು ದೂರು ನೀಡಿ, ತನ್ನಿಂದ 3 ಕೋಟಿ ರೂ. ಕೇಳುತ್ತಿದ್ದಾರೆ ಅರ್ಚನಾ ಎಂದು ಆರೋಪಿಸಿದ್ದರು. ಹೀಗಾಗಿ, ಪ್ರಕರಣ ಬೆಳಕಿಗೆ ಬಂದು ಅ.6ರಂದು ಅರ್ಚನಾಳನ್ನು ಬಂಧಿಸಲಾಗಿದೆ.