Advertisement

ಶೈಕ್ಷಣಿಕ ನಗರಿಯಲ್ಲಿ ಸದ್ದುಮಾಡುತ್ತಿದೆ ಅರ್ಬಿ ಜಲಪಾತ!

11:50 AM Jul 13, 2018 | Sharanya Alva |

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹಲವಾರು ರೀತಿಯ ಜಲಪಾತಗಳು ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತವೆ. ಅಂತೆಯೇ ಕರಾವಳಿಯಲ್ಲಿಯೂ ಪುಟ್ಟ ತೊರೆಗಳು ಮೋಹಕ ಜಲಪಾತಗಳಾಗಿ ಜೀವ ತಳೆಯುವುದು ಸರ್ವೇ ಸಾಮಾನ್ಯ ಅಂತಹದೇ ಒಂದು ಜಲಪಾತ ಶೈಕ್ಷಣಿಕ ನಗರಿ ಎಂದೇ ಹೆಸರುವಾಸಿಯಾಗಿರುವ ಮಣಿಪಾಲದ ಹೊರಭಾಗದಲ್ಲಿ ಸದ್ದು ಮಾಡುತ್ತಿದೆ..ಅದುವೇ ಅರ್ಬಿ ಜಲಪಾತ .

Advertisement

ದಟ್ಟ ಕಾನನದ ನಡುವೆ ಇಳಿಜಾರಿನಲ್ಲಿ ಮೈದುಂಬಿ ಹರಿಯುತ್ತಿದೆ ಅರ್ಬಿ ಜಲಪಾತ.ಈ ಜಲಪಾತವನ್ನು ನೋಡುವುದೇ ಕಣ್ಣುಗಳಿಗೆ ಸೊಗಸು ಅದರಲ್ಲೂ ತಳುಕುತ್ತಾ ಬಳುಕುತ್ತಾ ಕಲ್ಲಿನಿಂದ ಕಲ್ಲಿಗೆ ಹಂತ ಹಂತವಾಗಿ ಹರಿಯುವಾಗ ಕ್ಷೀರಧಾರೆಯೇ ಹರಿದುಬಂದಂತಹ ಅನುಭವ.

ಹಲವಾರು ಕವಲುಗಳಾಗಿ ಶುಭ್ರ ನೀರಿನಿಂದ ಹರಿಯುವ ಅರ್ಬಿ ಜಲಪಾತವನ್ನು ನೋಡಲು ಕಾಲೇಜು ವಿದ್ಯಾರ್ಥಿಗಳ ದಂಡೇ ಹರಿದುಬರುತ್ತಿವೆ, ರಜಾದಿನಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಜಲಪಾತದ ಪಕ್ಕದಲ್ಲೇ ವೈಷ್ಣವಿದುರ್ಗಾ ದೇವಸ್ಥಾನ ಇದ್ದು ಇಲ್ಲಿಗೆ ಬರುವ ಭಕ್ತರು ದೇವರ ದರುಶನ ಪಡೆದು ಈ ಜಲಪಾತದ ಸೊಬಗನ್ನು ಸವಿಯುತ್ತಾರೆ.

ಇಲ್ಲಿಗೆ ಭೇಟಿ ನೀಡಿದ ನಿಸರ್ಗ ಪ್ರಿಯರು ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಅರ್ಬಿ ಜಲಪಾತಕ್ಕೆ ಬಂದವರು ಜಲಪಾತದಲ್ಲಿ ನೀರಾಟ ಆಡಿ, ನೀರಲ್ಲಿ ಮಿಂದೆದ್ದು ನಾನಾ ಭಂಗಿಗಳಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ.   ಸದಾ ಕೆಲಸದ ಜಂಜಾಟದಿಂದ ಕೂಡಿರುವ ಮಣಿಪಾಲದ ಜನತೆಗೆ ನಿಸರ್ಗದ ನಡುವಿರುವ ಜಲಧಾರೆ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. 

ಇಲ್ಲಿಗೆ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು, ಕಿರಿಯರು ಕುಟುಂಬ ಸಮೇತರಾಗಿ ಬಂದು ಜಲಧಾರೆಯ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಅರ್ಬಿ ಜಲಪಾತವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಮೈದುಂಬಿ ಹರಿಯುತ್ತದೆ. ಸಣ್ಣ ಸಣ್ಣ ತೊರೆಗಳಿಂದ ಸೃಷ್ಟಿಯಾಗಿರುವ ಜಲಪಾತವು ಅಪಾಯಕಾರಿಯಾಗಿಲ್ಲವಾದರೂ ಜಾರುವ ಕಲ್ಲುಗಳ ಮೇಲೆ ನಡೆದಾಡುವಾಗ ಜಾಗ್ರತೆ ವಹಿಸುವುದು ಒಳಿತು.

Advertisement

ಅಂದ ಹಾಗೆ ಅರ್ಬಿ ಜಲಪಾತ ಇರುವುದು ಉಡುಪಿ ಜಿಲ್ಲೆಯ 80ನೇ ಬಡಗಬೆಟ್ಟು ಗ್ರಾಮದ ಅರ್ಬಿ ಕೊಡಿ ಎಂಬಲ್ಲಿ, ಮಣಿಪಾಲದಿಂದ ಅಲೆವೂರು ಮಾರ್ಗವಾಗಿ 3 ಕಿಲೋಮೀಟರ್ ಸಾಗಿದರೆ ದಶರಥ ಎಂಬ ಊರು ಸಿಗುತ್ತದೆ ಅಲ್ಲಿಂದ ಪೂರ್ವಾಭಿಮುಖವಾಗಿ ವೈಷ್ಣವಿ ದುರ್ಗಾ ದೇವಸ್ಥಾನದ ಮಾರ್ಗವಾಗಿ 1 ಕಿಲೋಮೀಟರ್ ಸಾಗಿದರೆ ದೇವಸ್ಥಾನದ ಪಕ್ಕದಲ್ಲೇ ಅರ್ಬಿಜಲಪಾತ ನಮ್ಮನ್ನು ಕೈಬೀಸಿ ಕರೆಯುತ್ತದೆ.  

ಸದಾಕಾಲ ಈ ಜಲಪಾತದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಾ ಕಲ್ಲುಬಂಡೆಗಳ ಮೇಲೆ ನಿಂತು ಫೋಟೋ ತೆಗೆಸಿಕೊಂಡು ಜಲಪಾತದ ಸೌಂದರ್ಯವನ್ನು ಸವಿಯುತ್ತಾರೆ. ಜಲಪಾತ ಅಪಾಯಕಾರಿಯಲ್ಲದ ಪರಿಣಾಮ ಮಕ್ಕಳು ನೀರಿನಲ್ಲಿ ಸ್ವಚ್ಛಂದವಾಗಿ ಆಟವಾಡುತ್ತಾರೆ.

ಅಂದಹಾಗೆ ನೀವು ಇಲ್ಲಿಗೆ ಭೇಟಿ ನೀಡಿಲ್ಲವಾದರೆ ಮಳೆಗಾಲ ಮುಗಿಯುವುದರೊಳಗೆ ಒಮ್ಮೆ ಭೇಟಿ ಕೊಡಿ, ಒಟ್ಟಿನಲ್ಲಿ ಅರ್ಬಿ ಫಾಲ್ಸ್ ನಿಸರ್ಗ ಪ್ರಿಯರಿಗೆ ಹೇಳಿಮಾಡಿಸಿದಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ… 

Advertisement

Udayavani is now on Telegram. Click here to join our channel and stay updated with the latest news.

Next