Advertisement

ನಾಡಿನ ಮಹಾಪುರಷರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಬೇಕು: ಅರವಿಂದ ಲಿಂಬಾವಳಿ

08:56 PM Feb 20, 2021 | Team Udayavani |

ಬೆಂಗಳೂರು: ಜಗಜ್ಯೋತಿ ಬಸವಣ್ಣ, ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸೇರಿದಂತೆ ನಾಡಿನ ಮಹಾಪುರುಷರ ಚರಿತ್ರೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಮುಂದಾಗಬೇಕು ಎಂದು ವಿದೇಶಿ ಕನ್ನಡಿಗರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಕರೆ ನೀಡಿದ್ದಾರೆ.
“ಲ್ಯಾಂಬತ್‌ ಬಸವೇಶ್ವರ ಫೌಂಡೇಷನ್‌’ ಸೇರಿದಂತೆ ವಿವಿಧ ವಿದೇಶಿ ಕನ್ನಡ ಸಂಘಟನೆಗಳು ಹಮ್ಮಿಕೊಂಡಿದ್ದ ಬಸವಣ್ಣ ಹಾಗೂ ಅಂಬೇಡ್ಕರ್‌ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಝೂಪ್‌ ಆ್ಯಪ್‌ ಮೂಲಕ ವಿದೇಶಿ ಕನ್ನಡಿಗರನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

Advertisement

ಪ್ರಪಂಚದ ವಿವಿಧ ದೇಶಗಳಲ್ಲಿ ಕನ್ನಡಿಗರು ಸಾಫ್ಟ್ವೇರ್‌ ಇಂಜಿನಿಯರ್‌ಗಳಗಾಗಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರಿಂದ ನಾನು ಬಯಸುವ ಸಹಾಯವೇನೆಂದರೆ, ಇತ್ತಿಚಿನ ಕಾಲಮಾನದಲ್ಲಿ ಪುಸ್ತಕಗಳನ್ನು ಓದುವ ಮತ್ತು ಬರೆಯುವ ಹವ್ಯಾಸ ಕಡಿಮೆ ಆಗಿದೆ. ಅದಕ್ಕೆ ಬದಲಾಗಿ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಹೀಗಾಗಿ, ಸಾಫ್ಟ್ವೇರ್‌ ಕ್ಷೇತ್ರದಲ್ಲಿರುವ ನಿವುಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿ ಸೇರಿದಂತೆ ನಮ್ಮ ಮಹಾಪುರುಷರ ಚರಿತ್ರೆ, ಕವಿಗಳ ಹಾಡುಗಳನ್ನು ಚಿತ್ರೀಕರಿಸಿ ಪ್ರಪಂಚಕ್ಕೆ ಪರಿಚಯಿಸಿದರೆ ಅದು ನಿಮ್ಮ ಬಹಳ ದೊಡ್ಡ ಕೊಡುಗೆಯಾಗಲಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಲಿಂಬಾವಳಿ ಭರವಸೆ ನೀಡಿದರು.

ಇದನ್ನೂ ಓದಿ:ಕಬ್ಬು ನಾಟಿ ಮಾಡಿ, ಗದ್ದೆಗೆ ಗೊಬ್ಬರ ಹಾಕಿದ ಕೃಷಿ ಸಚಿವ ಬಿ.ಸಿ ಪಾಟೀಲ್

ಅಮೆರಿಕ, ಇಂಗ್ಲೆಂಡ್‌, ದುಬೈ ಸೇರಿದಂತೆ ಪ್ರಪಂಚದ ನಾನಾ ದೇಶಗಳಲ್ಲಿ ದಶಕಗಳಿಂದ ನೆಲಸಿ ಕನ್ನಡದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅಲ್ಲಿನ ಕನ್ನಡ ಸಂಘಟನೆಗಳ ಕಾರ್ಯ ಅತ್ಯಂತ ಶ್ಲಾಘನೀಯ. ವಿದೇಶದಲ್ಲಿರುವ ಕನ್ನಡಿಗರು ಪರಸ್ಪರ ಒಗ್ಗಟ್ಟಿನಿಂದ ಇರಬೇಕು. ಕರ್ನಾಟಕದಲ್ಲಿರುವ ಕನ್ನಡಿಗರು, ವಿದೇಶಿ ಕನ್ನಡಿಗರ ಬಗ್ಗೆ “ಇವ ನಮ್ಮವ’ ಎಂಬ ಬಸವಣ್ಣನವರ ವಚನದಂತೆ ನಡೆದುಕೊಳ್ಳಬೇಕು. ವಿದೇಶದಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಯಾವೆಲ್ಲ ಸಮಸ್ಯೆಗಳಿಗೆ ರಾಜ್ಯ ಸರ್ಕಾರದಿಂದ ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ಆಲೋಚಿಸಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಲ್ಯಾಂಬತ್‌ ಬಸವೇಶ್ವರ ಫೌಂಡೇಷನ್‌ ಸಂಸ್ಥಾಪಕ ಡಾ. ನೀರಜ್‌ ಪಾಟೀಲ್‌, ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳ ಕನ್ನಡ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next