ಖಾನಾಪುರ: ಡಿಸಿಎಂ ಲಕ್ಮಣ ಸವದಿ ಮಾಜಿ ಶಾಸಕ, ಎಂಇಎಸ್‌ನ ಅರವಿಂದ ಪಾಟೀಲರನ್ನು ಬಿಜೆಪಿಗೆ ಕರೆತರುವ ಮಾತನಾಡುತ್ತಿದ್ದರೆ ಅಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ ನಂದಗಡ ಎಪಿಎಂಸಿಯ ಬಿಜೆಪಿ ಅಧ್ಯಕ್ಷರನ್ನು ಕುರ್ಚಿಯಿಂದ ಕೆಳಗಿಳಿಸಿ ಎಂಇಎಸ್‌ಗೆ ಗದ್ದುಗೆಯ ದಾರಿ ಸುಗಮಗೊಳಿಸಿದ್ದಾರೆ.
ನಂದಗಡ ಎಪಿಎಂಸಿ ಅಧ್ಯಕ್ಷ, ಬಿಜೆಪಿಯ ಹಣಮಂತ ಪಾಟೀಲ ವಿರುದ್ಧ ಶುಕ್ರವಾರ ಎಪಿಎಂಸಿ ಸಭಾಂಗಣದಲ್ಲಿ ನಡೆದ ಅವಿಶ್ವಾಸ ಗೊತ್ತುವಳಿ ಯಶಸ್ವಿಯಾಯಿತು. ಮಾಜಿ ಶಾಸಕ ಅರವಿಂದ ಪಾಟೀಲ ನೇತೃತ್ವದಲ್ಲಿ 12 ಸದಸ್ಯರಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 10 ಜನ ಸದಸ್ಯರು ಮತ ಚಲಾಯಿಸಿದರು. ಹಣಮಂತ ಪಾಟೀಲ ಒಳಗೊಂಡಂತೆ ಬಿಜೆಪಿ ಇನ್ನೊರ್ವ ಸದಸ್ಯ ಮಾತ್ರ ಗೊತ್ತುವಳಿ ವಿರೋಧಿಸಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಅವಿಶ್ವಾಸ ಗೊತ್ತುವಳಿ ಮಂಡಿಸುವಲ್ಲಿ ಉತ್ಸಾಹ ತೋರಿದ್ದರಿಂದ ಮತ್ತೆ ಎಂಇಎಸ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಜ್ಜಾದಂತಾಗಿದೆ. ಬಿಜೆಪಿಗೆ ಸೇರಿದ ಮೂವರು ಸದಸ್ಯರಲ್ಲಿ ಸುಭಾಷ ಪಾಟೀಲ ಅವಿಶ್ವಾಸ ಮಂಡನೆಗೆ ಪ್ರಮುಖವಾಗಿ ಒತ್ತಾಯಿಸಿದ್ದರು.
ಮಾಜಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಪಕ್ಷದ ಸದಸ್ಯರೊಬ್ಬರನ್ನು ಒಡೆದು ಬಿಜೆಪಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ತಂತ್ರ ರೂಪಿಸಿದ್ದರು. ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ್, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಗುಂಡು ತೋಪಿನಕಟ್ಟಿ, ಪ್ರಕಾಶ ನಿಲಜಕರ, ತಾಪಂ ಸದಸ್ಯ ಶ್ರೀಕಾಂತ ಇಟಗಿ, ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ, ಆನಂದ ಪಾಟೀಲ ಮುಂತಾದವರು ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ. ಅವಿಶ್ವಾಸ ಮಂಡನೆಗೆ ಮೊದಲು ಬಿಜೆಪಿ ಸದಸ್ಯ ಸುಭಾಷ ಪಾಟೀಲರನ್ನು ಹೊರಗೆ ಕರೆ ತರಲು ಬಿಜೆಪಿ ಮುಖಂಡರು ಪ್ರಯತ್ನಿಸಿದಾಗ ಮಾಜಿ ಶಾಸಕ ಅರವಿಂದ ಪಾಟೀಲ ಇದಕ್ಕೆ ಅಡ್ಡಿಪಡಿಸಿದರು.
ಇದನ್ನೂ ಓದಿ :ಪಂಚಮಸಾಲಿ ಸಮಾಜ 2ಎ ಸೇರ್ಪಡೆಗೆ ಆಗ್ರಹಿಸಿ ಮನವಿ
ನೀವು ಹೊರಗೆ ತೆರಳಿ ಎಂದು ಮಾಜಿ ಶಾಸಕರು ಹೇಳಿದ್ದು, ಬಿಜೆಪಿ ನಾಯಕರನ್ನು ಕೆರಳಿಸಿತು. ಬಿಜೆಪಿ ಮುಖಂಡರು ಮತ್ತು ಮಾಜಿ ಶಾಸಕರ ಮಧ್ಯೆ ಮಾತಿನ ಘರ್ಷಣೆ ಕೂಡ ನಡೆಯಿತು. ಆದರೆ ಸುಭಾಷ ಪಾಟೀಲ ಮಾತ್ರ ಸಭಾಂಗಣದಿಂದ ಹೊರಗೆ ಬರಲಿಲ್ಲ. ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣಮಂತ ಪಾಟೀಲ ತಮಗೆ ಮತ ಹಾಕಬೇಕು ಎಂದು ಮಾಜಿ ಶಾಸಕ ಅರವಿಂದ ಪಾಟೀಲ ಎಂಇಎಸ್‌ಗೆ ಸಂಖ್ಯಾಬಲವಿದ್ದರೂ ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದರು. ಆದರೆ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಣಮಂತ ಪಾಟೀಲ ತಮ್ಮ ಪರವಾಗಿ ನಿಲ್ಲಲಿಲ್ಲ ಎಂದು ಈಗ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.