Advertisement
ಆರತಿ ಪೈ ಅವರು ಗಣೇಶ ಸ್ತುತಿಯೊಂದಿಗೆ ದಾಸ ಸಂಕೀರ್ತನಾ ಕಾರ್ಯಕ್ರಮ ಆರಂಭಿಸಿದರು. ಕನಕದಾಸರ ಕೀರ್ತನೆ “ನಮ್ಮಮ್ಮ ಶಾರದೆ, ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ…’ ಇಂಪಾಗಿ ಮೂಡಿಬಂತು. ಆ ಬಳಿಕ ಪುರಂದರ ದಾಸರ ರಚನೆ “ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ…’ ಹಾಡು ತಲೆದೂಗುವಂತೆ ಮಾಡಿಸಿತು. ಅದೇ ರೀತಿ ವಾದಿರಾಜರು ರಚಿಸಿದ “ವೇಣುನಾದ ಪ್ರಿಯ ಗೋಪಾಲಕೃಷ್ಣ, ವೇಣುನಾದ ವಿನೋದ ಮುಕುಂದಾ…’ ಹಾಗೂ “ಬಾರೋ ಬೇಗ ಬಾರೋ ನೀಲ ಮೇಘವರ್ಣ, ಬಾರೋ ಬೇಗ ವೇಲಾಪುರದ ಚೆನ್ನ…’ ಕೀರ್ತನೆ ಮಧುರವಾಗಿತ್ತು.
ಸಹಗಾಯಕಿ ಸವಿತಾ ಶೆಣೈ ಅವರು ರೇಗುಪ್ತಿ ರಾಗದಲ್ಲಿ ಹಾಡಿದ ಪುರಂದರ ದಾಸರ ರಚನೆಯಾದ “ಸ್ಮರಣೆ ಒಂದೇ ಸಾಲದೇ ಗೋವಿಂದನಾ ನಾಮ ಒಂದೇ ಸಾಲದೇ…’ ಹಾಡು ಮತ್ತೂಮ್ಮೆ ಕೇಳಬೇಕೆನ್ನುವ ಭಾವ ಮೂಡಿಸಿತು. ಹಾರ್ಮೊನಿಯಂನಲ್ಲಿ ಸವಿತಾ ಶೆಣೈ, ತಬಲದಲ್ಲಿ ಸತೀಶ್ ಶೆಣೈ ಸಹಕರಿಸಿದರು. – ತಾರಾನಾಥ್ ಮೇಸ್ತ ಶಿರೂರು