Advertisement

ಮತ್ತೆ ಕಾಡಾನೆ ಕಾಟ: ನಿದ್ದೆಗೆಟ್ಟ ಕೃಷಿಕರು

10:23 AM Oct 17, 2018 | |

ಬೆಳ್ತಂಗಡಿ: ತಾಲೂಕಿನ ಅರಸಿನ ಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಹತ್ಯಡ್ಕ ಗ್ರಾಮ ವ್ಯಾಪ್ತಿಯ ಕೃಷಿಕರಿಗೆ ಮತ್ತೆ ಕಾಡಾನೆ ಕಾಟ ಆರಂಭಗೊಂಡಿದ್ದು, ಗ್ರಾ.ಪಂ. ವತಿಯಿಂದ ಅಳವಡಿಸಿದ್ದ ಸೋಲಾರ್‌ ದೀಪಗಳ ಬ್ಯಾಟರಿ ಕದ್ದಿರುವುದೇ ಈ ತೊಂದರೆಗೆ ಪ್ರಮುಖ ಕಾರಣ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ. ಕೊಂಚ ನಿಟ್ಟುಸಿರು ಬಿಟ್ಟಿದ್ದ ಕೃಷಿಕರು ಮತ್ತೆ ಕಾಡಾನೆಗಳ ಕಾಟದಿಂದ ನಿದ್ದೆಗೆಟ್ಟಿದ್ದಾರೆ. ಕಿಡಿಗೇಡಿಗಳ ಸಣ್ಣ ಕೃತ್ಯವೊಂದು ಕೃಷಿಕರಿಗೆ ಕಂಟಕವಾಗಿ ಪರಿಣಮಿಸಿದೆ. ಸಂಜೆ 6.30ರ ವೇಳೆಗೆ ಆನೆಗಳ ಕಾಟ ಆರಂಭಗೊಂಡರೆ, ರಾತ್ರಿ 1 ಗಂಟೆಯವರೆಗೂ ತೋಟದಲ್ಲೇ ಇರುತ್ತವೆ. ಬಳಿಕ ಗರ್ನಲ್‌ ಸ್ಫೋಟಿಸಿ ಆನೆಗಳನ್ನು ಹೆದರಿಸಿ ಓಡಿಸಬೇಕಾದ ಸ್ಥಿತಿ ಇದೆ.

Advertisement

ಅ. 13ರಂದು ಬಂದಿದ್ದವು
ಹತ್ಯಡ್ಕದ ಅನ್ನಪೂರ್ಣಾ ಫಾರ್ಮ್ಸ್ ಗೆ ಅ. 13ರಂದು ಆನೆಗಳು ಬಂದು ಹೋಗಿವೆ. 3 ವಾರಗಳಿಂದ ಈ ತೊಂದರೆ ಇದ್ದು, ಬಾಳೆ, ತೆಂಗು ತೋಟವನ್ನು ಹಾನಿ ಮಾಡುತ್ತಿವೆ. ಆನೆಗಳು ಒಮ್ಮೆ ನುಗ್ಗಿದರೆ ತೋಟದ ಚಿತ್ರಣವೇ ಬದಲಾಗುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಬೇಲಿಗಳನ್ನೂ ನಾಶಪಡಿಸುತ್ತವೆ ಎಂದು ಕೃಷಿಕರು ಆರೋಪಿಸುತ್ತಿದ್ದಾರೆ.

ಕ್ರಮಕ್ಕೆ ಆಗ್ರಹ
ಹತ್ಯಡ್ಕ ಮೀಸಲು ಅರಣ್ಯ ಪ್ರದೇಶದ ಕೊಕ್ಕಡ-ಶಿಶಿಲ ರಸ್ತೆ ಬದಿಯ ಕೃಷಿಕರಿಗೆ ಕಾಡಾನೆಗಳು ತೊಂದರೆ ನೀಡುತ್ತಿವೆ. ಹೀಗಾಗಿ ಸೋಲಾರ್‌ ದೀಪಗಳ ದುರಸ್ತಿಗೆ ಸಂಬಂಧಪಟ್ಟವರು ಕ್ರಮ ಕೈಗೊಂಡು ಕಿಡಿಗೇಡಿಗಳ ವಿರುದ್ಧವೂ ಕ್ರಮ ಜರಗಿಸಬೇಕಿದೆ ಎಂದು ಕೃಷಿಕರು ಆಗ್ರಹಿಸಿದ್ದಾರೆ.

12 ದೀಪಗಳ ಅಳವಡಿಕೆ
ಅರಸಿನಮಕ್ಕಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2016-17ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಆನೆಗಳ ಕಾಟ ತಪ್ಪಿಸುವ ನಿಟ್ಟಿನಲ್ಲಿ 12 ಸೋಲಾರ್‌ ದೀಪಗಳನ್ನು ಅಳವಡಿಸಲಾಗಿತ್ತು. ಒಂದು ದೀಪಕ್ಕೆ ಒಟ್ಟು 24 ಸಾವಿರ ರೂ.ವೆಚ್ಚವಾಗಿತ್ತು. ಈ ದೀಪಗಳು ಸಂಜೆಯಾಗುತ್ತಿದ್ದಂತೆ ಉರಿಯುತ್ತಿದ್ದು, ಬೆಳಗ್ಗೆ ಆರುತ್ತಿದ್ದವು. ಕಾಡಾನೆಗಳು ಆಗಮಿಸುವ ಪ್ರದೇಶದಲ್ಲಿ ಈ ದೀಪಗಳನ್ನು ಅಳವಡಿಸಲಾಗಿದ್ದು, ದೀಪದ ಪ್ರಕಾಶಕ್ಕೆ ಆನೆಗಳು ಆಗಮಿಸುತ್ತಿರಲಿಲ್ಲ. ಇನ್ನೂ ಒಂದೆರಡು ದೀಪಗಳನ್ನು ಅಳವಡಿಸುತ್ತಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಆದರೂ ದೀಪಗಳ ಅಳವಡಿಕೆ ಬಳಿಕ ಆನೆಗಳ ಕಾಟ ಇರಲಿಲ್ಲ. ಆದರೆ ಈಗ ಕೆಲವೊಂದು ದೀಪಗಳು ಉರಿಯದೆ ಆನೆಗಳ ಕಾಟ ಮತ್ತೆ ಆರಂಭಗೊಂಡಿದೆ.

ದೂರು ನೀಡಲಾಗಿದೆ
ಒಟ್ಟು 12 ಸೋಲಾರ್‌ ದೀಪಗಳಲ್ಲಿ ಒಂದು ದೀಪದ ಬ್ಯಾಟರಿ ಕದ್ದಿರುವುದು ನಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಂಡು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದೇವೆ. ಸೋಲಾರ್‌ ದೀಪ ಅಳವಡಿಕೆಯಿಂದ ದೊಡ್ಡ ಪರಿಣಾಮ ಬೀರಿಲ್ಲ. ಆನೆಗಳ ಕಾಟ ನಿರಂತರವಾಗಿದೆ.
ಕೆ. ವೆಂಕಪ್ಪ ಗೌಡ ಪಿಡಿಒ, 
  ಅರಸಿನಮಕ್ಕಿ ಗ್ರಾ.ಪಂ.

Advertisement

3 ವಾರಗಳಿಂದ ಉಪಟಳ
ಕಳೆದೆರಡು ವರ್ಷಗಳ ಹಿಂದೆ ಸೋಲಾರ್‌ ದೀಪ ಅಳವಡಿಸಿದ ಬಳಿಕ ಆನೆಗಳ ಕಾಟವಿರಲಿಲ್ಲ. ಆದರೆ ಕಳೆದ ಮೂರು ವಾರಗಳಿಂದ ನಿರಂತರವಾಗಿ ಕಾಟ ನೀಡುತ್ತಿದ್ದು, ತೋಟವನ್ನು ಸಂಪೂರ್ಣ ನಾಶ ಮಾಡಿವೆ. ಕೆಲವೊಂದು ಸೋಲಾರ್‌ ದೀಪಗಳು ಉರಿಯದೆ ಈ ತೊಂದರೆ ಆರಂಭಗೊಂಡಿದೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಲಿ ಎಂಬುದು ನಮ್ಮ ಆಗ್ರಹ.  
 – ಶ್ರೀಧರ್‌, ಸುಬ್ರಹ್ಮಣ್ಯ,
  ಕೃಷಿಕರು, ಹತ್ಯಡ್ಕ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next