Advertisement

ಅರಸಿನ ಕುಂಕುಮ ಸೌಭಾಗ್ಯದ ಸಂಕೇತ: ಕಲ್ಯಾಣಿ ಪುತ್ರನ್‌

06:26 PM Mar 20, 2020 | Suhan S |

ಮುಂಬಯಿ, ಮಾ. 19: ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಸಿನಕ್ಕೆ ಪವಿತ್ರ ಸ್ಥಾನವಿದ್ದು, ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಂದರ್ಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಂಡು ಪೂಜ್ಯನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಮಹಿಳೆಯರು ತಮ್ಮ ಕೆನ್ನೆಗೆ ಅರಸಿನವನ್ನು ಮತ್ತು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ. ಇದಿಷ್ಟೇ ಅಲ್ಲದೆ ಕುಂಕುಮ ಮತ್ತು ಅರಸಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಮಹಿಳೆಯರ ಸೌಭಾಗ್ಯದ ಸಂಕೇತವಾಗಿದೆ. ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲೂ ಕೂಡಾ ಅರಸಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸ್ಥಳೀಯ ಸಮಾಜ ಸೇವಕಿ ಕಲ್ಯಾಣಿ ಪುತ್ರನ್‌ ಅವರು ನುಡಿದರು.

Advertisement

ಭಾಯಂದರ್‌ ಪಶ್ಚಿಮದ ಶ್ರೀ ಭದ್ರಕಾಳಿ ಮಂದಿರದಲ್ಲಿ ಜಗನ್ನಾಥ ಪುತ್ರನ್‌ ಅವರ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಡೆದ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮನೆ ಮದ್ದಾಗಿ ಎಲ್ಲರ ಮನೆಯಲ್ಲೂ ಸ್ಥಾನವನ್ನು ಪಡೆದುಕೊಂಡಿರುವ ಅರಸಿನ ಒಂದು ರೀತಿಯಲ್ಲಿ ಸಂಜೀವಿನಿಯಾಗಿದೆ. ಅನಾದಿ ಕಾಲದಿಂದಲೂ ವಿವಾಹಿತ ಮಹಿಳೆಯರು ಕುಂಕುಮವನ್ನು ಸಿಂಧೂರ ಮತ್ತು ತಿಲಕದಂತೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಪತಿಯ ದೀರ್ಘಾಯುಷ್ಯದ ಸಂಕೇತವಾಗಿ ಇವರು ಕುಂಕುಮದಿಂದ ಬೈತಲೆಯ ನಡುವೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಾರೆ. ಆದ್ದರಿಂದ ಕುಂಕುಮವು ಮಹಿಳೆಯ ಶಕ್ತಿಯ ಸಂಕೇತವಾಗಿದೆ ಎಂದು ನುಡಿದು ಉಪಸ್ಥಿತರಿದ್ದ ಮಹಿಳೆಯರಿಗೆ ಶುಭಹಾರೈಸಿದರು.

ಪ್ರಾರಂಭದಲ್ಲಿ ಶ್ರೀ ಭದ್ರಕಾಳಿ ಭಜನಾ ಮಂಡಳಿ ಮತ್ತು ಸ್ಥಳೀಯ ಭಜನಾ ಮಂಡಳಿಗಳ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು. ಮಂದಿರದ ಪ್ರಧಾನ ಅರ್ಚಕ ಚಂದ್ರಶೇಖರ್‌ ಭಟ್‌ ಇವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಅರಸಿನ ಕುಂಕುಮ ಕಾರ್ಯಕ್ರಮದ ಪ್ರಾಯೋಜಕರಾದ ಜಗನ್ನಾಥ ಪುತ್ರನ್‌ ಅವರು ಸ್ವಾಗತಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಂದಿರದ ಟ್ರಸ್ಟಿ ಎ. ವಿ. ಪ್ರಮೋದ್‌, ಸ್ಥಳೀಯ ಸಮಾಜ ಸೇವಕರಾದ ರಾಮಚಂದ್ರ ಉಚ್ಚಿಲ್‌, ವಿಶ್ವನಾಥ್‌ ಮೆಂಡನ್‌, ಜಯರಾಮ, ಭಾಯಂದರ್‌ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದದ ಕಾರ್ಯದರ್ಶಿ ಸುಧೀರ್‌ ಪುತ್ರನ್‌, ಮೀರಾರೋಡ್‌ ರಾಯರ ಬಳಗ ಭಜನ ಮಂಡಳಿಯ ಗಿರೀಶ್‌ ಕರ್ಕೇರ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಗೌರವಿಸಲಾಯಿತು. ಸ್ಥಳೀಯರಾದ ಮುಕುಂದ್‌ ಪುತ್ರನ್‌, ಚಿತ್ರಾನಂದ ಪುತ್ರನ್‌, ಬಾಲಕೃಷ್ಣ ಕಾಂಚನ್‌ ಮತ್ತು ಸರ್ವ ಸದಸ್ಯರು ಪಾಲ್ಗೊಂಡು ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕ ಜಗನ್ನಾಥ ಪುತ್ರನ್‌ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next