Advertisement

ಅರಂತೋಡು-ಮರ್ಕಂಜ ರಸ್ತೆ ಕೆಸರುಮಯ

12:20 AM Jun 27, 2019 | Team Udayavani |

ಅರಂತೋಡು: ಅರಂತೋಡು-ಅಂಗಡಿಮಜಲು- ಮರ್ಕಂಜ ರಸ್ತೆ ಕೆಸರುಮಯವಾಗಿದ್ದು ಜನರು ನಡೆದಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅರಂತೋಡು-ಕುಕ್ಕುಂಬಳ-ಅಂಗ ಡಿಮಜಲು ರಸ್ತೆಯ ಮೂಲಕ ಅತೀ ಹತ್ತಿರವಾಗಿ ಮರ್ಕಂಜ ಗ್ರಾಮವನ್ನು ಸೇರಬಹುದಾಗಿದೆ. ಮಾತ್ರವಲ್ಲದೆ ಅಂಗಡಿಮಜಲು-ಅಡ್ಕಬಳೆ -ಕುಕ್ಕುಂಬಳ ಬಳಿ ನೂರಾರು ಮನೆಗಳಿವೆ. ಈ ಭಾಗದ ಜನರು ಈ ರಸ್ತೆಯ ಮೂಲಕವೇ ಅರಂತೋಡು ಗ್ರಾಮವನ್ನು ಸಂಪರ್ಕ ಮಾಡಬೇಕಾಗಿದೆ. ಇದೀಗ ಅಂಗಡಿಮಜಲು ಬಳಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಪರಿಣಮಿಸಿದೆ. ಈ ರಸ್ತೆಯಲ್ಲಿ ನಡೆದಾಡಲು ಜನರು ನರಕಯಾತನೆ ಅನುಭವಿಸುವಂತಾಗಿದೆ.

ಕೆಸರಾದ ಮಣ್ಣು

ಅಂಗಡಿಮಜಲು ಸಮೀಪ ಬಲ್ನಾಡು ಹೊಳೆಗೆ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದ್ದು, ಈ ಸಂದರ್ಭ ರಸ್ತೆಗೆ ಸೇತುವೆ ಕಾಮಗಾರಿ ನಡೆಸುವವರು ಸುಮಾರು 200 ಮೀಟರ್‌ ಉದ್ದಕ್ಕೆ ಮಣ್ಣು ಹಾಕಿ ಸಮತಟ್ಟು ಮಾಡಿದ್ದರು. ಮಳೆ ಪ್ರಾರಂಭವಾದ ಕೂಡಲೇ ಮಣ್ಣು ಹಾಕಿದ ರಸ್ತೆಯ ಭಾಗ ಸಂಪೂರ್ಣ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದೆ.

ಹರಡಿಕೊಂಡಿವೆ ಜಲ್ಲಿ

Advertisement

ಕುಕ್ಕುಂಬಳ ಸಮೀಪ ರಸ್ತೆಯ ಡಾಮರು ಕಾಮಗಾರಿ ಕಿತ್ತು ಹೋಗಿ ಜಲ್ಲಿಕಲ್ಲುಗಳು ರಸ್ತೆಯದ್ದಕ್ಕೂ ಹರಡಿ ಕೊಂಡಿದ್ದು, ಇದರಲ್ಲಿ ವಾಹನ ಸಂಚರಿಸುವಾಗ ಜಲ್ಲಿಕಲ್ಲುಗಳು ವಾಹನದ ಚಕ್ರಗಳಿಗೆ ಸಿಲುಕಿ ಪಾದಚಾರಿಗಳ ಮೇಲೆ ಸಿಡಿಯುತ್ತಿವೆ. ಇದರಿಂದ ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಅಪಾಯ ಎದುರಾಗಿದೆ. ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಂಕ್ರೀಟ್ ರಸ್ತೆ ಮಾಡಿಕೊಡಿ

ಬಲ್ನಾಡ್‌ ಹೊಳೆಗೆ ಸೇತುವೆ ನಿರ್ಮಾಣ ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಸ್ತೆಗೆ ಮಣ್ಣು ಹಾಕಲಾಗಿದೆ. ಸೇತುವೆ ನಿರ್ಮಾಣ ಕೆಲಸ ವಹಿಸಿಕೊಂಡವರು ಈ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡಬೇಕು.
– ನೀಲಾವತಿ ಕೊಡಂಕೇರಿ ಅಧ್ಯಕ್ಷರು, ಅರಂತೋಡು ಗ್ರಾಮ ಪಂಚಾಯತ್‌

ಕ್ರಮ ಕೈಗೊಳ್ಳಿ

ಅರಂತೋಡು-ಅಂಗಡಿಮಜಲು-ಮರ್ಕಂಜ ರಸ್ತೆಯ ಅಂಗಡಿಮಜಲುವಿನಲ್ಲಿ ಸೇತುವೆ ಕೆಲಸದವರು ರಸ್ತೆಗೆ ಮಣ್ಣು ಹಾಕಿರುವ ಪರಿಣಾಮ ಈಗ ಮಳೆಗಾಲ ಆಗಿರುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಪಾದಚಾರಿಗಳು ಹಾಗೂ ವಾಹನ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
-ಆಶೀತ್‌ ಅರಂತೋಡು ಸ್ಥಳೀಯರು

•ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next