Advertisement

Aranthodu: ಕುಕ್ಕುಂಬಳ ಸೇತುವೆ ಶಿಥಿಲ; ಮರದ ದಿಮ್ಮಿಗಳು ಬಡಿದು ಪಿಲ್ಲರ್‌ಗಳಿಗೆ ಹಾನಿ

12:40 PM Sep 04, 2024 | Team Udayavani |

ಅರಂತೋಡು: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಕ್ಕುಂಬಳ ಮುಳುಗು ಸೇತುವೆ ಶಿಥಿಲಗೊಂಡಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ವರ್ಷ ಕುಕ್ಕುಂಬಳ ಮುಳುಗು ಸೇತುವೆ ಹಲವು ಬಾರಿ ಮುಳುಗಡೆಯಾಗಿದ್ದು ಸ್ಥಳೀಯರು ಭಾರೀ ಸಮಸ್ಯೆಗೊಳಗಾಗಿದ್ದಾರೆ.

Advertisement

ಈ ವರ್ಷ ಭಾರೀ ಮಳೆಗೆ ಸೇತುವೆಗೆ ಹಾನಿಯಾಗಿದ್ದು ಇನ್ನಷ್ಟು ಶಿಥಿಲಗೊಂಡಿದೆ. ಮೂರು ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಕುಕ್ಕುಂಬಳ ಹೊಳೆಗೆ ಸರ್ವ ಋತು ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ದಶಕಗಳೇ ಸಂದಿದೆ.

ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಮಂದಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿದೆ. ಮಳೆಗಾಲದಲ್ಲಿ ಹೊಳೆ ತುಂಬಿ ಹರಿದರೆ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಜನರಿಗೆ ಸಂಪರ್ಕ ಸಮಸ್ಯೆ ಎದುರಾಗುತ್ತದೆ. ಈ ರಸ್ತೆ ಮತ್ತು ಸೇತುವೆಯಲ್ಲಿ ಶಾಲಾ ವಾಹನ ಸೇರಿದಂತೆ ನೂರಕ್ಕೂ ಅಧಿಕ ವಾಹನಗಳು ದಿನವೂ ಓಡಾಡುತ್ತವೆ.

ಮುಳುಗು ಸೇತುವೆ ಶಿಥಿಲ
ನಾಲ್ಕು ದಶಕಗಳ ಹಿಂದೆ ಸ್ಥಳೀಯರು ಸೇರಿ ಖರ್ಚು ಮಾಡಿ ನಿರ್ಮಿಸಿದ ಈ ಮುಳುಗು ಸೇತುವೆ ಈಗ ಸಂಪೂರ್ಣ ಶಿಥಿಲಗೊಂಡಿದೆ. ಭಾರೀ ಮಳೆಗೆ ಧುಮುಕಿ ಬಂದ ನೆರೆ ನೀರಿನಿಂದ ಮರದ ದಿಮ್ಮಿಗಳು ಬಡಿದು ಸೇತುವೆಗೆ ಹಾನಿ ಸಂಭವಿಸಿದೆ. ಇದೀಗ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ದೊಡ್ಡ ಕೂಗು ಕೇಳಿ ಬರುತ್ತಿದೆ. ಈ ಹಿಂದೆ ಶಾಸಕರಿಗೆ ಹಾಗೂ ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಿಕ್ಕಿದ್ದು ಭರವಸೆ ಮಾತ್ರ ಎನ್ನುತ್ತಾರೆ ಸ್ಥಳೀಯರು.

ಸೇತುವೆಯಿಂದ ಉರುಳಿ ಬಿದ್ದ
ರಿಕ್ಷಾ ಸುಮಾರು ಹದಿನೈದು ದಿವಸಗಳ ಹಿಂದೆ ಸೇತುವೆಯಿಂದ ಕೆಳಗಡೆ ರಿಕ್ಷಾವೊಂದು ಉರುಳಿ ಬಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

ಸೇತುವೆ ಪ್ರಾಮುಖ್ಯ ಏನು?

  • ಈ ಸೇತುವೆ ದಕ್ಷಿಣ ಕನ್ನಡ, ಕೊಡಗು ಮತ್ತು ಕೇರಳದ ಪಾನತ್ತೂರು ಜಿಲ್ಲೆಗಳ ಸಂಪರ್ಕ ಕೊಂಡಿ.
  • ಆಲೆಟ್ಟಿ, ಬಡ್ಡಡ್ಕ, ಕಲ್ಲಪಳ್ಳಿ, ಕಮ್ಮಾಡಿ ಭಾಗದಿಂದ ಹಾಗೂ ಪೆರಾಜೆ ಭಾಗದಿಂದ ಸಂಚಾರಕ್ಕೆ ಅತೀ ಅಗತ್ಯವಾದ ಸೇತುವೆ ಇದು.
  • ಸ್ಥಳೀಯವಾಗಿ ಕುಕ್ಕುಂಬಳ, ದೇವಮೂಲೆ, ಅಂಜಿಕಾರು, ನೆಲಿcಲು, ಹೊಟ್ಟನಕಾನ, ಗೂಡಿಂಜ, ಬಡ್ಡಡ್ಕ, ಮಾರ್ಗವಾಗಿ ಕೇರಳದ ಪಾನತ್ತೂರಿಗೆ ಸಂಪರ್ಕ ಕಲ್ಪಿಸುತ್ತದೆ.
  • ಇನ್ನೊಂದು ಕಡೆಯಿಂದ ನೆಲಿcಲು ಮಾರ್ಗವಾಗಿ ಪಾಲಡ್ಕ, ಅರಂಬೂರಿಗೆ ಸಂಪರ್ಕ ಕಲ್ಪಿಸುತ್ತದೆ.
  • ಕುಕ್ಕುಂಬಳದಿಂದ ಕೊಡಗಿನ ಪೆರಾಜೆ ಗ್ರಾಮಕ್ಕೆ ಈ ಸೇತುವೆ ಮೇಲೆ ಸಾಗಬೇಕು.

ಶಾಸಕರಲ್ಲಿ ಗ್ರಾಪಂ ಮನವಿ
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಇತ್ತೀಚೆಗೆ ಕುಕ್ಕುಂಬಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸ್ಥಳೀಯರು ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ. ನಾನು ಅವರಿಗೆ ಇಲ್ಲಿಗೆ ಅಗತ್ಯ ಸೇತುವೆ ನಿರ್ಮಾಣ ಆಗಬೇಕು ಎಂದು ತಿಳಿಸಿದ್ದೇನೆ.
-ವೀಣಾ ವಸಂತ, ಅಧ್ಯಕ್ಷೆ ಗ್ರಾಪಂ ಆಲೆಟ್ಟಿ

ಸೇತುವೆ ಅಗತ್ಯ
ಕುಕ್ಕುಂಬಳ ಸೇತುವೆ ತುಂಬಾ ಶಿಥಿಲಗೊಂಡಿದೆ. ಈ ಸೇತುವೆ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ. ಕೆಲವು ದಿನಗಳ ಹಿಂದೆ ರಿಕ್ಷಾವೊಂದು ಸೇತುವೆಯಿಂದ ಕೆಳಗಡೆ ಬಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ಸೇತುವೆ ಮೂಲಕ ಶಾಲಾ ವಾಹನ ಸೇರಿದಂತೆ ನೂರಾರು ವಾಹನಗಳು ಸಂಚಾರಿಸುತ್ತವೆ. ಇಲ್ಲಿಗೆ ನೂತನ ಸೇತುವೆ ನಿರ್ಮಾಣ ಅಗತ್ಯ ಇದೆ.
-ಅಶೋಕ ಪೀಚೆ, ಗ್ರಾಮಸ್ಥರು

ತೇಜೇಶ್ವರ್ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next