Advertisement

ಶತಮಾನೋತ್ಸವ ಸಂಭ್ರಮದಲ್ಲಿ ಅರಂತೋಡು ಹಿರಿಯ ಪ್ರಾಥಮಿಕ ಶಾಲೆ

06:30 PM Jun 05, 2018 | Karthik A |

ಬೆಳ್ಳಾರೆ: ಅರಂತೋಡು ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಎದುರು ನೋಡುತ್ತಿದೆ. ಈ ಶಾಲೆ ಸಾಂಸ್ಕೃತಿಕ, ಕ್ರೀಡಾ ಸಾಧನೆಯಿಂದ ತಾಲೂಕು ಮಟ್ಟದಲ್ಲಿ ಗಮನ ಸೆಳೆದಿದ್ದು, ಉತ್ತಮ ಶಿಕ್ಷಕ, ಎಸ್‌ಡಿಎಂಸಿ ವೃಂದವನ್ನು ಹೊಂದಿದೆ. 162 ವಿದ್ಯಾರ್ಥಿಗಳು ಪ್ರಾಥಮಿಕ ತರಗತಿಗಳಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಉನ್ನತೀಕರಿಸಿದ ಶಾಲೆಯಾದರೂ ಪದವೀಧರ ಶಿಕ್ಷಕರ ಕೊರತೆಯಿಂದ ಒಂದು ವರ್ಷ ಮಾತ್ರ ತರಗತಿ ನಡೆಸಲು ಸಾಧ್ಯವಾಗಿದೆ. ಇಲ್ಲಿ ಒಟ್ಟು 8 ಮಂಜೂರಾತಿ ಶಿಕ್ಷಕರ ಹುದ್ದೆ ಇದ್ದು, ಈಗ ಆರು ಶಿಕ್ಷಕರು ಮಾತ್ರ ಇದ್ದಾರೆ. ಎಂಟು ವರ್ಷಗಳಿಂದ ಇಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಬಿದ್ದಿದೆ. ದೈಹಿಕ ಶಿಕ್ಷಣ ಶಿಕ್ಷಕಿ ಸರಸ್ವತಿ ಅವರು ಪ್ರಭಾರ ಮುಖ್ಯ ಶಿಕ್ಷಕ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

Advertisement

ಬೇಡಿಕೆಗಳು
ಇಲ್ಲಿಯ 6ನೇ ತರಗತಿ ಮತ್ತು ಕಂಪ್ಯೂಟರ್‌ ಕೊಠಡಿ ಇರುವ ಆರ್‌ಸಿಸಿ ಕಟ್ಟಡ ಸೋರುತ್ತಿದೆ. ವಾಚನಾಲಯಕ್ಕೆ ಪೀಠೊಪಕರಣದ ಕೊರತೆಯಿದೆ. ಮುಖ್ಯ ಶಿಕ್ಷಕರಿಲ್ಲ. ಕ್ರೀಡಾಂಗಣಕ್ಕೆ ಆವರಣ ಗೋಡೆ ಇಲ್ಲ. ಸೋರುತ್ತಿರುವ ಆರ್‌.ಸಿ.ಸಿ. ಕಟ್ಟಡಕ್ಕೆ ತಗಡಿನ ಮೇಲ್ಛಾವಣಿ ನಿರ್ಮಿಸಬೇಕಿದೆ. ಶಾಲೆಯ ಬಳಿರುವ ಕ್ರೀಡಾಂಗಣಕ್ಕೆ ಸಂಪೂರ್ಣ ಆವರಣ ಗೋಡೆ ಇಲ್ಲ. ಇದಕ್ಕೆ ಸಂಪೂರ್ಣ ಆವರಣ ಗೋಡೆ ಹಾಗೂ ಶಾಲೆಯಿಂದ 150 ಮೀಟರ್‌ ಅಂತರದಲ್ಲಿ ಇರುವ ಕ್ರೀಡಾಂಗಣಕ್ಕೆ ಆವರಣ ಗೋಡೆ ನಿರ್ಮಾಣ ಮಾಡಬೇಕಾಗಿದೆ.ಬಿಸಿಯೂಟದ ಸಹಭೋಜನ ಕೊಠಡಿ, ಕಲಿಕೋದ್ಯಾನವನ ನಿರ್ಮಾಣದ ಜತೆಗೆ ವೃತ್ತಿ ಶಿಕ್ಷಕರ ನೇಮಕ ಆಗಬೇಕಾಗಿದೆ. ವಾಚನಾಲಯ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೆ ನೂತನ ಕಟ್ಟಡ, ಪೀಠೊಪಕರಣ ಒದಗಿಸಬೇಕಿದೆ. ವಿಷಯ ಶಿಕ್ಷಕರು ಬೇಕು. ಗುಮಾಸ್ತ, ಜವಾನರ ನೇಮಕವಾಗಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ. 

ಹೆಚ್ಚು ದಾಖಲಾತಿ
ಪ್ರಸ್ತುತ ಶೈಕ್ಷಣಿಕ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಆಗಿದ್ದಾರೆ. ಕಳೆದ ವರ್ಷ 11 ವಿದ್ಯಾರ್ಥಿಗಳು ದಾಖಲುಗೊಂಡರೆ, ಈ ವರ್ಷ 19 ವಿದ್ಯಾರ್ಥಿಗಳು ಶಾಲೆಗೆ ಸೇರಿದ್ದಾರೆ. 2019ನೇ ಇಸವಿಯಲ್ಲಿ ಶಾಲೆಯಲ್ಲಿ ಶತಮಾನೋತ್ಸವ ಆಚರಣೆ ನಡೆಸುವ ಬಗ್ಗೆ ಈಗಾಗಲೇ ಸಮಿತಿ ರಚನೆಗೊಂಡಿದೆ.

ಶಾಲೆಗೆ ಭೇಟಿ ನೀಡುವೆ
ಅರಂತೋಡು ಸರಕಾರಿ ಉನ್ನತೀಕರಿಸಿದ ಶಾಲೆ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿರುವುದು ತಿಳಿದಿದೆ. ಇಲ್ಲಿಯ ಸಮಸ್ಯೆಯ ಬಗ್ಗೆ ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿ, ಇಲಾಖೆಗೆ ಬರೆಯುತ್ತೇನೆ.
– ಲಿಂಗರಾಜ್‌ ಅರಸ್‌, ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ

ಕಟ್ಟಡ ಸೋರುತ್ತಿದೆ
ಶಾಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಮುಖ್ಯವಾಗಿ ಆರ್‌ಸಿಸಿ ಕಟ್ಟಡ ಸೋರುತ್ತಿದ್ದು, ಇದಕ್ಕೆ ತಗಡಿನ ಮೇಲ್ಛಾವಣಿಯ ನಿರ್ಮಾಣ, ಕ್ರೀಡಾಂಗಣಕ್ಕೆ ಆವರಣ ಗೋಡೆ, ಬಿಸಿಯೂಟ ಭೋಜನ ಕೊಠಡಿ ಸಹಿತ ಕೆಲವು ಮುಖ್ಯ ಬೇಡಿಕೆಗಳಿವೆ.
– ವೆಂಕಟ್ರಮಣ ಮೇರ್ಕಜೆ, ಎಸ್‌.ಡಿ.ಎಂ.ಸಿ. ಅಧ್ಯಕ್ಷ

Advertisement

— ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next